ದಶಕದಲ್ಲೇ ಒಣಗಿದ ತುಂಗಭದ್ರೆ, ಜಲಚರಗಳಿಗೂ ಸಂಚಕಾರ

| Published : Mar 24 2024, 01:36 AM IST

ದಶಕದಲ್ಲೇ ಒಣಗಿದ ತುಂಗಭದ್ರೆ, ಜಲಚರಗಳಿಗೂ ಸಂಚಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು. ಮಧ್ಯ ಕರ್ನಾಟಕದ ಹಾವೇರಿ, ಗದಗ, ದಾವಣಗೆರೆ, ವಿಜಯನಗರ, ಚಿತ್ರದುರ್ಗ ಪಂಚ ಜಿಲ್ಲೆಗಳ ಜೀವನದಿ ಎಂದು ಕರೆಯಿಸಿಕೊಂಡಿರುವ ತುಂಗಭದ್ರಾ ನದಿಯು ಬತ್ತಿ ಬರಿದಾಗಿ ಇಂದಿಗೆ ೧೪ ದಿನಗಳು ಗತಿಸಿವೆ.

ರಾಣಿಬೆನ್ನೂರು: ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು. ಮಧ್ಯ ಕರ್ನಾಟಕದ ಹಾವೇರಿ, ಗದಗ, ದಾವಣಗೆರೆ, ವಿಜಯನಗರ, ಚಿತ್ರದುರ್ಗ ಪಂಚ ಜಿಲ್ಲೆಗಳ ಜೀವನದಿ ಎಂದು ಕರೆಯಿಸಿಕೊಂಡಿರುವ ತುಂಗಭದ್ರಾ ನದಿಯು ಬತ್ತಿ ಬರಿದಾಗಿ ಇಂದಿಗೆ ೧೪ ದಿನಗಳು ಗತಿಸಿವೆ.

ವರ್ಷದ ಎಲ್ಲಾ ದಿನಗಳಲ್ಲಿಯೂ ಹರಿಯುತ್ತಿದ್ದ ತುಂಗಭದ್ರಾ ನದಿಯು ತನ್ನ ಕಾರ್ಯವನ್ನು ನಿಲ್ಲಿಸಿರುವುದು ಕಳೆದ ೧೦ ವರ್ಷಗಳಲ್ಲಿ ಇದೇ ಪ್ರಥಮವಾಗಿದೆ ಎನ್ನುತ್ತಿದ್ದಾರೆ, ನದಿಯ ದಡದಲ್ಲಿನ ಗ್ರಾಮಗಳ ನಿವಾಸಿಗಳು. ಕುಡಿಯುವ ನೀರಿಗಾಗಿ, ಕೃಷಿ ಚಟುವಟಿಕೆಗಳಿಗಾಗಿ ನದಿಯನ್ನೆ ನಂಬಿದ್ದ ಜನರು ಡ್ಯಾಮಿನಿಂದ ನೀರನ್ನು ನದಿಗೆ ಯ್ಯಾವಾಗ ಹರಿಸುತ್ತಾರೆಂದು ಭಕಪಕ್ಷಿಗಳಂತೆ, ನದಿಯತ್ತ ಮುಖ ಮಾಡಿ ಹಗಲಿರುಳು ಕಾಯುತ್ತಿದ್ದಾರೆ.

ಮಂಕು ಕವಿದಿರುವ ಹೋಳಿ ಸಂಭ್ರಮಾಚರಣೆ:

ಪ್ರತಿವರ್ಷ ಹೋಳಿ ಹಬ್ಬ ಬಂತೆಂದರೆ ಯುವ ಸಮುದಾಯಕ್ಕೆ ಎಲ್ಲಿಲ್ಲದ ಸಡಗರ-ಸಂಭ್ರಮ. ಬೆಳಿಗ್ಗೆಯಿಂದ ಮಧ್ಯಾನದವರೆಗೂ ಮನೆಯ ಎಲ್ಲಾ ಸದಸ್ಯರೊಂದಿಗೆ, ಮಿತ್ರರೊಂದಿಗೆ, ಸಾರ್ವಜನಿಕವಾಗಿ ಪರಸ್ಪರ ಹೋಳಿ ಹಬ್ಬದ ಬಣ್ಣದಾಟವನ್ನಾಡಿ ನದಿಯಲ್ಲಿ ಮುಳುಗಿ ಮೈ ತೊಳೆದುಕೊಂಡು, ಮನೆಯಲ್ಲಿ ಹಬ್ಬಕ್ಕಾಗಿ ಮಾಡಿರುವ ಸವಿಯನ್ನು ಸವಿದು. ಹೊಸ ವರ್ಷದ ಮಳೆಗಾಲ ನಿರೀಕ್ಷಿಸುವ ದಿನವೇ ಹೋಳಿ ಹಬ್ಬದ ಆಚರಣೆ. ಆದರೆ, ನದಿಯಲ್ಲಿ ನೀರಿಲ್ಲದ ಕಾರಣ ಹೋಳಿ ಹಬ್ಬದಾಚರಣೆಗೆ ಈ ವರ್ಷ ಜನರಲ್ಲಿ ಉತ್ಸಾಹವೇ ಇಲ್ಲದಂತಾಗಿದೆ ಎನ್ನುವ ಮಾತು ಎಲ್ಲೆಂದರಲ್ಲಿ ಕೇಳಿ ಬರುತ್ತಿದೆ.ಸಾಯುತ್ತಿವೆ ಜಲಚರಗಳು: ಇತ್ತೀಚಿನ ದಿನಗಳಲ್ಲಿ ನೆಲದ ಮೇಲೆ ಹಾಗೂ ಬೃಹತ್ ಕಟ್ಟಡಗಳ ಮೇಲೆ ನಿರ್ಮಿಸಿರುವ ಮೊಬೈಲ್ ಟವರ್‌ಗಳ ಹಾವಳಿಗೆ ತುತ್ತಾಗಿ ಹಕ್ಕಿಪಕ್ಷಿಗಳು ಸಾಯುತ್ತಿವೆ. ಬೇಸಿಗೆಯ ಭರದ ಛಾಯೆಯ ರುಚಿಯನ್ನು ಹಗಲಿರುಳೆನ್ನದೆ ಸವಿಯುತ್ತಿರುವ ಕಾಡುಪ್ರಾಣಿಗಳು, ಜಲಚರ ಜೀವಿಗಳು ಕುಡಿಯಲು ನೀರಿಲ್ಲದ ಕಾರಣ ಸಾಯುತ್ತಿವೆ.

ಅರಣ್ಯ ಇಲಾಖೆ ಮಳೆಗಾಲದಲ್ಲಿ ಅರಣ್ಯ ಪ್ರದೇಶದಲ್ಲಿ ಬಿದ್ದ ಮಳೆಯ ನೀರು ಹರಿದು ಹೋಗಲು ಬಿಟ್ಟು ಕೈಕಟ್ಟಿ ಕುಳಿತುಕೊಳ್ಳುವುದನ್ನು ಬಿಟ್ಟು. ಬೇಸಿಗೆಯ ಸಮಯದಲ್ಲಿ ವನ್ಯ ಜೀವಿಗಳಿಗೆ ಬೇಸಿಗೆಯಲ್ಲಿ ನೀರಿನ ಬವಣೆಯನ್ನು ನೀಗಿಸಲು ಅರಣ್ಯ ಪ್ರದೇಶದಲ್ಲಿ ಅಲ್ಲಲ್ಲಿ ಕೆರೆ-ಕಟ್ಟೆಗಳನ್ನು ನಿರ್ಮಿಸಬೇಕು. ವನ್ಯ ಜೀವಿಗಳಿಗೆ ಬೇಕಾಗುವಂಥಹ ಆಹಾರ ಪದಾರ್ಥಗಳನ್ನು ಪೂರೈಸಲು ವನ್ಯಜೀವಿ ಸಂರಕ್ಷಣಾ ಇಲಾಖೆ ಮುಂದಾಗಬೇಕು ಎನ್ನುತ್ತಾರೆ. ಪ್ರಜ್ಞಾವಂತ ನಾಗರಿಕರು.

