ಪತಿಯನ್ನು ಕೊಲೆ ಮಾಡಿ ಅಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ ಪ್ರಕರಣವನ್ನು ಟಿಳಕವಾಡಿ ಪೊಲೀಸರು ಭೇದಿಸಿ, ಪತ್ನಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಪತಿಯನ್ನು ಕೊಲೆ ಮಾಡಿ ಅಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ ಪ್ರಕರಣವನ್ನು ಟಿಳಕವಾಡಿ ಪೊಲೀಸರು ಭೇದಿಸಿ, ಪತ್ನಿ ಸೇರಿ ಇಬ್ಬರನ್ನು ಬಂಧಿಸಿದ್ದಾರೆ.

ಅನಗೋಳದ ಬಾಬಲೇ ಗಲ್ಲಿಯ ನಿವಾಸಿ ಹಾಗೂ ಆಯುರ್ವೇದ ಥೆರಪಿಸ್ಟ್ ಅವಿನಾಶ ಅಶೋಕ ಸುಪ್ಪನ್ನವರ (40) ಹತ್ಯೆಗೀಡಾಗಿದ್ದಾರೆ. ಈ ಸಂಬಂಧ ಟಿಳಕವಾಡಿಯ ಗಜಾನನ ಮಹಾರಾಜ ನಗರದ ಕೈಲಾಸ ಬಾಲಕೃಷ್ಣ ಅಚ್ಚಿತಾಲ್ (43) ಹಾಗೂ ಮೃತನ ಪತ್ನಿ ಲಕ್ಷ್ಮೀ ಅವಿನಾಶ ಸುಪ್ಪನ್ನವರ (29) ಬಂಧಿತ ಆರೋಪಿಗಳು.ಮಾ.5 ರಂದು ಅವಿನಾಶ ಅವರು ತಮ್ಮ ಅಂಕುಶ ಆಯುರ್ವೇದಿಕ ಕೇರ್ ಸೆಂಟರ್‌ನ ಬೆಡ್ ರೂಮ್‌ನಲ್ಲಿ ತಲೆಯ ಹಿಂಭಾಗಕ್ಕೆ ಗಾಯವಾಗಿ ಮೃತಪಟ್ಟಿದ್ದರು. ಈ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ಅವರ ತಾಯಿ ಕಮಲ ಸುಪ್ಪನ್ನವರ ಅವರು ಟಿಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಇದು ಅಸಹಜ ಸಾವಲ್ಲದೆ ಕೊಲೆ ಎಂಬುದನ್ನು ಪತ್ತೆಹಚ್ಚಿದರು. ಬಳಿಕ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಇಬ್ಬರೂ ಒಳಸಂಚು ರೂಪಿಸಿ ಕೊಲೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಈ ಕಾರ್ಯಾಚರಣೆ ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಡಿ.ಪಿ.ನಿಂಬಾಳಕರ, ಟಿಳಕವಾಡಿ ಪೊಲೀಸ್ ಇನ್ಸ್‌ಪೆಕ್ಟರ್ ಪರಶುರಾಮ ಪೂಜೇರಿ, ಪಿಎಸೈ ವಿಶ್ವನಾಥ ಘಂಟಾಮಠ ಹಾಗೂ ಇತರ ಸಿಬ್ಬಂದಿಯರನ್ನೊಳಗೊಂಡ ತಂಡದಿಂದ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆದಿದೆ. ಪೊಲೀಸರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.