ಪಾಕ್‌ಗೆ ನೌಕೆಯ ಮಾಹಿತಿ ನೀಡ್ತಿದ್ದ ಮಲ್ಪೆ ಶಿಪ್‌ಯಾರ್ಡ್‌ನ ಇಬ್ಬರ ಸೆರೆ

| Published : Nov 22 2025, 02:15 AM IST

ಪಾಕ್‌ಗೆ ನೌಕೆಯ ಮಾಹಿತಿ ನೀಡ್ತಿದ್ದ ಮಲ್ಪೆ ಶಿಪ್‌ಯಾರ್ಡ್‌ನ ಇಬ್ಬರ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತೀಯ ನೌಕಾಪಡೆಯ ಹಡಗುಗಳ ಗೌಪ್ಯ ಮಾಹಿತಿಯನ್ನು ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಮಾರುತ್ತಿದ್ದ ಇಬ್ಬರನ್ನು ಉಡುಪಿ ಪೊಲೀಸರು ಬಂದಿಸಿದ್ದಾರೆ. ಇನ್ನಷ್ಟು ಜನರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತೀಯ ನೌಕಾಪಡೆಯ ಹಡಗುಗಳ ಗೌಪ್ಯ ಮಾಹಿತಿಯನ್ನು ಶತ್ರುರಾಷ್ಟ್ರ ಪಾಕಿಸ್ತಾನಕ್ಕೆ ಮಾರುತ್ತಿದ್ದ ಇಬ್ಬರನ್ನು ಉಡುಪಿ ಪೊಲೀಸರು ಬಂದಿಸಿದ್ದಾರೆ. ಇನ್ನಷ್ಟು ಜನರು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ಉತ್ತರಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ಅನಂತರಾಮ ಭಟ್‌ಪುರದ ನಿವಾಸಿ ರೋಹಿತ್ ಲಲ್ಲೆ (29) ಮತ್ತು ಹಮ್ಜಾಬಾದ್ ಮೈದಾನ್‌ ನಿವಾಸಿ ಸಂತ್ರಿ ಬರ್ಸಾತಿ (37) ಬಂಧಿತರು. ಇವರು ಭಾರತ ಸರ್ಕಾರ ಸ್ವಾಮ್ಯದ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಗುತ್ತಿಗೆ ಕಾರ್ಮಿಕರಾಗಿದ್ದರು. ಅವರು ಕೇರಳದ ಕೊಚ್ಚಿ ಮತ್ತು ಉಡುಪಿ ಜಿಲ್ಲೆಯ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್‌ಗೆ ದುರುಸ್ತಿಗೆ ಬರುತಿದ್ದ ಭಾರತೀಯ ನೌಕಪಡೆಯ ಬಗೆಗಿನ ಮಾಹಿತಿ ಸಂಗ್ರಹಿಸಿ ಹಣಕ್ಕಾಗಿ ಜಾಲತಾಣಗಳ ಮೂಲಕ ಮಾರಾಟ ಮಾಡಿರುವುದು ಪತ್ತೆಯಾಗಿದೆ.

ಕಳ‍ೆದೆರಡು ವರ್ಷಗಳಿಂದ ಅವರಿಬ್ಬರೂ ಕೊಚ್ಚಿಯಿಂದಲೇ ದೇಶದ್ರೋಹಿ ಕೃತ್ಯ ನಡೆಸುತ್ತಿದ್ದರು. ಇತ್ತೀಚೆಗೆ ರೋಹಿತ್ ಮಲ್ಪೆಗೆ ವರ್ಗಾವಣೆಯಾದ ಮೇಲೆ ಇಲ್ಲಿಂದಲೂ ನೌಕಪಡೆಯ ಹಡಗುಗಳ ಗೌಪ್ಯ ಮಾಹಿತಿ ಮಾರಾಟ ಮಾಡಿರುವುದು ಪತ್ತೆಯಾಗಿದೆ. ಸಂತ್ರಿ ಕೊಚ್ಚಿನ್‌ನಿಂದ ಗೌಪ್ಯ ಮಾಹಿತಿಯನ್ನು ರೋಹಿತ್‌ಗೆ ನೀಡುತ್ತಿದ್ದ, ರೋಹಿತ್ ಅದನ್ನು ಶತ್ರುದೇಶಗ‍ಳಿಗೆ ತಲುಪಿಸುತಿದ್ದ. ಇಬ್ಬರ ಖಾತೆಗಳಿಗೂ ಭಾರೀ ಪ್ರಮಾಣದಲ್ಲಿ ಹಣ ಜಮೆ ಆಗಿರುವುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ.

ಆರೋಪಿಗಳಿಬ್ಬರು ಸುಷ್ಮಾ ಮೇರಿನ್ ಕಂಪನಿಯ ಮೂಲಕ ಕೇರಳದ ಕೊಚ್ಚಿಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್‌ಗೆ ಗುತ್ತಿಗೆ ಆಧಾರದಲ್ಲಿ ಇನ್ಸುಲೆಟರ್‌ ಕೆಲಸಕ್ಕೆ ಸೇರಿದ್ದರು, ಅವರಲ್ಲಿ ಪ್ರಸ್ತುತ ರೋಹಿತ್ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್‌ ಘಟಕಕ್ಕೆ ವರ್ಗಾವಣೆಗೊಂಡು, ಇಲ್ಲಿ ಕೆಲಸ ಮಾಡುತ್ತಿದ್ದ.