ಬೇಸಿಗೆಯ ತಾಪಮಾನದ ಕೋಪಕ್ಕೆ ಜಲಮೂಲಗಳಾದ ತುಂಗಭದ್ರಾ ನದಿ, ಹಳ್ಳಕೊಳ್ಳಗಳು, ಕೆರೆ-ಕಟ್ಟೆಗಲು, ಬಾವಿಗಳು, ಬೋರ್‌ವೆಲ್ಲಗಳು ಬತ್ತಿ ಬರಿದಾಗಿವೆ. ಬಹು ಗ್ರಾಮ ನದಿಯ ನೀರು ಪೂರೈಸುವ ಜಾಕ್‌ವೆಲ್ ಹತ್ತಿರದ ಗುಂಡಿಗಳಲ್ಲಿಯೂ ನೀರಿಲ್ಲದ ಕಾರಣ ನದಿಯ ನೀರು ಸಾರ್ವಜನಿಕರಿಗೆ ಸಿಗುತ್ತಿಲ್ಲ. ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುತ್ತಿರುವ ಅನೇಕ ಕೊಳವೆಬಾವಿಗಳು ಅಂತರ್‌ಜಲ ಕುಸಿತದಿಂದ ಬಂದ್ ಆಗಿವೆ.

ಬೇಸಿಗೆಯ ತಾಪಮಾನದ ಕೋಪಕ್ಕೆ ಭೂಮಿಯ ಮೇಲಿನ ಜಲವು ಬತ್ತಿಹೋಗಿದ್ದು. ಸಕಲ ಜೀವಿಗಳಿಗೂ ಆಹಾರವನ್ನು ಉಣಬಡಿಸುವುದಕ್ಕಾಗಿ ನಿತ್ಯ ಶ್ರಮಿಸುತ್ತಿರುವ ಅನ್ನದಾತ ರೈತರು, ಹೊಲ-ಗದ್ದೆಗಳಲ್ಲಿ ಬೆಳೆದಿರುವ ಬೆಳೆಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಶ್ರಮಿಸುತ್ತಿರುವ ಶ್ರಮ ವರ್ಣಿಸಲಸಾಧ್ಯವಾದುದ್ದಾಗಿದೆ.

ಇತ್ತೀಚಿನ ದಿನಗಳಲ್ಲಿ ನೀರನ್ನು ಶುದ್ಧೀಕರಿಸಿ ಮಾರಾಟ ಮಾಡುವವರೇ ಹೆಚ್ಚಾಗಿದ್ದಾರೆ. ಬೇಸಿಗೆಯ ತಾಪಮಾನವೆಂಬ ಕೋಪಕ್ಕೆ ಭೂಮಿಯ ಮೇಲಿನ ಜಲಮೂಲಗಳೆಲ್ಲಾ ಬತ್ತಿದ್ದರೂ ಕೆಲವು ಪುಣ್ಯವಂತರ ಬೋರ್‌ವೆಲ್‌ಗಳಲ್ಲಿ ನೀರಿನ ಪ್ರಮಾಣ ಬತ್ತಿರುವುದಿಲ್ಲ. ಅಂಥಹ ಪುಣ್ಯವಂತರು ಊರಿನ ಸಾರ್ವಜನಿಕರಿಗೆ. ಬಾಯಾರಿ ಬಂದವರಿಗೆ ದಾನವವನ್ನು ಮಾಡಿ ಪುಣ್ಯವಂಥರೆನ್ನಿಸಿಕೊಳ್ಳಬೇಕು. ಅಂಥಹ ಕಾರ್ಯಕ್ಕೆ ಮುಂದಾಗಲು ಸರ್ಕಾರ, ಪಂಚಾಯತ, ನಗರಸಭೆ, ಪುರಸಭೆ ಅಧಿಕಾರಿಗಳು, ತಾಲೂಕು, ಜಿಲ್ಲಾ ಆಡಳಿತ ಜಾಗೃತಿ ಮೂಡಿಸಬೇಕು ಎಂದು ಅನೇಕರು ತಮ್ಮ ಅಭಿಪ್ರಾಯವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ.