ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಪ್ಪಳ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ನ. 21 ಮತ್ತು 22ರಂದು ಕಾರಟಗಿ ಪಟ್ಟಣದ ನವಲಿ ರಸ್ತೆಯ ಕೆಪಿಎಸ್ ಪ್ರೌಢಶಾಲೆಯ ಶ್ರೀ ಸಿದ್ಧೇಶ್ವರ ರಂಗಮಂದಿರ ಆವರಣದಲ್ಲಿ ನಡೆಯಲಿದೆ.
ಕೊಪ್ಪಳ: ಕನ್ನಡ ಸಾಹಿತ್ಯದ ಕಂಪು ಹರಡಲು ಕಾರಟಗಿ ಪಟ್ಟಣ ಸಜ್ಜಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಪ್ಪಳ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ನ. 21 ಮತ್ತು 22ರಂದು ಕಾರಟಗಿ ಪಟ್ಟಣದ ನವಲಿ ರಸ್ತೆಯ ಕೆಪಿಎಸ್ ಪ್ರೌಢಶಾಲೆಯ ಶ್ರೀ ಸಿದ್ಧೇಶ್ವರ ರಂಗಮಂದಿರ ಆವರಣದಲ್ಲಿ ನಡೆಯಲಿದೆ.
ಹಿರಿಯ ಸಂಶೋಧಕ ಹಾಗೂ ಚಿಂತಕ ಡಾ. ಶರಣಬಸಪ್ಪ ಕೋಲ್ಕಾರ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ಸಮ್ಮೇಳನಕ್ಕೆ ಆಧ್ಯಾತ್ಮ ಕವಿ, ರಾಜಯೋಗಿ ಶ್ರೀ ಚಿದಾನಂದ ಅವಧೂತರ ಮಹಾಮಂಟಪ ಹಾಗೂ ಸಾಹಿತ್ಯ ಪ್ರೇಮಿ ರಾಜಾ ಹಿರೇರಂಗಪ್ಪ ನಾಯಕ ವೇದಿಕೆ ಸಜ್ಜುಗೊಂಡಿವೆ. ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರ ಸ್ಮರಣಾರ್ಥ 17 ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.ಧ್ವಜಾರೋಹಣ, ಮೆರವಣಿಗೆ: ನ. 21ರಂದು ಬೆಳಗ್ಗೆ 7.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಹೇರೂರು ಪರಿಷತ್ತಿನ ಧ್ವಜಾರೋಹಣ ಹಾಗೂ ಕಾರಟಗಿ ತಾಲೂಕು ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಕನ್ನಡ ಧ್ವಜಾರೋಹಣ ಮಾಡಲಿದ್ದಾರೆ. ಬಳಿಕ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕಗಳ ಪಥಸಂಚಲನ ನಡೆಯಲಿದೆ.
ಬೆಳಗ್ಗೆ 9ಕ್ಕೆ ಭವ್ಯ ಮೆರವಣಿಗೆಗೆ ಶ್ರೀ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಚಾಲನೆ ನೀಡಲಿದ್ದಾರೆ. ಎಪಿಎಂಸಿ ಮಾರುಕಟ್ಟೆಯ ಮುಖ್ಯದ್ವಾರದಿಂದ ಆರಂಭವಾಗುವ ಮೆರವಣಿಗೆ ಆರ್.ಜಿ. ಮುಖ್ಯರಸ್ತೆ, ಕನಕದಾಸ ವೃತ್ತ, ಹೇಮರೆಡ್ಡಿ ಮಲ್ಲಮ್ಮ ವೃತ್ತ ಹಾಗೂ ದಲಾಲಿ ಬಜಾರ್ ಮೂಲಕ ಸಮ್ಮೇಳನದ ಮುಖ್ಯ ವೇದಿಕೆ ತಲುಪಲಿದೆ. ಸಿದ್ದಿ ಕುಣಿತ, ಹಗಲುವೇಷ, ಡೊಳ್ಳು ಕುಣಿತ, ಲಂಬಾಣಿ ನೃತ್ಯ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಯ ಮೆರುಗು ಹೆಚ್ಚಿಸಲಿವೆ.ಸಮ್ಮೇಳನ ಉದ್ಘಾಟನೆ: ಬೆಳಗ್ಗೆ 10.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಕಾರಟಗಿಯ ಶ್ರೀ ಮರುಳಸಿದ್ದಯ್ಯಸ್ವಾಮಿ ಹಿರೇಮಠ ಹಾಗೂ ತಲೇಖಾನ ಹಿರೇಮಠದ ಶ್ರೀ ವೀರಭದ್ರ ಶರಣರು ವಹಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಹೇರೂರು ಸ್ವಾಗತಿಸಲಿದ್ದು, ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. 14ನೇ ಸಮ್ಮೇಳನದ ಸರ್ವಾಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಧ್ವಜ ಹಸ್ತಾಂತರಿಸಲಿದ್ದಾರೆ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.ಯರಡೋಣಾ ಸರ್ಕಾರಿ ಪ್ರೌಢಶಾಲೆಯ ಮುಖ್ಯಗುರು ರಾಘವೇಂದ್ರ ಕಂತಿ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿಕೊಡಲಿದ್ದು, ಸಂಸದ ರಾಜಶೇಖರ ಹಿಟ್ನಾಳ ಸಮ್ಮೇಳನಾಧ್ಯಕ್ಷರ ನುಡಿಹೊತ್ತಿಗೆ ಬಿಡುಗಡೆ ಮಾಡಲಿದ್ದಾರೆ. ಬಳಿಕ ಸರ್ವಾಧ್ಯಕ್ಷ ಡಾ. ಶರಣಬಸಪ್ಪ ಕೋಲ್ಕಾರ್ ಅವರ ಅಧ್ಯಕ್ಷೀಯ ನುಡಿಗಳಿರಲಿವೆ.
ವಿಧಾನಪರಿಷತ್ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ ಅವರು ಸಮ್ಮೇಳನಾಧ್ಯಕ್ಷರ ಪರಿಚಯ ಗ್ರಂಥ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ವಚನ ಟಿವಿ ಸಂಪಾದಕ ಸಿದ್ದು ಯಾಪಲಪರವಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ.ಪುಸ್ತಕ, ವಾಣಿಜ್ಯ ಮಳಿಗೆಗಳ ಉದ್ಘಾಟನೆ: ಕುಷ್ಟಗಿ ಶಾಸಕ ದೊಡ್ಡನಗೌಡ ಎಚ್. ಪಾಟೀಲ್ ವಾಣಿಜ್ಯ ಮಳಿಗೆಗಳನ್ನು, ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಪುಸ್ತಕ ಮಳಿಗೆಗಳನ್ನು ಹಾಗೂ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಕರಕುಶಲ ಮಳಿಗೆಗಳನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಆರಂಭದಲ್ಲಿ ಜಾನಪದ ಅಕಾಡೆಮಿ ಸದಸ್ಯ ಮಹೆಬೂಬ್ ಕಿಲ್ಲೇದಾರ್ ನಾಡಗೀತೆ ಹಾಡಲಿದ್ದು, ಗಾಯಕ ಎಂ. ಅಮರೇಶಗೌಡ ರೈತಗೀತೆ ಪ್ರಸ್ತುತಪಡಿಸಲಿದ್ದಾರೆ. ರಾಜ್ಯೋತ್ಸವ ಹಾಗೂ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಐವರು ಸಾಧಕರಿಗೆ ವಿಶೇಷ ಗೌರವ ಸನ್ಮಾನ ನಡೆಯಲಿದೆ.ಸಮ್ಮೇಳನದಲ್ಲಿ ಜಿಲ್ಲೆಯ ಸಾಹಿತ್ಯ, ಸಂಸ್ಕೃತಿ, ಜಾನಪದ ಹಾಗೂ ಕನ್ನಡದ ಹಿರಿಮೆ ಅನಾವರಣಗೊಳ್ಳಲಿದ್ದು, ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸ್ವಾಗತ ಸಮಿತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮನವಿ ಮಾಡಿದೆ.