ಹಾವೇರಿಯಲ್ಲಿ ಇಂದಿನಿಂದ ಎರಡು ದಿನಗಳ ಸೊಪ್ಪಿನ ಮೇಳ

| Published : Oct 05 2024, 01:33 AM IST

ಹಾವೇರಿಯಲ್ಲಿ ಇಂದಿನಿಂದ ಎರಡು ದಿನಗಳ ಸೊಪ್ಪಿನ ಮೇಳ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯಕ್ಕೆ ಪೂರಕವಾದ ಸೊಪ್ಪುಗಳ ಪುನರುಜ್ಜೀವನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಹಾಗೂ ಸೊಪ್ಪಿನ ವೈವಿಧ್ಯವನ್ನು ಮತ್ತೆ ಜನಪ್ರಿಯಗೊಳಿಸಲು ಅ. ೫ ಮತ್ತು ೬ರಂದು ನಗರದ ಹೊಸಮಠದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಎರಡು ದಿನಗಳ ಸೊಪ್ಪಿನ ಮೇಳ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ಶಾಂತಕುಮಾರ ಹೇಳಿದರು.

ಹಾವೇರಿ: ಆರೋಗ್ಯಕ್ಕೆ ಪೂರಕವಾದ ಸೊಪ್ಪುಗಳ ಪುನರುಜ್ಜೀವನಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಹಾಗೂ ಸೊಪ್ಪಿನ ವೈವಿಧ್ಯವನ್ನು ಮತ್ತೆ ಜನಪ್ರಿಯಗೊಳಿಸಲು ಅ. ೫ ಮತ್ತು ೬ರಂದು ನಗರದ ಹೊಸಮಠದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಎರಡು ದಿನಗಳ ಸೊಪ್ಪಿನ ಮೇಳ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ಶಾಂತಕುಮಾರ ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊಪ್ಪಿನ ಮೇಳವನ್ನು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಸಕತ್ ಸೊಪ್ಪು ಪುಸ್ತಕ ಬಿಡುಗಡೆಯಾಗಲಿದೆ. ನಾಗರಹೊಳೆ ಕಾಡಿನ ಜೇನು ಕುರುಬ ಸಮುದಾಯದ ಪಾರ್ವತಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ ಎಂದರು.ಸಹಜ ಸಮೃದ್ಧ - ಸಾವಯವ ಕೃಷಿಕರ ಬಳಗ ಹಾಗೂ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಜೊತೆಗೂಡಿ ಆಯೋಜಿಸಿರುವ ಸೊಪ್ಪಿನ ಮೇಳದಲ್ಲಿ ನೂರಕ್ಕೂ ಹೆಚ್ಚಿನ ಸೊಪ್ಪುಗಳು ಪ್ರದರ್ಶನಕ್ಕೆ ಬರಲಿವೆ. ಧಾರವಾಡ, ಹಾವೇರಿ, ಬೆಳಗಾವಿ, ಮೈಸೂರು ಮತ್ತು ತುಮಕೂರು ಭಾಗಗಳಿಂದ ಬರುತ್ತಿರುವ ರೈತ ಗುಂಪುಗಳು ಬಗೆ ಬಗೆಯ ಸೊಪ್ಪು ಮತ್ತು ಸೊಪ್ಪಿನ ಮೌಲ್ಯವರ್ಧಿತ ಪದಾರ್ಥಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ದಿನ ಬಳಕೆಯ ಸೊಪ್ಪು, ಔಷಧೀಯ ಸೊಪ್ಪು, ಸಾಗುವಳಿ ಮಾಡದ ನಿಸರ್ಗದತ್ತ ಸೊಪ್ಪು, ಕಾಡಿನ ಸೊಪ್ಪು, ಬಳ್ಳಿ ಸೊಪ್ಪು, ಮರ ಆಧಾರಿತ ಸೊಪ್ಪು ಮತ್ತು ವಿದೇಶಿ ಸೊಪ್ಪುಗಳನ್ನು ನೋಡಬಹುದು ಎಂದು ಮಾಹಿತಿ ನೀಡಿದರು.ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಎಸ್.ಡಿ. ಬಡಿಗೇರ ಮಾತನಾಡಿ, ಈ ಎರಡೂ ದಿನಗಳ ಕಾಲ ಬೆಳಿಗ್ಗೆ ೧೦ ರಿಂದ ರಾತ್ರಿ ೮ ರವರೆಗೆ ಮೇಳ ಇರುತ್ತದೆ. ಸೊಪ್ಪಿನ ಕೃಷಿ ಮತ್ತು ಸೊಪ್ಪಿನ ಮೌಲ್ಯವರ್ಧನೆಯ ಅವಕಾಶಗಳ ಬಗ್ಗೆ ರೈತರಿಗೆ ತರಬೇತಿ, ವಿಷಮುಕ್ತವಾಗಿ ಸೊಪ್ಪಿನ ಕೃಷಿ ಮಾಡುವ ಬಗೆ, ದೇಸಿ ಸೊಪ್ಪಿನ ತಳಿಗಳ ಬೀಜೋತ್ಪಾದನೆಯ ಬಗ್ಗೆ ಪ್ರಗತಿಪರ ಸಾವಯವ ರೈತರಾದ ಮಂಜುನಾಥ ಹುಲಗೂರ ಮಾಹಿತಿ ನೀಡಲಿದ್ದಾರೆ. ಬೆಂಗಳೂರು ನಗರಕ್ಕೆ ಸಾವಯವ ಸೊಪ್ಪು ಮತ್ತು ತರಕಾರಿ ಸರಬರಾಜು ಮಾಡಿ, ವಾರ್ಷಿಕ ಹದಿನೇಳು ಕೋಟಿ ರು., ವಹಿವಾಟು ಮಾಡುತ್ತಿರುವ ಸಹಜ ಆರ್ಗಾನಿಕ್ಸ್‌ನ ಆನಂದತೀರ್ಥ ಪ್ಯಾಟಿ ಅನುಭವ ಹಂಚಿಕೊಳ್ಳಲಿದ್ದಾರೆ.ಅ.೬ರಂದು ಮಧ್ಯಾಹ್ನ ''ಅಜ್ಜಿಯ ಮಡಿಲು ಸೊಪ್ಪಿನ ಕಡಲು'' ಕಾರ್ಯಕ್ರಮದಲ್ಲಿ ತುಮಕೂರಿನ ಮುರಳೀಧರ್ ಹೊಲ, ಬೇಲಿ, ಗದ್ದೆ ಮತ್ತು ರಸ್ತೆ ಬದಿಗಳಲ್ಲಿ ಸಿಗುವ ಸೊಪ್ಪಿನ ವೈವಿಧ್ಯವನ್ನು ಪರಿಚಯಿಸಲಿದ್ದಾರೆ. ಹೆಗ್ಗಡದೇವನಕೋಟೆಯ ಹಳ್ಳಿಗರು ''ಬೆರಕೆ ಸೊಪ್ಪನ್ನು'' ಮೇಳದಲ್ಲಿ ಪರಿಚಯಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೃಷಿಕ ಶ್ರೇಣಿಕರಾಜ, ಎ.ಮಾಲತೇಶ ಇದ್ದರು.ಸೊಪ್ಪಿನ ಅಡುಗೆ ಸ್ಪರ್ಧೆ: ಸೊಪ್ಪಿನ ಮೇಳದ ಅಂಗವಾಗಿ ಅ.೬ರಂದು ಸೊಪ್ಪಿನ ಅಡುಗೆ ಸ್ಪರ್ಧೆ ಹಾಗೂ ಮಕ್ಕಳಿಗಾಗಿ ಸೊಪ್ಪು- ನಾ ಕಂಡಂತೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಅ.೬ರಂದು ಬೆಳಿಗ್ಗೆ ೧೦ ಗಂಟೆಗೆ ೫ ರಿಂದ ೧೨ ವರ್ಷದ ಮಕ್ಕಳಿಗಾಗಿ ಸೊಪ್ಪು- ನಾ ಕಂಡಂತೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಸೊಪ್ಪಿನ ಕೃಷಿ, ಸೊಪ್ಪಿನ ಅಡುಗೆ, ಸೊಪ್ಪಿನ ಸಂಸ್ಕೃತಿ ಮತ್ತು ಮಾರುಕಟ್ಟೆಯ ಸೊಪ್ಪಿನ ಲೋಕವನ್ನು ಮಕ್ಕಳು ಚಿತ್ರದ ಮೂಲಕ ಅನಾವರಣ ಮಾಡಬೇಕು. ಸ್ಪರ್ಧೆಯನ್ನು ೫-೯ ವರ್ಷ ಮತ್ತು ೯-೧೨ ವರ್ಷ ಎಂದು ೨ ವಿಭಾಗಗಳಲ್ಲಿ ನಡೆಸಲಾಗುತ್ತದೆ. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು.