ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗದಿಂದ ಚೆನ್ನೈ ಹಾಗೂ ಬೆಂಗಳೂರಿಗೆ ತೆರಳಬೇಕಿದ್ದ ವಿಮಾನ ಸಂಚಾರ ಕೊನೇ ಕ್ಷಣದಲ್ಲಿ ರದ್ದಾದ ಕಾರಣ ನೂರಾರು ಪ್ರಯಾಣಿಕರು ಶಿವಮೊಗ್ಗದ ವಿಮಾನ ನಿಲ್ದಾಣದಲ್ಲಿ ಪರದಾಡಿದರು.

ಹೈದರಾಬಾದ್‌ನಿಂದ ಶಿವಮೊಗ್ಗ, ಶಿವಮೊಗ್ಗದಿಂದ ಚೆನ್ನೈಗೆ ತೆರಳಬೇಕಿದ್ದ ಸ್ಟೈಸ್ ಜೆಟ್ ಮತ್ತು ಬೆಂಗಳೂರಿನಿಂದ ಶಿವಮೊಗ್ಗ-ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಬೇಕಿದ್ದ ಇಂಡಿಗೋ ವಿಮಾನ ಸಂಚಾರ ತಾಂತ್ರಿಕ ಕಾರಣಗಳಿಂದ ರದ್ದಾದವು. ಹೈದರಾಬಾದ್‌ನಿಂದ ಬೆಳಗ್ಗೆ 9.30ಕ್ಕೆ ಹೊರಟು ಶಿವಮೊಗ್ಗಕ್ಕೆ ಬರಬೇಕಿದ್ದ ಸ್ಟೈಸ್ ಜೆಟ್ ಹೈದರಾಬಾದ್‌ನಲ್ಲೇ ರದ್ದಾಯಿತು. ಇದರಿಂದ ಮಧ್ಯಾಹ್ನ 12.30ಕ್ಕೆ ಶಿವಮೊಗ್ಗದಿಂದ ಚೆನ್ನೈಗೆ ತೆರಳಬೇಕಿದ್ದ 50ಕ್ಕೂ ಅಧಿಕ ಪ್ರಯಾಣಿಕರು ಸಕಾಲಕ್ಕೆ ತೆರಳಲಾಗದೆ ಪರದಾಡಿದರು. ಕೊನೇ ಕ್ಷಣದಲ್ಲಿ ರದ್ದಾದ ಮಾಹಿತಿ ತಿಳಿಸಿದ ವಿಮಾನಯಾನ ಸಂಸ್ಥೆ ವಿರುದ್ಧ ಕಿಡಿಕಾರಿದರು. ಶಿವಮೊಗ್ಗ -ಚೆನ್ನೈ ನಡುವೆ ವಿಮಾನ ರದ್ದಾದ ಕಾರಣಕ್ಕೆ ಸ್ಟೈಸ್ ಜೆಟ್ ಸಂಸ್ಥೆಯು ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಯಾಗಿ ಖಾಸಗಿ ಬಸ್ ಬುಕ್ ಮಾಡಿತ್ತು. ಆದರೆ ದೂರದ ಪ್ರಯಾಣಕ್ಕಾಗಿ ಮಾಡಿದ್ದ ಬಸ್‌ ನೋಡಿ ಪ್ರಯಾಣಿಕರು ದಂಗಾದರು. ರಾಜಧಾನಿಯಿಂದ ಶಿವಮೊಗ್ಗಕ್ಕೆ ಮಧ್ಯಾಹ್ನ ಬರಬೇಕಿದ್ದ ಇಂಡಿಗೋ ವಿಮಾನ ಕೂಡ ಬೆಂಗಳೂರಿನಲ್ಲೇ ರದ್ದಾಯಿತು. ಹಾಗಾಗಿ ಬೆಂಗಳೂರಿಗೆ ತೆರಳಲು ಸೋಗಾನೆ ವಿಮಾನ ನಿಲ್ದಾಣಕ್ಕೆ ಬಂದಿದ್ದ 50ಕ್ಕೂ ಅಧಿಕ ಪ್ರಯಾಣಿಕರು ವಿಮಾನಯಾನ ಸಂಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ತಾಂತ್ರಿಕ ಕಾರಣಗಳಿಂದ ವಿಮಾನ ಸಂಚಾರ ರದ್ದಾಗಿದೆ ಎಂದು ಸ್ಟೈಸ್ ಜೆಟ್ ಮತ್ತು ಇಂಡಿಗೋ ಸಂಸ್ಥೆಗಳು ತಿಳಿಸಿವೆ.