ಜಿಲ್ಲೆಯಲ್ಲೇ ಅತಿ ಹೆಚ್ಚು ಲೀಡ್ ಕೊಟ್ಟ ತುರುವೇಕೆರೆ ಕ್ಷೇತ್ರ

| Published : Jun 05 2024, 12:31 AM IST

ಜಿಲ್ಲೆಯಲ್ಲೇ ಅತಿ ಹೆಚ್ಚು ಲೀಡ್ ಕೊಟ್ಟ ತುರುವೇಕೆರೆ ಕ್ಷೇತ್ರ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಗೆಲುವು ಸಾಧಿಸಿದ್ದಾರೆ. ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 44 ಸಾವಿರದಷ್ಟು ಮತಗಳ ಲೀಡ್ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣ ಗೆಲುವು ಸಾಧಿಸಿದ್ದಾರೆ. ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 44 ಸಾವಿರದಷ್ಟು ಮತಗಳ ಲೀಡ್ ನೀಡಲಾಗಿದೆ.

ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣಗೆ ಶಾಸಕ ಎಂ.ಟಿ.ಕೃಷ್ಣಪ್ಪ ಮತ್ತು ಮಾಜಿ ಶಾಸಕ ಮಸಾಲಾ ಜಯರಾಮ್ ಅಪಾರ ಬೆಂಬಲ ನೀಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರಿಗೆ ತಾಲೂಕಿನಿಂದ ೫೦ ಸಾವಿರದಷ್ಟು ಮತಗಳು ಲಭಿಸಿವೆ. ಈ ಹಿಂದೆ ಸಂಸದರಾಗಿ ಆಯ್ಕೆಯಾಗಿದ್ದ ಸಂಧರ್ಭದಲ್ಲಿ ಎಸ್.ಪಿ.ಮುದ್ದಹನುಮೇಗೌಡರಿಗೆ ಸುಮಾರು ೫೫ ಸಾವಿರದಷ್ಟು ಮತಗಳು ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ದೊರಕಿತ್ತು. ಎಸ್ಸಿ ಮತ್ತು ಎಸ್ಟಿ ಮತಗಳೂ ಸಹ ಒಂದಿಷ್ಟು ಪ್ರಮಾಣದಲ್ಲಿ ಕಾಂಗ್ರೆಸ್‌ಗೆ ಬಂದಿದ್ದರೆ, ಮುದ್ದಹನುಮೇಗೌಡರು ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಒಂದಿಷ್ಟು ಜಾತಿ ವ್ಯಾಮೋಹವೂ ಹೆಚ್ಚು ಮತ ಬರಲು ಸಾಧ್ಯವಾಗಿದೆ ಎನ್ನಲಾಗುತ್ತಿದೆ. ವಿ.ಸೋಮಣ್ಣ ವೀರಶೈವ ಸಮುದಾಯಕ್ಕೆ ಸೇರಿದವರು. ಈ ಕ್ಷೇತ್ರದಲ್ಲಿ ವೀರಶೈವ ಸಮುದಾಯದ ಮತದಾರರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿದೆ. ವೀರಶೈವರು ಸಹಜವಾಗಿ ತಮ್ಮ ಜಾತಿ ಅಭಿಮಾನದಿಂದಾಗಿ ವಿ.ಸೋಮಣ್ಣಗೆ ಹೆಚ್ಚಿನ ಮತ ಚಲಾಯಿಸಿರುವುದರಲ್ಲಿ ಅನುಮಾನವಿಲ್ಲ. ಒಟ್ಟಾರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಸಿರುವ ಲೀಡ್‌ನಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಪಾಲು ಸಾಕಷ್ಟಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವ ರಾಜಣ್ಣ ಕ್ಷೇತ್ರದಲ್ಲೂ ಸಹ ಬಿಜೆಪಿ ಲೀಡ್ ಗಳಿಸಿರುವುದು ವೈಶಿಷ್ಟ್ಯ. ಇತ್ತ ಕಾಂಗ್ರೆಸ್ ಶಾಸಕರಿರುವ ತಿಪಟೂರು, ಗುಬ್ಬಿಯಲ್ಲೂ ಬಿಜೆಪಿಯ ಅಭ್ಯರ್ಥಿ ವಿ.ಸೋಮಣ್ಣ ಹೆಚ್ಚು ಮತಗಳಿಸಿರುವುದು ಬಿಜೆಪಿ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಸಂಭ್ರಮವಿಲ್ಲ: ವಿ.ಸೋಮಣ್ಣ ಗೆಲುವು ಸಾಧಿಸಿದರೂ ಸಹ ಬಿಜೆಪಿ, ಜೆಡಿಎಸ್‌ ಕಾರ್ಯರ್ತರು ಸಂಭ್ರಮಿಸಲೇ ಇಲ್ಲ. ಜೆಡಿಎಸ್ ಕಾರ್ಯಕರ್ತನೋರ್ವ ಖುಷಿಯಿಂದ ಪಟಾಕಿ ಸಿಡಿಸಿ ಹೋದದ್ದು ಬಿಟ್ಟರೆ ಬೇರ್‍ಯಾರೂ ಸಹ ಬಹು ಸಂಖ್ಯೆಯಲ್ಲಿ ಕೂಡಿ ಸಂಭ್ರಮಾಚರಣೆ ಮಾಡಲಿಲ್ಲ. ಬಹುಶಃ ದೇಶದ ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ಅತಂತ್ರತೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಪಕ್ಷಗಳ ಕಾರ್ಯಕರ್ತರು ಸಂಭ್ರಮಾಚರಣೆ ಮಾಡದೇ ಮೌನಕ್ಕೆ ಶರಣಾಗಿದ್ದಾರೆನ್ನಲಾಗಿದೆ.