ಸಾರಾಂಶ
ಧಾರವಾಡ: ಟಿ.ವಿ. ಮತ್ತು ಸಾಮಾಜಿಕ ಜಾಲ ತಾಣಗಳ ಹಾವಳಿಯಿಂದ ನೈಜ ಮತ್ತು ಸುಳ್ಳು ಸುದ್ದಿಗಳ ಮಧ್ಯದ ವ್ಯತ್ಯಾಸವೇ ಗೊತ್ತಾಗುತ್ತಿಲ್ಲ. ಓದುಗರಿಗೆ ಇದು ಗೊಂದಲ ಸೃಷ್ಟಿಸಿದ್ದು, ಅಂತಿಮವಾಗಿ ಪತ್ರಿಕೆಗಳೇ ಸುದ್ದಿಯ ನಿಜವಾದ ಜೀವಳವಾಗಿವೆ. ವಿಶ್ವಾಸಾರ್ಹತೆಯಿಂದ ಸುದ್ದಿ ಓದಲು ಜನ ಮತ್ತೆ ಪತ್ರಿಕೆಗಳತ್ತ ಮುಖ ಮಾಡಿದ್ದಾರೆ ಎಂದು ಹಿರಿಯ ಪರ್ತಕರ್ತ ಬಂಡು ಕುಲಕರ್ಣಿ ಹೇಳಿದರು.
ಇಲ್ಲಿಯ ರಂಗಾಯಣದಲ್ಲಿ ಧಾರವಾಡ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿದ ಅವರು, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾಜವನ್ನು ಸರಿದಾರಿಯಲ್ಲಿ ನಡೆಸುವ ಶಕ್ತಿ ಪತ್ರಿಕಾರಂಗಕ್ಕೆ ಈಗಲೂ ಇದೆ ಎಂದರು.ಹಿರಿಯ ಪತ್ರಕರ್ತ ಗಿರೀಶ್ ಪಟ್ಟಣಶೆಟ್ಟಿ ಮಾತನಾಡಿ, ಪತ್ರಿಕಾ ರಂಗದಲ್ಲಿ ಕೆಲಸ ಮಾಡಲು ಇಚ್ಛಿಸುವ ಇಂದಿನ ಯುವಕರಿಗೆ ಭಾಷೆಯ ಮೇಲೆ ಯಾವುದೇ ಹಿಡಿತ ಕಾಣುತ್ತಿಲ್ಲ. ಕನ್ನಡ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದರೂ ಇಂಗ್ಲಿಷ ಭಾಷೆಯನ್ನು ನಿರ್ಲಕ್ಷ್ಯ ಮಾಡಬಾರದು. ಉದ್ಯೋಗಕ್ಕಾಗಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುವ ಬದಲು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಪತ್ರಕರ್ತರಾಗಬೇಕು ಎಂದರು.
ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಮಾತನಾಡಿ, ಪತ್ರಿಕೆಗಳು ಅಶಕ್ತರನ್ನು ಸಶಕ್ತರನ್ನಾಗಿ ಮಾಡುತ್ತವೆ. ರಂಗಭೂಮಿ ಮತ್ತು ರಂಗಭೂಮಿ ಕಲಾವಿದರು ಬೆಳಕಿಗೆ ಬರಲು ಪತ್ರಿಕೆಗಳು ಮತ್ತು ಪತ್ರಕರ್ತರ ಸಹಕಾರವೇ ಕಾರಣವಾಗಿದೆ ಎಂದು ಸ್ಮರಿಸಿದರು.ಅಧ್ಯಕ್ಷತೆ ವಹಿಸಿದ್ದ ಗಿಲ್ಡ್‌ನ ಅಧ್ಯಕ್ಷ ಬಸವರಾಜ್ ಹೊಂಗಲ್ ಮಾತನಾಡಿದರು. ರಾಘವ ಕಮ್ಮಾರ ಹಾಗೂ ತಂಡದಿಂದ ಮೆಹಫಿಲ್ ಸಂಗೀತ ಸೌರಭ ನಡೆಯಿತು. ಗಿಲ್ಡ್ ಉಪಾಧ್ಯಕ್ಷ ಬಸವರಾಜ ಅಳಗವಾಡಿ ಇದ್ದರು. ನಿಜಗುಣಿ ದಿಂಡಲಕೊಪ್ಪ ನಿರೂಪಿಸಿದರು. ಬಸವರಾಜ ಹಿರೇಮಠ ಸ್ವಾಗತಿಸಿದರು. ರವಿಕುಮಾರ ಕಗ್ಗಣ್ಣವರ ಪ್ರಾಸ್ತವಿಕವಾಗಿ ಮಾತನಾಡಿದರು. ವಿಶ್ವನಾಥ ಕೋಟಿ ವಂದಿಸಿದರು. ವಿವಿಧ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳಿದ್ದರು.