ನೀರು ಶುದ್ಧೀಕರಣ ಘಟಕ ನಿರ್ಮಾಣವಾಗಿ ಅಮೃತ ಯೋಜನೆ 2 ಮೂಲಕ ಮನೆ ಮನೆಗೆ ಮೀಟರ್ ಅಳವಡಿಸುವ ಕಾರ್ಯವೂ ಶೇ.90 ರಷ್ಟು ಪೂರ್ಣಗೊಂಡಿದೆ.

ಸೋಮರಡ್ಡಿ ಅಳವಂಡಿ ಕೊಪ್ಪಳ

ಅಂತು, ಇಂತು ಭಾಗ್ಯನಗರ ಪಟ್ಟಣಕ್ಕೆ ತುಂಗಭದ್ರಾ ನೀರು ಪೂರೈಕೆ ಮಾಡಲು ಪಪಂ ಮುಂದಾಗಿದ್ದು, ಅಮೃತ್ 2 ಯೋಜನೆಯಡಿ ಆಗಸ್ಟ್ ವೇಳೆಗೆ ತುಂಗಭದ್ರಾ ನೀರು ದಿನದ 24 ಗಂಟೆಯೂ ಪೂರೈಕೆಯಾಗಲಿದೆ.

ಕೊಪ್ಪಳ ಮತ್ತು ಭಾಗ್ಯನಗರಕ್ಕೆ 3 ಫೇಸ್ ಯೋಜನೆಯಲ್ಲಿ ತುಂಗಭದ್ರಾ ನದಿಯಿಂದ ನೀರು ತರಲಾಗಿದ್ದು, ಈಗಾಗಲೇ ಯೋಜನೆ ಪೂರ್ಣಗೊಂಡಿದೆ. ಇದರಲ್ಲಿ ಭಾಗ್ಯನಗರಕ್ಕೆ ಪ್ರತ್ಯೇಕವಾಗಿ ಯೋಜನೆ ರೂಪಿಸಿದ್ದು, ಗಂಗಾಧರ ಲೇಔಟ್ ನಲ್ಲಿ ಶುದ್ಧೀಕರಣ ಘಟಕದ ಮೂಲಕ ಭಾಗ್ಯನಗರಕ್ಕೆ ತುಂಗಭದ್ರಾ ನೀರು ಪೂರೈಕೆಯಾಗಲಿದೆ.

ನೀರು ಶುದ್ಧೀಕರಣ ಘಟಕ ನಿರ್ಮಾಣವಾಗಿ ಅಮೃತ ಯೋಜನೆ 2 ಮೂಲಕ ಮನೆ ಮನೆಗೆ ಮೀಟರ್ ಅಳವಡಿಸುವ ಕಾರ್ಯವೂ ಶೇ.90 ರಷ್ಟು ಪೂರ್ಣಗೊಂಡಿದೆ.

107 ಕಿಮೀ ಪೈಪಲೈನ್ ಕಾಮಗಾರಿ ಪೈಕಿ 100 ಕಿಮೀ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೇನು ಮನೆಗೆ ಸಂಪರ್ಕ ಕಲ್ಪಿಸುವ ಕಾರ್ಯವೂ ಭರದಿಂದ ಸಾಗಿದೆ.

2055ರ ವೇಳೆಗೆ ಭಾಗ್ಯನಗರ ವ್ಯಾಪ್ತಿಯಲ್ಲಿ ಬರೋಬ್ಬರಿ 55 ಸಾವಿರ ಜನಸಂಖ್ಯೆಯಾಗುವ ಅಂದಾಜು ಆಧಾರದಲ್ಲಿಯೇ ಯೋಜನೆ ರೂಪಿಸಲಾಗಿದೆ. ಯೋಜನೆಯ ಪ್ರಕಾರ ಪ್ರತಿಯೊಬ್ಬರಿಗೂ 135 ಲೀಟರ್ ಪ್ರತಿ ದಿನಕ್ಕೆ ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಪಂಪಸೆಟ್ ಸಹಾಯ ಇಲ್ಲದೆ ನೇರವಾಗಿ ನಲ್ಲಿಯ ಮೂಲಕ ಮೇಲ್ ಮಹಡಿಗೂ ನೀರು ಪೂರೈಕೆ ಮಾಡುವ ಪ್ರೆಶರ್ ಅಳವಡಿಸಲಾಗಿದೆ.

ಭಾಗ್ಯನಗರಕ್ಕೆ ತುಂಗಭದ್ರಾ ನೀರು ಆಗಸ್ಟ್ ಮೊದಲ ವಾರದಲ್ಲಿ ಪೂರೈಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಈ ನಡುವೆ ಜೋನ 1, 2 ಕ್ಕೆ ಜೂನ್ ಅಥವಾ ಜುಲೈ ತಿಂಗಳಲ್ಲಿಯೇ ಪೂರೈಕೆ ಮಾಡುವ ಗುರಿ ಹೊಂದಲಾಗಿದೆ. ಜೂನ್, ಜುಲೈ ವೇಳೆಗೆ ಶೇ.70 ರಷ್ಟು ಮನೆಗಳಿಗೆ ತುಂಗಭದ್ರಾ ನೀರು ಪೂರೈಕೆ ಮಾಡುವ ಪ್ರಯತ್ನ ನಡೆದಿದೆ.

ಮೀಟರ್ ಅಳವಡಿಕೆಯಿಂದ ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಜನರ ಅನುಕೂಲಕ್ಕಾಗಿ ಭಾಗ್ಯನಗರ ಪಪಂ ಸೂಕ್ತ ಕ್ರಮ ವಹಿಸಲು ಮುಂದಾಗಿದೆ. ಮೀಟರ್ ಅಳವಡಿಕೆ ಮಾಡಿದರೂ ಸಹ ಎಷ್ಟೇ ನೀರು ಬಳಕೆ ಮಾಡಿದರೂ ತಿಂಗಳ ಬಿಲ್ ಪಾವತಿ ಮಾಡುವಂತೆ ಪಪಂನಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದು ಅಧ್ಯಕ್ಷ ರಮೇಶ ಹ್ಯಾಟಿ ತಿಳಿಸಿದ್ದಾರೆ.

ಭಾಗ್ಯನಗರಕ್ಕೆ ಇದುವರೆಗೂ ತುಂಗಭದ್ರಾ ನೀರು ಬಂದೇ ಇಲ್ಲ. ಹೀಗಾಗಿ, ಈಗ ಭಾಗ್ಯನಗರಕ್ಕೆ ಪ್ರತ್ಯೇಕವಾಗಿ ತುಂಗಭದ್ರಾ ನೀರು ಪೂರೈಕೆ ಮಾಡುವ ಯೋಜನೆ ಜಾರಿಯಾಗಿ ಜೂನ್, ಜುಲೈಗೆ ಶೇ.50-70 ರಷ್ಟು ಮನೆಗಳಿಗೆ ಹಾಗೂ ಆಗಸ್ಟ್ ವೇಳಗೆ ಶೇ.100 ರಷ್ಟು ಮನೆಗಳಿಗೆ ನೀರು ಪೂರೈಕೆ ಮಾಡಲಾಗುವುದು ಎಂದು ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ ತಿಳಿಸಿದ್ದಾರೆ.