ಜಾತ್ರೆಯ ಅಂಗವಾಗಿ ಒಕ್ಕಲಗೇರಿ ಓಣಿ ಸೇರಿದಂತೆ ದೇವತೆಯರ ಮೆರವಣಿಗೆ ನಡೆಯುವ ರಸ್ತೆಗಳು, ಓಣಿಗಳಲ್ಲಿ ಭಂಡಾರದ ರಂಗಿನಲ್ಲಿ ಮಿಂದೆದ್ದವು.

ಗದಗ: ಅವಳಿ ನಗರದ ಗ್ರಾಮದೇವತೆಗಳಾದ ದ್ಯಾಮವ್ವ ಹಾಗೂ ದುರ್ಗವ್ವ ದೇವಿಯರ ಹರಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ಭಂಡಾರದ ಜಾತ್ರೆ ಜನಮನದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಬರೋಬ್ಬರಿ 18 ವರ್ಷಗಳ ದೀರ್ಘ ಕಾಯುವಿಕೆಯ ನಂತರ ನಡೆದ ಈ ಮಹೋತ್ಸವದಲ್ಲಿ ಭಕ್ತಸಾಗರವೇ ಹರಿದುಬಂದಿದ್ದು, ಇಡೀ ಅವಳಿ ನಗರವೇ ಹಳದಿಮಯವಾಗಿ ಕಂಗೊಳಿಸಿತು.ಜಾತ್ರೆಯ ಅಂಗವಾಗಿ ಒಕ್ಕಲಗೇರಿ ಓಣಿ ಸೇರಿದಂತೆ ದೇವತೆಯರ ಮೆರವಣಿಗೆ ನಡೆಯುವ ರಸ್ತೆಗಳು, ಓಣಿಗಳಲ್ಲಿ ಭಂಡಾರದ ರಂಗಿನಲ್ಲಿ ಮಿಂದೆದ್ದವು. ಬೆಳಗ್ಗೆಯಿಂದಲೇ ವಾಣಿಜ್ಯ ಮಳಿಗೆಗಳು, ಕಟ್ಟಡಗಳು ಹಾಗೂ ವೃತ್ತಗಳು ಭಂಡಾರಮಯವಾಗಿದ್ದವು. ಗಾಳಿಯಲ್ಲಿ ತೇಲಿ ಬರುತ್ತಿದ್ದ ಭಂಡಾರದೊಂದಿಗೆ ದೇವತೆಯರಿಗೆ ಹಾಕುತ್ತಿದ್ದ ಭಕ್ತರ ಜಯಘೋಷ ನಗರದಲ್ಲಿ ಅಕ್ಷರಶಃ ಹೊಸ ದೈವಿಕ ಸ್ಪರ್ಶವನ್ನೇ ನೀಡಿತ್ತು.ವೃತ್ತಗಳಲ್ಲಿ ಭಂಡಾರದ ರಾಶಿ: ಗಂಜಿ ಬಸವೇಶ್ವರ ವೃತ್ತ, ಗವಾಯಿಗಳ ವೃತ್ತ, ರಾಚೋಟೇಶ್ವರ ಗುಡಿ ಆವರಣ ಹಾಗೂ ಮೇನ್ ಬಜಾರ್‌ನ ಪ್ರತಿ ತಿರುವಿನಲ್ಲೂ ಭಂಡಾರ ತುಂಬಿದ ಚೀಲಗಳನ್ನು ಇರಿಸಲಾಗಿತ್ತು. ಇದನ್ನು ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬರೂ ಎರಚಿಕೊಂಡು ಸಂಭ್ರಮಿಸಿದರು. ಈ ಬಾರಿಯ ಜಾತ್ರೆಯಲ್ಲಿ ಭಂಡಾರವೇ ಪ್ರಮುಖ ಆಕರ್ಷಣೆಯಾಗಿತ್ತು.

ಹಳದಿ ಉಡುಪಿನ ಸಂಭ್ರಮ: ಸಾವಿರಾರು ಯುವಕ, ಯುವತಿಯರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಪ್ರತಿಯೊಬ್ಬರು ಭಂಡಾರ ಎರಚಿಕೊಂಡ ಹಿನ್ನೆಲೆ ಎಲ್ಲ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗಿದ್ದು ಎಲ್ಲಿ ನೋಡಿದರೂ ಹಳದಿ ಉಡುಪಿನ ಜನರೇ ಕಾಣುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅದರಲ್ಲಿಯೂ ಮಹಿಳೆಯರು ಬೆಲೆಬಾಳುವ ಬಟ್ಟೆಗಳನ್ನು ಹಾಕಿಕೊಂಡಿದ್ದರೂ ಭಂಡಾರದಲ್ಲಿ ಮಿಂದೆದಿದ್ದು ವಿಶೇಷವಾಗಿತ್ತು.

ಸಾಮರಸ್ಯದ ಸಂಗಮ: ಪ್ರಸಕ್ತ ಸಾಲಿನ ಗ್ರಾಮ ದೇವತೆಯರಾದ ದ್ಯಾಮವ್ವ ಮತ್ತು ದುರ್ಗವ್ವ ಅವರ ಹರಿಜಾತ್ರೆ ಎನ್ನುವುದು ಸಾಮರಸ್ಯದ ಸಂಗಮವಾಗಿ ಮಾರ್ಪಟ್ಟಿತ್ತು, ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಕೂಡಿಕೊಂಡು ಈ ಜಾತ್ರೆಯನ್ನು ಅತ್ಯಂತ ಅರ್ಥಪೂರ್ಣಗವಾಗಿ ಜಾತಿ- ಮತ ಭೇದವಿಲ್ಲದೇ ಉತ್ಸವದಲ್ಲಿ ಒಂದಾಗಿ ಭಂಡಾರ ಎರಚಿಕೊಂಡಿದ್ದು ಭಾವೈಕ್ಯತೆಗೆ ಸಾಕ್ಷಿಯಾಯಿತು.

ಭವ್ಯ ಪಲ್ಲಕ್ಕಿ ಮೆರವಣಿಗೆ: ಒಕ್ಕಲಗೇರಿಯ ಐತಿಹಾಸಿಕ ದ್ಯಾಮವ್ವನ ಕಟ್ಟಿಯಿಂದ ವಾದ್ಯ- ಮೇಳಗಳ ಸಮೇತ ಆರಂಭಗೊಂಡ ದೇವಿಯರ ಭವ್ಯ ಪಲ್ಲಕ್ಕಿ ಮೆರವಣಿಗೆಯು ಗಂಜಿ ಬಸವೇಶ್ವರ ವೃತ್ತ, ರಾಚೋಟೇಶ್ವರ ದೇವಸ್ಥಾನ, ಹನುಮನಗರಡಿ, ಮೆಹಬೂಬಸುಬಾನಿ ಕಟ್ಟಿ, ನಾಲ್ವಾಡ ಗಲ್ಲಿ ಮತ್ತು ತಿಲಕ್ ಪಾರ್ಕ್ ರಸ್ತೆ ಮಾರ್ಗವಾಗಿ ಸಾಗಿ ಜೋಡ ಮಾರುತಿ ದೇವಸ್ಥಾನದ ಎದುರಿನ ದುರ್ಗಾದೇವಿ ದೇವಸ್ಥಾನವನ್ನು ತಲುಪಿತು. ಮೆರವಣಿಗೆ ಸಾಗಿದ ದಾರಿಯುದ್ದಕ್ಕೂ ಭಕ್ತರು ಪಲ್ಲಕ್ಕಿಗೆ ಹೂವು, ಕಾಯಿ ಮತ್ತು ಭಂಡಾರ ಸಮರ್ಪಿಸಿದರು.

ಬಿಗಿ ಪೊಲೀಸ್ ಬಂದೋಬಸ್ತ್: ಅವಳಿ ನಗರ ಮಾತ್ರವಲ್ಲದೆ ಕೊಪ್ಪಳ, ಬಾಗಲಕೋಟೆ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಿಂದಲೂ ಅಪಾರ ಜನಸ್ತೋಮ ಆಗಮಿಸಿದ್ದರಿಂದ ನಗರದ ಹೃದಯಭಾಗದಲ್ಲಿ ಭಾರಿ ವಾಹನ ದಟ್ಟಣೆ ಕಂಡುಬಂದಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಂಚಾರ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು.ಯಶಸ್ವಿ: ಗದಗ- ಬೆಟಗೇರಿ ಗ್ರಾಮದೇವಿಯರ ಹರಿ ಜಾತ್ರೋತ್ಸವದ ಪ್ರಮುಖ ಆಕರ್ಷಣೆಯೇ ಭಂಡಾರ ಜಾತ್ರೆ. ಅವಳಿ ನಗರ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳ ಸಾವಿರಾರು ಭಕ್ತರು ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಿದ್ದಾರೆ ಎಂದು ಜಾತ್ರಾ ಸಮಿತಿ ಸಹ ಕಾರ್ಯದರ್ಶಿ ವಸಂತ ಪಡಗದ ತಿಳಿಸಿದರು.

ಪರಂಪರೆ ಇನ್ನೂ ಜೀವಂತ: ಭಂಡಾರ ಜಾತ್ರೆಗೆ ಸಾವಿರಾರು ಜನರು ಒಟ್ಟಾಗಿ ಭಾಗವಹಿಸಿದ್ದು, ನಮ್ಮ ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆ ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಸ್ಪಷ್ಟ ಸಾಕ್ಷಿ. ಸರ್ವ ಧರ್ಮಗಳ ಜನರೂ ಕೈಜೋಡಿಸಿ ಜಾತ್ರೆಯನ್ನು ಅವಿಸ್ಮರಣೀಯವಾಗಿಸಿದ್ದಾರೆ ಎಂದು ಮುಖಂಡರಾದ ಕೊಟ್ರಪ್ಪ ಕಮತರ ತಿಳಿಸಿದರು.

ಧನ್ಯವಾದಗಳು: ಹರಿಜಾತ್ರೆಯು ನಮ್ಮ ಪ್ರಾಚೀನ ಸಂಸ್ಕೃತಿ ಮತ್ತು ಪರಂಪರೆ ಇನ್ನೂ ಜೀವಂತವಾಗಿದೆ. ಇದನ್ನು ಸಾಕಾರಗೊಳಿಸಿದ ಎಲ್ಲ ಹಿರಿಯರಿಗೆ ಮಹಿಳೆಯರಿಗೆ, ಯುವಕರಿಗೆ ಧನ್ಯವಾದಗಳು ಎಂದು ಯುವ ಮುಖಂಡರಾದ ನವೀನ ನಾಲ್ವಾಡ, ಹೇಮಂತ ಗಿಡ್ಡಹನಮನವರ ತಿಳಿಸಿದರು.