ಸಾರಾಂಶ
ಹೂವಿನಹಡಗಲಿ: ತಾಲೂಕಿನ ತುಂಗಭದ್ರಾ ನದಿ ತೀರ ಸಿಂಗಟಾಲೂರು ಏತ ನೀರಾವರಿ ಬ್ಯಾರೇಜ್, ಕೆಳ ಭಾಗದ ಮದಲಗಟ್ಟಿ ಸೇರಿದಂತೆ ಇತರೆ ಕಡೆಗಳಲ್ಲಿ ತುಂಗಭದ್ರಾ ನದಿ ನೀರು ಹಸಿರು ಬಣ್ಣಕ್ಕೆ ತಿರುಗಿದೆ.
ನದಿ ನೀರು ಕುಡಿವ ನೀರಿನ ಜಲಮೂಲವಾಗಿದೆ. ಎಲ್ಲ ಕಡೆಗೂ ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ ನದಿ ನೀರೇ ಪೂರೈಕೆಯಾಗುತ್ತಿದೆ. ಆದರೆ ಈಗ ಹಸಿರು ಬಣ್ಣಕ್ಕೆ ನೀರು ತಿರುಗಿರುವ ಹಿನ್ನೆಲೆಯಲ್ಲಿ ಜನ, ನೀರು ಕುಡಿಯಲು ಹಿಂದೇಟು ಹಾಕುವ ಜತೆಗೆ ಎಲ್ಲರೂ ಶುದ್ಧ ಕುಡಿವ ನೀರಿನ ಮೊರೆ ಹೋಗುತ್ತಿದ್ದಾರೆ.ತಾಲೂಕಿನ ರಾಜವಾಳ, ಹೊನ್ನೂರು, ಕೊಟ್ನಿಕಲ್ಲು, ಹೊನ್ನನಾಯಕನಹಳ್ಳಿ, ಕೊಂಬಳಿ, ಮದಲಗಟ್ಟಿ, ಕಂದಗಲ್ಲು, ಸೋವೇನಹಳ್ಳಿ, ಪುರ, ಹಕ್ಕಂಡಿ ಸೇರಿದಂತೆ ಇತರೆ ಗ್ರಾಮಗಳಿಗೆ ನದಿ ನೀರೇ ಆಧಾರವಾಗಿದೆ. ಆದರೆ ಹಸಿರು ಬಣ್ಣಕ್ಕೆ ತಿರುಗುವ ಜತೆಗೆ ಎಲ್ಲ ಕಡೆಗೂ ಹಸಿರು ಪಾಚಿ ಇದೆ. ಇದರಿಂದ ನೀರು ದುರ್ನಾತ ಬೀರುತ್ತಿದೆ. ಇಂತಹ ನೀರನ್ನು ಜನ ಬಳಕೆ ಮಾಡಲು ಹಾಗೂ ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಂಡು ಪರ್ಯಾಯ ವ್ಯವಸ್ಥೆ ಮಾಡಬೇಕೆಂಬ ಕೂಗು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.
ಜಿಲ್ಲಾಧಿಕಾರಿ ಆದೇಶದ ಮೇರಿಗೆ ಹೂವಿನಹಡಗಲಿ ಪಟ್ಟಣಕ್ಕೆ ಸಿಂಗಾಟಾಲೂರು ಏತ ನೀರಾವರಿ ಬ್ಯಾರೇಜ್‌ನ ಹಿನ್ನೀರಿನಿಂದ ನೀರು ಪೂರೈಕೆಯಾಗುತ್ತಿದ್ದು, ನದಿಗೆ ಪುರಸಭೆ ಮುಖ್ಯಾಧಿಕಾರಿ ಇಮಾಮಸಾಹೇಬ್ ಭೇಟಿ ನೀಡಿದ್ದಾರೆ. ಈಗಾಗಲೇ ನದಿ ನೀರನ್ನು ಪ್ರಯೋಗಾಲಯಕ್ಕೆ ಕಳಿಸಿದ್ದು, ಯಾವುದೇ ತೊಂದರೆ ಇಲ್ಲ ಎಂಬ ವರದಿ ಬಂದಿದೆ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.ಆದರೆ ಈವರೆಗೂ ತಾಪಂ ಇಒ ಸಂಬಂಧಪಟ್ಟ ಡಿಒಗಳಿಂದ ನದಿ ನೀರಿನ ಗುಣಮಟ್ಟ ಪರೀಕ್ಷಿಸಿ ನೀರು ಪೂರೈಕೆ ಮಾಡಬೇಕಿದೆ. ಆವರೆಗೂ ಅಧಿಕಾರಿಗಳು ನದಿ ತೀರಕ್ಕೆ ಭೇಟಿ ನೀಡಿಲ್ಲ. ಯಾವುದೇ ಕ್ರಮ ಕೈಗೊಂಡಿಲ್ಲ. ಅದೇ ನೀರನ್ನೇ ಗ್ರಾಮಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನದಿ ತೀರದ ಗ್ರಾಮಸ್ಥರು ಆಗ್ರಹಿಸಿದ್ದಾರೆ.