ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಎರಡು ಕೋಟಿ ರುಪಾಯಿ ಹಣ ಸಾಗಾಣಿಕೆ ಪ್ರಕರಣದಲ್ಲಿ ಈಗಾಗಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯಲ್ಲಿ ಸಿಕ್ಕಿಬಿದ್ದಿರುವ ಕಲಬುರಗಿ ಮಾಜಿ ಮೇಯರ್, ಕೆಪಿಸಿಸಿ ಮಾಜಿ ಪ್ರ. ಕಾರ್ಯದರ್ಶಿ ಶರಣು ಮೋದಿ ಸೇರಿ ನಾಲ್ವರ ವಿರುದ್ಧ ಜಿಲ್ಲೆಯ ವಾಡಿ ರೇಲ್ವೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಕಲಬುರಗಿ ದಕ್ಷಿಣ ಮತಕ್ಷೇತ್ರ ಫ್ಲೈಯಿಂಗ್ ಸ್ಕ್ವಾಡ್ ಚುನಾವಣಾಧಿಕಾರಿ ಸೂರ್ಯಕಾಂತ ಚಂದ್ರಶೇಖರ ಕಾರಭಾರಿ ಅವರು ಏ.28ರಂದು ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್ ಅನ್ನು ಪ್ರಿನ್ಸಿಪಲ್ ಜೆಎಂಎಫ್ಸಿ 2ನೇ ನ್ಯಾಯಾಲಯಕ್ಕೂ ರೇಲ್ವೆ ಪೊಲೀಸರು ಸಲ್ಲಿಸಿದ್ದಾರೆ.
ಬೆಂಗಳೂರಿನಿಂದ ಕಲಬುರಗಿಗೆ ರೈಲಿನ ಮೂಲಕ ಹಣದ ಕಂತೆಗಳನ್ನು ತಂದು ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಚನ್ನಮಲ್ಲಪ್ಪ ಹಾವಶೆಟ್ಟಿ, ಪ್ರೀತಮ್ ಶಿವಕುಮಾರ್ ಗಂಗಸಿರಿ, ನಾಗೇಶ ಮಲ್ಲಿಕಾರ್ಜುನ ಬಿರಾದಾರ್ ಹಾಗೂ ಮಾಜಿ ಮೇಯರ್ ಶರಣಕುಮಾರ್ ಮೋದಿ ಇವರ ವಿರುದ್ಧ ಜನಪ್ರತಿನಿಧಿ ಕಾಯ್ದೆ 1951 ರ 123 ನೇ ಕಲಂ ಅಡಿಯಲ್ಲಿ 171 ಬಿ, 171 ಸಿ, 171 ಎಫ್ ಅನುಸಾರ ಪ್ರಕರಣ ದಾಖಲಾಗಿದೆ. ಈ ಎಫ್‌ಆರ್‌ನಲ್ಲಿ ಶರಣು ಮೋದಿಯವರನ್ನು 4ನೇ ಆರೋಪಿಯನ್ನಾಗಿ ಮಾಡಲಾಗಿದೆ.ಏ. 27ರಂದು ಬೆಳಗ್ಗೆ ಬೆಂಗಳೂರಿನಿಂದ ಕಲಬುರಗಿಗೆ ರೇಲ್ವೆಯಲ್ಲಿ ಬಂದಿದ್ದ ಚನ್ನಮಲ್ಲಪ್ಪ ಹಾವಶೆಟ್ಟಿ, ಪ್ರೀತಮ ಗಂಗಸಿರಿ ಹಾಗೂ ನಾಗಶ ಮಲ್ಲಿಕಾರ್ಜುನ ಬಿರಾದಾರ್ ಅವರು 2 ಸೂಟ್‌ಕೇಸ್‌ಗಳಲ್ಲಿ ಹಣ ತುಂಬಿಕೊಂಡು ಸಾಗಾಣಿಕೆ ಮಾಡುತ್ತಿರುವಾಗಲೇ ರೇಲ್ವೆ ಇಲಾಖೆಯ ವಾಹನ ನಿಲುಗಡೆ ಸ್ಥಳದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದಿದ್ದರು.
