ನೀರು ಸರಬರಾಜಿಗೆ ಬೆಳ್ಳಟ್ಟಿ, ಶಿರಹಟ್ಟಿ ಮಧ್ಯೆ ಅಳವಡಿಸಿದ್ದ ಪೈಪ್‌ಗಳು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುವ ವೇಳೆ ಕಿತ್ತು ಹಾಳಾಗಿದ್ದು, ಈ ಕಾರಣದಿಂದ ಕಳೆದ 8- 10 ವರ್ಷಗಳಿಂದ ಪಟ್ಟಣಕ್ಕೆ ತುಂಗಭದ್ರಾ ನದಿ ನೀರು ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಮಹೇಶ ಛಬ್ಬಿ

ಗದಗ: ತಾಲೂಕಿನ ಮುಳಗುಂದ ಪಟ್ಟಣಕ್ಕೆ ಕಳೆದ ಹಲವು ವರ್ಷಗಳಿಂದ ತುಂಗಭದ್ರಾ ನದಿ ನೀರು ಸ್ಥಗಿತಗೊಂಡಿದ್ದು, ಇಲ್ಲಿನ ಜನತೆಗೆ ಕೊಳವೆ ಬಾವಿಯ ಫ್ಲೋರೈಡ್ ನೀರೇ ಗತಿಯಾಗಿದೆ.ಜನತೆಯ ಬಹುದಿನಗಳ ಬೇಡಿಕೆಯಾಗಿರುವ ತುಂಗಭದ್ರಾ ನದಿ ನೀರು ಕನಸಾಗಿಯೇ ಉಳಿದಿದೆ. 2009ರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಶಿರಹಟ್ಟಿ, ಮುಳಗುಂದ ಪಟ್ಟಣ ಪಂಚಾಯಿತಿಗಳ ಸಹಯೋಗದಲ್ಲಿ ಅಂದಾಜು ₹33.50 ಕೋಟಿ ವೆಚ್ಚದಲ್ಲಿ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡಿತ್ತು. 2015ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನದಿ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿದ್ದರು. 60 ಕಿಮೀ ದೂರದ ಹೊಳೆಇಟಗಿ ಜಾಕ್‌ವೆಲ್ ಮೂಲಕ ನದಿ ನೀರು ಸರಬರಾಜು ಆಗುತ್ತಿತ್ತು.

ಆರಂಭದಲ್ಲಿ ನಿರ್ವಹಣೆ ಉತ್ತಮವಾಗಿ ನಡೆದು ನಂತರದಲ್ಲಿ ತುಂಗಭದ್ರಾ ನದಿ ನೀರು ಬಳಸುತ್ತಿರುವ ಗ್ರಾಮಗಳಾದ ಸುಗ್ನಳ್ಳಿ, ಬನ್ನಿಕೊಪ್ಪ, ಬೆಳ್ಳಟ್ಟಿ, ಹೊಸೂರು, ಛಬ್ಬಿ, ರಣತೂರು ಸೇರಿದಂತೆ ಇತರೆ ಗ್ರಾಮಗಳು ತಮ್ಮ ಪಾಲಿನ ನೀರಿನ ವೆಚ್ಚವನ್ನು ಪಾವತಿಸದ ಕಾರಣ 2017ರಿಂದ ನಿರ್ವಹಣೆಗೆ ಹಣವಿಲ್ಲದೇ ನದಿ ನೀರು ಸರಬರಾಜು ಸ್ಥಗಿತಗೊಂಡ ಹಿನ್ನೆಲೆ ಕೋಟ್ಯಂತರ ರು. ವೆಚ್ಚದಲ್ಲಿ ಅಳವಡಿಸಿದ್ದ ಜಲ ಶುದ್ಧೀಕರಣ ಯಂತ್ರಗಳು ಹಾಳಾಗಿದ್ದವು.ನೀರು ಸರಬರಾಜಿಗೆ ಬೆಳ್ಳಟ್ಟಿ, ಶಿರಹಟ್ಟಿ ಮಧ್ಯೆ ಅಳವಡಿಸಿದ್ದ ಪೈಪ್‌ಗಳು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುವ ವೇಳೆ ಕಿತ್ತು ಹಾಳಾಗಿದ್ದು, ಈ ಕಾರಣದಿಂದ ಕಳೆದ 8- 10 ವರ್ಷಗಳಿಂದ ಪಟ್ಟಣಕ್ಕೆ ತುಂಗಭದ್ರಾ ನದಿ ನೀರು ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಫ್ಲೋರೈಡ್ ನೀರು: ತುಂಗಭದ್ರಾ ನದಿ ನೀರು ಸರಬರಾಜು ಸ್ಥಗಿತಗೊಂಡ ನಂತರ ಮುಳಗುಂದ ಪಟ್ಟಣದ ಜನತೆಗೆ ಕುಡಿಯುವ ನೀರಿಗೆ ಕೊಳವೆ ಬಾವಿಗಳೇ (ಬೋರವೆಲ್) ಆಧಾರವಾಗಿವೆ. ಪಪಂನಿಂದ ಕೊಳವೆ ಬಾವಿಗಳ ಮೂಲಕ 3- 4 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಇಲ್ಲಿಯ ಜನತೆ ಅನಿವಾರ್ಯವಾಗಿ ಕಳೆದ 8- 10 ವರ್ಷಗಳಿಂದ ಫ್ಲೋರೈಡ್‌ ಮಿಶ್ರಿತ ನೀರನ್ನೇ ಕುಡಿಯುತ್ತಿದ್ದಾರೆ. ಬೇಸಿಗೆ ದಿನಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾದರೆ, ಕುಡಿಯುವ ನೀರಿಗೆ ಸಮಸ್ಯೆ ಎದರಾಗಬಹುದು.

ತ್ವರಿತಗತಿಯಲ್ಲಿ ಕಾಮಗಾರಿ: ತುಂಗಭದ್ರಾ ನದಿ ನೀರು ಸರಬರಾಜು ಮಾಡುವ ಜಲ ಶುದ್ಧೀಕರಣ ಯಂತ್ರ ಸೇರಿದಂತೆ ಇತರೆ ಯಂತ್ರಗಳ ದುರಸ್ತಿ ಕಾರ್ಯ ಅಮೃತ 2.0 ಯೋಜನೆಯಡಿ ಸಂಪೂರ್ಣವಾಗಿ ಮುಗಿದಿದೆ. ಶಿರಹಟ್ಟಿ- ಬೆಳ್ಳಟ್ಟಿ ನಡುವೆ ರಸ್ತೆ ಕಾಮಗಾರಿ ವೇಳೆ ಪೈಪ್‌ಗಳು ಒಡೆದಿದ್ದು, ಅವುಗಳ ದುರಸ್ತಿ ಕಾರ್ಯವನ್ನು ಕೆಶಿಫ್‌ನವರು ನಡೆಸಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ತಿಳಿಸಿದರು.