ಟಿವಿ ಶೋ ರೂಮ್‌ಗೆ ಬೆಂಕಿ: ಅಪಾರ ನಷ್ಟ

| Published : May 14 2024, 01:01 AM IST

ಸಾರಾಂಶ

ಚಳ್ಳಕೆರೆ ನಗರದ ಶ್ರೀಕಂಠೇಶ್ವರ ಟಿ.ವಿ.ಶೊರೂಂಗೆ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಇತರೆ ಉಪಕರಣಗಳು ಸಂಪೂರ್ಣ ಸುಟ್ಟು ಕರಕಲಾದವು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ನಗರದ ಮಧ್ಯ ಭಾಗದಲ್ಲಿರುವ ಶ್ರೀಬನಶಂಕರಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಶ್ರೀಕಂಠೇಶ್ವರ ಟಿವಿ ಶೋರೂಂಗೆ ಎಲೆಕ್ಟ್ರಿಕ್ ಶಾರ್ಟ್‌ ಸರ್ಕ್ಯೂಟ್‌ನಿಂದ ಶೋರೂಂ ಎಲ್ಲಾ ವಸ್ತುಗಳು ಸುಟ್ಟು ಭಸ್ಮವಾದ ಘಟನೆ ಜರುಗಿದೆ.

ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು ಹೊಗೆ ಬರಲು ಆರಂಭಿಸಿತು. ಕೂಡಲೇ ನೆರೆಹೊರೆ ಅಂಗಡಿಯವರು ಟಿ.ವಿ. ಅಂಗಡಿ ಮಾಲೀಕರ ಜಯಪ್ರಕಾಶ್‌ಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಅಂಗಡಿ ತೆರೆದು ನೋಡಿದಾಗ ಬೆಂಕಿಯ ಜ್ವಾಲೆ ಅಂಗಡಿಯ ಒಳಭಾಗವನ್ನು ವ್ಯಾಪಿಸಿತ್ತು. ಅಗ್ನಿಶಾಮಕ ಠಾಣೆಯ ಎರಡೂ ಅಗ್ನಿಶಾಮಕ ವಾಹನಗಳು ಅಂಗಡಿ ಒಳ ಮತ್ತು ಮೇಲ್ಭಾಗವನ್ನು ನಿರಂತರವಾಗಿ ಸುಮಾರು ಒಂದೂವರೆ ಗಂಟೆಗಳ ಕಾಲ ಬೆಂಕಿಯನ್ನು ಸಂಪೂರ್ಣ ವಾಗಿ ನಿಯಂತ್ರಿಸಿ ನಂದಿಸುವಲ್ಲಿ ಯಶಸ್ವಿಯಾದರು. ಸುತ್ತಮುತ್ತಲೂ ಅಂಗಡಿ ಹಾಗೂ ಮನೆಗಳಿದ್ದು, ಬೆಂಕಿ ವ್ಯಾಪಿಸಿದ್ದರೆ ಇನ್ನೂ ಹೆಚ್ಚಿನ ಅನಾಹುತವಾಗುವ ಸಂಭವ ಹೆಚ್ಚಿತ್ತು. ಬೆಂಕಿಯ ಜ್ವಾಲೆ ಕಂಡ ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಬೆಂಕಿ ನಂದಿಸುವಲ್ಲಿ ನೆರವಾದರು.

ಅಗ್ನಿಶಾಮಕ ಠಾಣಾಧಿಕಾರಿ ಬಿ.ಜಯಣ್ಣ, ಬೆಂಕಿಯ ಜ್ವಾಲೆ ಇಡೀ ಅಂಗಡಿಯನ್ನು ವ್ಯಾಪಿಸಿದ್ದು, ಒಂದೇ ಹಂತದಲ್ಲಿ ಬೆಂಕಿ ಹತೋಟಿಗೆ ತರಲು ಕಷ್ಟವಾಗಿತ್ತು. ಆದ್ದರಿಂದ ಎರಡೂ ಅಗ್ನಿಶಾಮಕ ಪಡೆ ಹಾಗೂ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಅಂಗಡಿಯ ಒಳಭಾಗದಲ್ಲಿ ನಿರಂತರ ನೀರು ಹರಿಸಿದ ಪರಿಣಾಮವಾಗಿ ಬೆಂಕಿ ನಿಯಂತ್ರಿಸಲು ಸಾಧ್ಯವಾಯಿತು. ಅಂಗಡಿ ಮಾಲೀಕ ಜಯಪ್ರಕಾಶ್ ಮಾತನಾಡಿ, ಕೂಡಲೇ ನಾನು ಆಗಮಿಸಿ ಅಗ್ನಿಶಾಮಕ ಪಡೆ ಪೊಲೀಸರಿಗೆ ಮಾಹಿತಿ ನೀಡಿದೆ. ಅಂಗಡಿಯಲ್ಲಿದ್ದ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಇತರೆ ಉಪಕರಣಗಳು ಬೆಂಕಿಗಾಹುತಿಯಾಗಿ ಸುಮಾರು ₹೪೦ ಲಕ್ಷಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎಂದಿದ್ದಾರೆ. ಮನೆಗೆ ಬೆಂಕಿ; ಸಂಪೂರ್ಣ ಭಸ್ಮ

ಚಳ್ಳಕೆರೆ: ತಾಲ್ಲೂಕಿನ ತಿಪ್ಪಾರೆಡ್ಡಿಹಳ್ಳಿ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದ ಲಕ್ಷ್ಮೀದೇವಿ ಎಂಬುವವರಿಗೆ ಸೇರಿದ ಮನೆ ಸಂಪೂರ್ಣ ಸುಟ್ಟು ಹೋಗಿ ಸುಮಾರು ಎರಡು ಲಕ್ಷ ಹೆಚ್ಚು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.ದಿಢೀರನೆ ಬೆಂಕಿ ಕಾಣಿಸಿಕೊಂಡ ಪರಿಣಾಮವಾಗಿ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ಆಹಾರ ಪದಾರ್ಥ, ಬಟ್ಟೆ, ದಾಖಲಾತಿಗಳು ಎಲ್ಲವೂ ಕೆಲವೇ ನಿಮಿಷದಲ್ಲಿ ಬೆಂಕಿಗೆ ಆಹುತಿಯಾಗಿವೆ. ನೆರೆಹೊರೆಯವರು ಧಾವಿಸಿ ಬೆಂಕಿ ನಂದಿಸುವಲ್ಲಿ ಸಾಕಷ್ಟು ಪರಿಶ್ರಮ ವಹಿಸಿದರು. ಚಳ್ಳಕೆರೆ ಅಗ್ನಿಶಾಮಕ ವಾಹನ ಕೂಡಲೇ ಗ್ರಾಮಕ್ಕೆ ತೆರಳಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.