ಇವರಿದ್ದ ಇನ್ನೋವಾ ಕಾರ್‌ನಲ್ಲಿ 1, 99, 92,000 ರುಪಾಯಿ ಹಣವನ್ನು ಸಾಗಾಟ ಮಾಡುತ್ತಿರೋದು ಬೆಳಕಿಗೆಬಂದಿತ್ತು. ಈ ಕುರಿತಂತೆ ಕನ್ನಡಪ್ರಭದಲ್ಲಿ ವಿಸ್ತೃತ ವರದಿಯೂ ಪ್ರಕಟವಾಗಿತ್ತು. ಈ ಸಂಗತಿ ಚುನಾವಣೆಯ ಫ್ಲೈಯಿಂಗ್ ಸ್ಕ್ವಾಡ್ ತಂಡದವರು ಅರಿತು , ಸದರಿ ಪ್ರಕರಣದ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸಂಪೂರ್ಣ ಮಾಹಿತಿ ಪಡೆದಿದ್ದಾರೆ.ಆದಾಯ ತೆರಿಗೆ ಅಧಿಕಾರಿಗಳು ತಾವೂ ಕೂಡಾ 2 ಕೋಟಿ ರು. ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡಸುತ್ತಿರುವುದಾಗಿ ಹೇಳಿದ್ದಲ್ಲದೆ ಸಹಾಯಕ ಚುನಾವಣಾ ಅಧಿಕಾರಿ ಕಲಬುರಗಿ ದಕ್ಷಿಣ ಇವರಿಗೆ ಪತ್ರ ಬರೆದು ಚುನಾವಣೆ ನೀತಿ ನಿಯಮಗಳಡಿ ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ತಾವೂ ಕೈಗೊಳ್ಳಬೇಕೆಂದು ಕೋರಿದ್ದರಿಂದ ಇದೀಗ ಫ್ಲೈಯಿಂಗ್ ಸ್ವ್ಕಾಡ್ ತಂಡದವರು ಪ್ರಕರಣ ದಾಖಲಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಜಪ್ತಿ ಮಾಡಲಾಗಿರುವ ಕೆಎ 68, 777 ಇನ್ನೋವಾ ಕಾರಿನ ಮಾಲೀಕರಾರು ಎಂದು ಪತ್ತೆ ಮಾಡಿದಾಗ ಜಾನವಿ ಶರಣಕುಮಾರ್ ಮೋದಿ ಎಂದು ಗೊತ್ತಾಗಿದೆ. ಜಾನವಿ ಇವರು ಶರಣು ಮೋದಿಯವರ ಪುತ್ರಿ. ಇದಲ್ಲದೆ ಕಾರಿನ ನಂಬರ್ ಪ್ಲೇಟ್ ಮೇಲೆ ಕೆಪಿಸಿಸಿ ಪ್ರ. ಕಾರ್ಯದರ್ಶಿಗಳು ಎಂದು ಬರೆದ ಆಂಗ್ಲ ನಾಮ ಫಲಕವೂ ಇದೆ. ಹೀಗಾಗಿ ಇವರು ಕಾಂಗ್ರೆಸ್ ರಾಜಕೀಯ ಪಕ್ಷಕ್ಕೆ ಸಂಬಂಧಿಸಿದವರು ಎಂದು ಗೊತ್ತಾಗಿದೆ.ಇದಲ್ಲದೆ ಸದರಿ ಹಣವನ್ನು ಬೆಂಗಳೂರಿನಿಂದ ರೈಲಿನಲ್ಲಿ ತಂದು ಚುನಾವಣೆಯಲ್ಲಿ ಅಕ್ರಮವಾಗಿ ಹಂಚಿಕೆ ಮಾಡಲು ಬಳಸಲು ಯೋಜಿಸಲಾಗಿತ್ತು ಎಂದು ಬಲವಾದ ಶಂಕೆಯೂ ಮೂಡಿದೆ ಎಂದು ಫ್ಲೈಯಿಂಗ್ ಸ್ಕ್ವಾಡ್ ತಂಡದ ಅಧಿಕಾರಿಗಳು ತಮ್ಮ ದೂರಿನಲ್ಲಿ ಅಭಿಪ್ರಾಯಪಟ್ಟಿದ್ದು ಇದು ಕೂಡಾ ಪ್ರಥಮ ವರ್ತಮಾನ ವರದಿಯಲ್ಲಿ ದಾಖಲಾಗಿದೆ.