ಸಾರಾಂಶ
ಜಿಲ್ಲೆಯ ಧಾರ್ಮಿಕ ಪ್ರವಾಸಿ ತಾಣ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಮುಂಬರುವ ಬಜೆಟ್‌ನಲ್ಲಿ ₹100 ಕೋಟಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವಿ ಮಾಡಲಾಗುವುದು
ಕೊಪ್ಪಳ: ಜಿಲ್ಲೆಯ ಕನಕಗಿರಿ ಉತ್ಸವಕ್ಕೆ ₹2.5 ಕೋಟಿ ಅನುದಾನ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ ನೆರವೇರಿಸಿದ ಬಳಿಕ ಶುಕ್ರವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕನಕಗಿರಿ ಉತ್ಸವವನ್ನು ಆರಂಭ ಮಾಡಿದ್ದೇ ನಾನು. ಈ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಮುಂದುವರಿಸಲಿಲ್ಲ. ಈ ಬಾರಿ ನಾನೇ ಸಚಿವನಾಗಿದ್ದೇನೆ. ನನ್ನ ಕ್ಷೇತ್ರದ ಉತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು ಎಂದರು.ಜಿಲ್ಲೆಯ ಧಾರ್ಮಿಕ ಪ್ರವಾಸಿ ತಾಣ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಮುಂಬರುವ ಬಜೆಟ್‌ನಲ್ಲಿ ₹100 ಕೋಟಿ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವಿ ಮಾಡಲಾಗುವುದು ಎಂದು ಹೇಳಿದರು.
ಇನ್ನು ಆನೆಗೊಂದಿ ಉತ್ಸವದ ಬಗ್ಗೆ ಪ್ರಸ್ತಾವ ಕಳಿಸುವಂತೆ ತಿಳಿಸಿದ್ದೇನೆ. ದಿನಾಂಕ ನಿಗದಿ ಹಾಗೂ ಕಾರ್ಯಕ್ರಮದ ವಿವರದ ಬಗ್ಗೆ ಗಂಗಾವತಿ ಕ್ಷೇತ್ರದ ಶಾಸಕರಾದ ಜನಾರ್ದನ ರೆಡ್ಡಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದರು.