ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯಲ್ಲಿ ವ್ಯಸನಿಗಳಿಗೆ ಲಾಡ್ಜ್ ಅನ್ನು ಆರಂಭಿಸಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಇಬ್ಬರು ಯುವಕರು ಸೇರಿದಂತೆ 9 ಮಂದಿ ಕಿಡಿಗೇಡಿಗಳನ್ನು ಬಂಧಿಸಿ ಒಂದೂವರೆ ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಸಿಸಿಬಿ ಜಪ್ತಿ ಮಾಡಿದೆ.ತ್ಯಾಗರಾಜನಗರದ ಶ್ರೇಯಸ್, ಅಶ್ವತ್ಥ್ ನಗರದ ರಕ್ಷಿತ್, ನೈಜೀರಿಯಾ ಮೂಲದ ಮರಿಯಂ ಮೇರಿ, ಜಾನ್ಸನ್ ಎಜಿಕೆ ಐವರಿಕೋಸ್ಟ್‌ನ ಕೌಸಾಯ ಕೌಕುವ ಜಸ್ಟಿನ್, ದಾಸರಹಳ್ಳಿಯ ಲೋಕೇಶ್ ತಿಮ್ಮಪ್ಪ, ರೇಹನ್ ಮಂಗಟ್ಟಿಲ್, ಮಂಗಳೂರಿನ ಕರೀಂ, ಅಪ್ನಾನನ್ ಹಾಗೂ ಕೇರಳ ಮೂಲದ ಮೊಹಮದ್ ತಾಹೀರ್ ಬಂಧಿತರಾಗಿದ್ದು, ಆರೋಪಿಗಳಿಂದ 506 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, 50 ಎಲ್‌ಎಸ್‌ಡಿ ಸ್ಟ್ರಿಪ್ಸ್, 85 ಗ್ರಾಂ ಕೊಕೇನ್ ಹಾಗೂ 56 ಗ್ರಾಂ ಹೈಡ್ರೋ ಗಾಂಜಾ ಸೇರಿ ಒಟ್ಟು 1.5 ಕೋಟಿ ರು ಡ್ರಗ್ಸ್ ಜಪ್ತಿಯಾಗಿದೆ.
ಕುಮಾರಸ್ವಾಮಿ ಲೇಔಟ್, ಅವಲಹಳ್ಳಿ, ಅಮೃತಹಳ್ಳಿ, ರಾಮಮೂರ್ತಿ ನಗರ, ಹೆಬ್ಬಗೋಡಿ ಹಾಗೂ ಮೈಕೋ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಸಿಸಿಬಿ ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.ಲಾಡ್ಜ್ ತೆರೆದಿದ್ದ ಪೆಡ್ಲರ್‌ಗಳು
ರಾಮಮೂರ್ತಿ ನಗರ ಸಮೀಪ ವ್ಯಸನಿಗಳಿಗೆ ಲಾಡ್ಜ್ ತೆರೆದು ಡ್ರಗ್ಸ್ ಪೂರೈಸುತ್ತಿದ್ದ ಮಂಗಳೂರಿನ ಕರೀಂ ಹಾಗೂ ಅಫ್ನಾನ್ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಿಂದ 15 ಗ್ರಾಂ ಎಂಡಿಎಂಎ ಸೇರಿ 3 ಲಕ್ಷ ರು. ಮೌಲ್ಯದ ವಸ್ತುಗಳು ಸಿಕ್ಕಿವೆ. ಈ ದಂಧೆಯ ಪ್ರಮುಖ ಆರೋಪಿ ನೈಜೀರಿಯಾ ಮೂಲದ ಇಸ್ಮಾಯಿಲ್ ತಪ್ಪಿಸಿಕೊಂಡಿದ್ದಾನೆ ಎಂದು ಸಿಸಿಬಿ ಹೇಳಿದೆ.ಎರಡು ವಾರಗಳ ಹಿಂದೆ ರಾಮಮೂರ್ತಿ ನಗರದಲ್ಲಿ ಸುಪ್ರೀಂ ಸೂಟ್ಸ್ ಹೆಸರಿನ ಲಾಡ್ಜ್ ಅನ್ನು ಆರೋಪಿಗಳು ತೆರೆದಿದ್ದರು. ತನ್ನ ಲಾಡ್ಜ್‌ಗೆ ರೂಮ್ ಬುಕ್ ಮಾಡಿ ತಂಗುವ ವ್ಯಸನಿಗಳಿಗೆ ಅವರು ಡ್ರಗ್ಸ್ ಪೂರೈಸುತ್ತಿದ್ದರು. ನೈಜೀರಿಯಾದ ಇಸ್ಮಾಯಿಲ್ ನಿಂದ ಕಡಿಮೆ ಬೆಲೆಗೆ ಎಂಡಿಎಂಎ ಡ್ರಗ್ಸ್ ಖರೀದಿಸಿ ಬಳಿಕ ಕರೀಂ ಹಾಗೂ ಅಪ್ನಾನ್ ದುಬಾರಿ ಬೆಲೆಗೆ ಮಾರುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಂಗಳೂರಿನಲ್ಲಿ ಕರೀಂ ಹಾಗೂ ಅಪ್ನಾನ್ ಡ್ರಗ್ಸ್ ವ್ಯಸನಿಗಳಾಗಿದ್ದರು. ಬಳಿಕ ಇಬ್ಬರು ಪೆಡ್ಲರ್‌ಗಳಾಗಿ ರೂಪಾಂತರಗೊಂಡಿದ್ದಾರೆ. ಆಗ ಇಸ್ಮಾಯಿಲ್ ಸಂಪರ್ಕಕ್ಕೆ ಬಂದ ಅವರು, ನಂತರ ನಗರಕ್ಕೆ ಬಂದು ರಾಮಮೂರ್ತಿ ನಗರದಲ್ಲಿ 24 ಕೋಣೆಗಳ ಲಾಡ್ಜ್ ಬಾಡಿಗೆ ಪಡೆದು ನಡೆಸುತ್ತಿದ್ದರು. ಈ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬೇಕರಿ ಮಾಲೀಕನ ದಂಧೆ
ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ಬೇಕರಿ ಮಾಲೀಕ ಕೇರಳ ರಾಜ್ಯದ ಮೊಹಮ್ಮದ್ ತಾಹೀರ್ ಸಿಸಿಬಿ ಗಾಳಕ್ಕೆ ಸಿಲುಕಿದ್ದಾನೆ. ಹೂಡಿಯಲ್ಲಿ ಬೇಕರಿ ನಡೆಸುತ್ತಿದ್ದ ಆತ, ಸುಲಭವಾಗಿ ಹಣ ಸಂಪಾದನೆಗೆ ಡ್ರಗ್ಸ್ ಮಾರಾಟಕ್ಕಿಳಿದಿದ್ದ. ಆರೋಪಿಯಿಂದ 26 ಲಕ್ಷ ರು. ಮೌಲ್ಯದ ಎಂಡಿಎಂಎ ಡ್ರಗ್ಸ್ ಜಪ್ತಿಯಾಗಿದೆ. ಸಿಲ್ಕ್ ಬೋರ್ಡ್ ಬಳಿ ಹೋಟೆಲ್‌ನಲ್ಲಿ ಬಾಡಿಗೆ ಪಡೆದು ಆತ ಡ್ರಗ್ಸ್ ಸಂಗ್ರಹಿಸಿಟ್ಟಿದ್ದ. ತನ್ನ ಬೇಕರಿಗೆ ಬರುವ ಗ್ರಾಹಕರಿಗೆ ತಾಹಿರ್ ಡ್ರಗ್ಸ್ ಮಾರುತ್ತಿದ್ದ ಎಂದು ಸಿಸಿಬಿ ಮೂಲಗಳು ತಿಳಿಸಿವೆ.ವಿದೇಶಿ ಪೆಡ್ಲರ್‌ಗಳು ಹೆಬ್ಬಗೋಡಿಯ ವಿನಾಯಕ ಲೇಔಟ್‌ನಲ್ಲಿ ಸಿಸಿಬಿಗೆ ನೈಜಿರಿಯಾ ಮೂಲದ ಜಾನ್ಸನ್ ಹಾಗೂ ಕೇರಳದ ರೆಹಾನ್ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳ ಬಳಿ 30 ಲಕ್ಷ ರು. ಮೌಲ್ಯದ ಕೊಕೇನ್ ಹಾಗೂ ಎಂಡಿಎಂಎ ಜಪ್ತಿಯಾಗಿದೆ. ಎರಡು ವರ್ಷಗಳ ಹಿಂದೆ ವೈದ್ಯಕೀಯ ವೀಸಾದಡಿ ನಗರಕ್ಕೆ ಬಂದಿದ್ದ ಆತ, ಹಣಕ್ಕಾಗಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ. ಇನ್ನು ಸೋಲದೇವನಹಳ್ಳಿ ಸಮೀಪ ಮತ್ತೊಬ್ಬ ವಿದೇಶಿ ಪ್ರಜೆ ಐವರಿಕೋಸ್ಟ್‌ನ ಕೌಸಾಯ ಕೌಕುವ ಜಸ್ಟಿನ್‌ನ ಬಂಧನವಾಗಿದೆ. ಅವಲಹಳ್ಳಿಯ ಬಿಎಸ್‌ಆರ್ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ನೈಜಿರಿಯಾದ ಮರಿಯಮ್ ಮೇರಿ ಸಹ ಜೈಲು ಸೇರಿದ್ದಾಳೆ. ಈಕೆಯ ಬಳಿ 2 ಲಕ್ಷ ರು ಮೌಲ್ಯದ ಕೊಕೇನ್ ಜಪ್ತಿಯಾಗಿದೆ. ಎರಡು ವರ್ಷಗಳ ಹಿಂದೆ ವೈದ್ಯಕೀಯ ವೀಸಾದಡಿ ಭಾರತಕ್ಕೆ ಮೇರಿ ಬಂದಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮೀನು ಸೋಗಿನಲ್ಲಿ ಡ್ರಗ್ಸ್ಮೀನು ಮಾರಾಟ ನೆಪದಲ್ಲಿ ಡ್ರಗ್ಸ್ ಮಾರುತ್ತಿದ್ದ ಲೋಕೇಶ್ ತಿಮ್ಮಪ್ಪನನ್ನು ಸಿಸಿಬಿ ಬಂಧಿಸಿದೆ. ಅಮೃತಹಳ್ಳಿ ಸಮೀಪದ ಲುಂಬಿಣಿ ಗಾರ್ಡನ್ ಬಳಿ ಮೀನು ಮಾರಾಟ ಮಳಿಗೆಯನ್ನು ಆತ ಇಟ್ಟುಕೊಂಡಿದ್ದ. ತನ್ನ ಅಂಗಡಿಗೆ ಬರುವ ಗ್ರಾಹಕರಿಗೆ ದುಬಾರಿ ಬೆಲೆಗೆ ಲೋಕೇಶ್ ಡ್ರಗ್ಸ್ ಬಿಕರಿ ಮಾಡುತ್ತಿದ್ದ. ಈತನ ಬಳಿ 29 ಲಕ್ಷ ರು. ಮೌಲ್ಯದ ಹೈಡ್ರೋಗಾಂಜಾ ಸಿಕ್ಕಿದೆ.
ನಗರದಲ್ಲಿ ಲಾಡ್ಜ್‌ಗಳು ಡ್ರಗ್ಸ್ ಮಾರಾಟ ಕೇಂದ್ರಗಳಾಗಿ ಬದಲಾವಣೆ ಆಗಿರುವುದು ಆತಂಕಕಾರಿ ಸಂಗತಿಯಾಗಿದೆ. ವಾಣಿಜ್ಯ ಕಟ್ಟಡಗಳ ಮಾಲೀಕರು ಬಾಡಿಗೆ ಕೊಡುವ ಮುನ್ನೆಚ್ಚರಿಕೆ ವಹಿಸಬೇಕು. ಡ್ರಗ್ಸ್ ದಂಧೆಗೆ ಅವಕಾಶ ಕಲ್ಪಿಸಿದರೆ ಮುಲಾಜಿಲ್ಲದೆ ಕಟ್ಟಡಗಳ ಮಾಲಿಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ.-ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತ, ಬೆಂಗಳೂರು ನಗರ.