ಸಾರಾಂಶ
ಮಾಜಿ ಶಾಸಕರ ಆರೋಪ । ಶಾಸಕರ ಹಿಂಬಾಲಕರಿಗೆ ನೆಲೆ ಕಲ್ಪಿಸಲು ಸರ್ಕಾರಿ ನೌಕರರ ಕಟ್ಟಡ ನೆಲಸಮ
ಕನ್ನಡಪ್ರಭವಾರ್ತೆ ಜಗಳೂರುಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಮುಂದೆ ನೂತನವಾಗಿ ನಿರ್ಮಾಣವಾಗುತ್ತಿರುವ ಎರಡು ಕೋಟಿ ರೂ ವೆಚ್ಚದ ಸಿಸಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಮಾಜಿ ಶಾಸಕರಾದ ಎಚ್.ಪಿ.ರಾಜೇಶ್, ಎಸ್.ವಿ.ರಾಮಚಂದ್ರ ಆರೋಪಿಸಿದರು.
ನಗರದಲ್ಲಿ ಬುಧವಾರ ರಸ್ತೆ ವೀಕ್ಷಣೆ ಮಾಡಿದ ಅವರು, ಅಲ್ಪ ಸಂಖ್ಯಾತ ಇಲಾಖೆಯಿಂದ ಮಂಜೂರಾಗಿರುವ ಎರಡು ಕೋಟಿ ರೂ ಕಾಮಗಾರಿ ಆಸ್ಪತ್ರೆಯಿಂದ ಅಲ್ಪ ಸಂಖ್ಯಾತರೇ ಹೆಚ್ಚಿರುವ ಕಾಲೂನಿಯವರೆಗೆ ನಿರ್ಮಾಣ ಮಾಡಲು ಹಣ ಮಂಜೂರಾಗಿ ಶಾಸಕರು ಭೂಮಿ ಪೂಜೆ ನೆರವೇರಿಸಿದ ಎರಡು ತಿಂಗಳಲ್ಲೇ ಮುಕ್ತಾಯದ ಹಂತಕ್ಕೆ ಬಂದಿದೆ. ಆದರೆ ಇದು ಕಳಪೆ ಕಾಮಗಾರಿ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ದೂರಿದರು.ರಸ್ತೆ ನಿರ್ಮಾಣವನ್ನು ಬೆಂಗಳೂರು ಬಿಬಿಎಂಪಿ 4ನೇ ಡಿವಿಷನ್‍ಗೆ ನೀಡಲಾಗಿದೆ. ಇದರ ಉದ್ದೇಶವಾದರೂ ಏನು? ದಾವಣಗೆರೆಯ ಕೆಆರ್‍ಡಿಎಲ್‍ಗೆ ನೀಡಬಹುದಿತ್ತು. ಆದರೆ ಬೆಂಗಳೂರಿನವರಿಗೆ ಏಕೆ ನೀಡಿದ್ದೀರಿ? ಕಾಮಗಾರಿಯನ್ನು ನೋಡಲಿಕ್ಕೆ ಬೆಂಗಳೂರಿನಿಂದ ಎಂಜಿನಿಯರ್ ಬರಬೇಕೆ? ಇದರ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿದರು.
