ಸಾರಾಂಶ
74 ಕೆರೆಗಳಿಗೆ ₹670 ಕೋಟಿ ವೆಚ್ಚದಲ್ಲಿ ಕೆರೆ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಂಡಿದೆ.
ಕೂಡ್ಲಿಗಿ: ತಾಲೂಕಿನ 74 ಕೆರೆಗಳಿಗೆ ₹670 ಕೋಟಿ ವೆಚ್ಚದಲ್ಲಿ ಕೆರೆ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಂಡಿದೆ. ಈಗಾಗಲೇ ಕೆರೆಗಳಿಗೆ ನೀರು ಹರಿಸಲು ಪ್ರಾಯೋಗಿಕವಾಗಿ ಅಧಿಕಾರಿಗಳು ಮುಂದಾಗಿದ್ದು, ನ.9ರಂದು ತಾಲೂಕಿನ ಬರಡು ಕೆರೆಗಳಿಗೆ ತುಂಗಾಭದ್ರಾ ನದಿಯಿಂದ ಹರಿದು ಬರಲಿದೆ.
ತಾಲೂಕಿನ ಪಾಲಯ್ಯನಕೋಟೆ ಗ್ರಾಮದ ಹತ್ತಿರ ಈ ಮಹತ್ವಾಕಾಂಕ್ಷೆ ಯೋಜನೆಯ ಭೂಮಿಪೂಜೆ 2021ರಲ್ಲಿ ನಡೆಯುವ ಮೂಲಕ ತಾಲೂಕಿನ ಬರದ ಹಣೆಪಟ್ಟಿ ಕಳಚಲು ಮುನ್ನುಡಿ ಬರೆಯಲಾಯಿತು. 2023ರಲ್ಲಿಯೇ ಈ ಯೋಜನೆ ಮುಗಿಯಬೇಕಿತ್ತು. ರೈತರು ಪೈಪ್ ಲೈನ್ ಹಾಕುವಾಗ ಅಡತಡೆಗಳು, ಕಾನೂನು ತೊಡಕುಗಳು ಬಂದಿದ್ದರಿಂದ 2 ವರ್ಷ ತಡವಾಗಿ ಕಾಮಗಾರಿ ಮುಗಿದಿದೆ. ಇದರ ಪ್ರತಿಫಲವಾಗಿ ಈಗ 74 ಕೆರೆಗಳು ಸೇರಿದಂತೆ ಇನ್ನು 6 ಕೆರೆಗಳು ಸೇರಿ ಒಟ್ಟು 80 ಕೆರೆಗಳಿಗೆ ನೀರು ತಿಂಗಳೊಳಗೆ ಹರಿಯಲಿದೆ.ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೆರೆ ನೀರು ಕಾಮಗಾರಿ ಉದ್ಘಾಟನೆಗೆ ನ.9ರ ದಿನಾಂಕವನ್ನು ನಿಗದಿ ಮಾಡಿರುವುದರಿಂದ ಶಾಸಕರು ಉತ್ಸಾಹದ ಚಿಲುಮೆಯಂತೆ ಸ್ಥಳ ನಿಗದಿ ಮಾಡುವ ತರಾತುರಿಯಲ್ಲಿದ್ದಾರೆ.
ಬೇಸಿಗೆ ಬಂತೆಂದರೆ ತಾಲೂಕಿನಲ್ಲಿ ಗುಬ್ಬಿ ಕುಡಿಯಲೂ ನೀರು ಇರುವುದಿಲ್ಲ. ಅಂತರ್ಜಲವಂತೂ 600 ಅಡಿಗೂ ಹೆಚ್ಚು ಪಾತಾಳಕ್ಕೆ ತಲುಪಿದೆ. ಜನ- ಜಾನುವಾರು ಕುಡಿಯುವ ನೀರಿಗೆ ಪರಿತಪಿಸಬೇಕಿತ್ತು. ಕುಡಿಯುವ ನೀರಿಗೆ ಇಲ್ಲಿ ಕೊಳವೆಬಾವಿಗಳೇ ಆಧಾರ. ಅವುಗಳಲ್ಲಿ ಅಪಾಯಮಟ್ಟದ ಪ್ಲೋರೈಡ್ ಅಂಶವಿದ್ದುದರಿಂದ ಈ ಹಿಂದೆ ಶಾಸಕರಾಗಿದ್ದ ಎನ್.ವೈ. ಗೋಪಾಲಕೃಷ್ಣ ದೂರದೃಷ್ಟಿ, ಜನಪರ ಕಾಳಜಿ, ರಾಜ್ಯ ಸರ್ಕಾರದ ಸ್ಪಂದನೆ ಫಲವಾಗಿ ₹670 ಕೋಟಿ ವೆಚ್ಚದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಕ್ಯಾಬಿನೆಟ್ 2021ರ ಜೂನ್ 25ರಂದು ಅಂದಿನ ಬಿಜೆಪಿ ಸರ್ಕಾರ ಆಡಳಿತಾತ್ಮಕ ಅನುಮೋದನೆ ದೊರಕಿತ್ತು. ರಾಜ್ಯ ಜಲಸಂಪನ್ಮೂಲ ಇಲಾಖೆ ಎರಡು ಕಂಪನಿಗಳಿಗೆ ಗುತ್ತಿಗೆ ನೀಡಿತ್ತು. ಬಿಜೆಪಿ ಸರ್ಕಾರವಿದ್ದಾಗಲೇ ಈ ಕಾಮಗಾರಿ ಮುಗಿಯಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಮುಂದುವರಿದಾಗ ಶೇ.15 ಕಾಮಗಾರಿ ಬಾಕಿ ಇತ್ತು. ಅದನ್ನು ಈಗಿನ ಕಾಂಗ್ರೆಸ್ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಕಾಳಜಿ ತೆಗದುಕೊಂಡು ಕಾಮಗಾರಿ ಕೊನೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮೊದಲ ಹಂತದಲ್ಲಿ ಗಜಾಪುರ ಸಮೀಪದ ದೇವಲಾಪುರ ಕೆರೆ ಸೇರಿದಂತೆ 16 ಕೆರೆಗಳಿನಗೆ ನೀರನ್ನು ಹರಿಸಲಾಗುತ್ತಿದ್ದು ಎರಡನೇ ಹಂತದಲ್ಲಿ ಪಾಲಯ್ಯನಕೋಟೆ ಕೆರೆಯಿಂದ 58 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ ನ.9ರಂದು ಚಾಲನೆ ದೊರೆಯಲಿದ್ದು ಕೂಡ್ಲಿಗಿ ತಾಲೂಕು ಸಂಪೂರ್ಣ ಹಸಿರುಮಯವಾಗಲಿದ್ದು ಬರದ ನಾಡಿನ ರೈತರ ಮೊಗದಲ್ಲಿ ಸಂತಸದ ನಗೆ ಮೂಡಲಿದೆ.
ಕೆರೆಗಳಲ್ಲಿ ನೀರು ತುಂಬಿದರೆ ಇಲ್ಲಿಯ ರೈತರ ಕೊಳವೆಬಾವಿಗಳಲ್ಲಿ ನೀರು ಚಿಮ್ಮುವುದರ ಮೂಲಕ ಪ್ಲೋರೈಡ್ ಮುಕ್ತ ನೀರು ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನ.9ರಂದು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎನ್ನುತ್ತಾರೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್.