ಕಳಪೆ ಸಿಮೆಂಟ್ ಹಾಕಿ ಸಿಸಿ ರಸ್ತೆ ನಿರ್ಮಾಣ:ಕಾಮಗಾರಿಯ ನಿಯಮಗಳ ಅನುಸಾರ ರಸ್ತೆಯ ಅಕ್ಕ ಪಕ್ಕ ಚರಂಡಿಗಳನ್ನು ನಿರ್ಮಿಸಬೇಕು. ನಂತರ ಸಿಸಿರಸ್ತೆ ನಿರ್ಮಾಣವಾಗಬೇಕು. ಆದರೆ ಅದಾವುದನ್ನು ಮಾಡದೇ ಕಳಪೆ ಸಿಮೆಂಟ್ ಹಾಕಿ ಸಿಸಿರಸ್ತೆ ಮಾಡಿದ್ದಾರೆ. ಸಿಮೆಂಟ್ ಹಾಕುವ ಮೊದಲು 6 ಇಂಚು ವೈಟ್ ಮಿಕ್ಸ್ ಸಿಮೆಂಟ್ ಮಿಶ್ರಣ ಹಾಕಬೇಕು. ಸ್ಟೀಲ್ ಅಳವಡಿಕೆ ಮಾಡಬೇಕು. ಪ್ಲಾಸ್ಟಿಕ್ ಕವರ್‍ಗಳನ್ನು ಹಾಕಿದ ನಂತರ 6 ಇಂಚು ಸಿಮೆಂಟ್ ಕಾಂಕ್ರೀಟ್ ಹಾಕಬೇಕು. ಆದರೆ ಈ ನಿಯಮಗಳನ್ನು ಪಾಲಿಸಿಲ್ಲ. ಸರಿಯಾಗಿ ನೀರಿನ ಕ್ಯೂರಿಂಗ್ ಮಾಡಿಲ್ಲ. ಬೇಕಾ ಬಿಟ್ಟಿ ತರಾತುರಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತಿದೆ. ಕಳಪೆ ಕಾಮಗಾರಿ ಕುರಿತು ಇಲಾಖೆ ಎಂಜಿನಿಯರ್ ಗಮನಕ್ಕೆ ತರಲಾಗಿದ್ದರೂ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದಾರೆ. ಮಾಹಿತಿ ಕೇಳಿದರೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಸರಕಾರದ ಹಣ ವ್ಯರ್ಥವಾಗುತ್ತಿದೆ ಎಂದು ಸ್ಥಳೀಯ ಮುಖಂಡ ರೇವಣ್ಣ ಆಗ್ರಹಿಸಿದರು.
ಶಾಸಕರ ಹಿಂಬಾಲಕರ ನೆಲೆಗೆ ಸರ್ಕಾರಿ ನೌಕರರ ಕಟ್ಟಡ ನೆಲಸಮ:ಪಟ್ಟಣ ಪಂಚಾಯಿತಿ ಅನುಮತಿ ಇಲ್ಲದೇ ಸರಕಾರಿ ನೌಕರರ ಸಂಘದ ಕಟ್ಟಡವನ್ನು ನೆಲಸಮ ಮಾಡಿರುವುದು ಕಾನೂನು ಬಾಹಿರ. ಕಟ್ಟಡ ಕೆಡವಿದ ನಂತರ ಡ್ರೈನೇಜ್ ಮಾಡುತ್ತೇವೆ ಎಂದು ಹೇಳಿದ್ದ ಶಾಸಕರು ಅದನ್ನು ಗುತ್ತಿಗೆದಾರರಿಂದ ಮಾಡಿಸಿಲ್ಲ. ಕಟ್ಟಡ ನೆಲಸಮದ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವಿದೆ. ಶಾಸಕರ ಹಿಂಬಾಲಕರಿಗೆ ನೆಲೆ ಕಲ್ಪಿಸಲು ಈ ಕಟ್ಟಡವನ್ನು ನೆಲಸಮ ಮಾಡಲಾಗಿದೆ ಎಂದು ಮಾಜಿ ಶಾಸಕ ಎಚ್.ಪಿ.ರಾಜೇಶ್ ಆರೋಪಿಸಿದರು.
ಪಟ್ಟಣದಲ್ಲಿ ಏನಾಗುತ್ತಿದೆ ಎಂದು ಪಪಂ ಅಧ್ಯಕ್ಷರ ಗಮನಕ್ಕೆ ತಾರದೇ ಯಾವುದೇ ಮಾಹಿತಿ ಇಲ್ಲದೆ. ಕೆಲಸವನ್ನು ಮಾಡಲಾಗುತ್ತಿದೆ ಎಂದು ಪಪಂ ಅಧ್ಯಕ್ಷ ನವೀನ್‍ಕುಮಾರ್ ತಿಳಿಸಿದ್ದಾರೆ. ಸಿಸಿ ರಸ್ತೆ ಕಾಮಗಾರಿ ಕಳಪೆಯಾಗಿದ್ದರೆ ತಕ್ಷಣವೇ ಕೆಲಸವನ್ನು ಸ್ಥಗಿತಗೊಳಿಸಬೇಕು ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಮಾಜಿ ತಾ.ಪಂ ಸದಸ್ಯ ಕಾನನಕಟ್ಟೆ ಕುಬೇರಪ್ಪ, ನಾಯಕ ಸಮಾಜದ ಮಾಜಿ ಅಧ್ಯಕ್ಷರಾದ ಸೂರಲಿಂಗಪ್ಪ, ಲೋಕೇಶ್, ಮಂಜುನಾಥ್, ವಿ.ಓಬಳೇಶ್, ಬೋರಣ್ಣ ಮತ್ತಿತರರು ಹಾಜರಿದ್ದರು.