ಮಳೆಗೆ ಎರಡು ಮನೆ ಭಾಗಶಃ ಕುಸಿತ, ಮೂವರಿಗೆ ಗಾಯ

| Published : Jul 21 2024, 01:23 AM IST

ಸಾರಾಂಶ

ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ವರೆಗೆ 18 ಮನೆಗೆ ಹಾನಿಯಾಗಿದ್ದರೆ ಶನಿವಾರ ಮತ್ತೆ ಎರಡು ಮನೆಗೆ ಹಾನಿಯಾಗಿದೆ. ಇದರಿಂದ ಮನೆಗಳ ಹಾನಿ ಸಂಖ್ಯೆ 20ಕ್ಕೆ ಏರಿದೆ.

ಹುಬ್ಬಳ್ಳಿ:

ಹುಬ್ಬಳ್ಳಿ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಶನಿವಾರವೂ ಜಡಿ ಮಳೆ ಮುಂದುವರಿದಿದ್ದು, ಸೂರ್ಯನ ದರ್ಶನವಿಲ್ಲದೆ ನಗರದಲ್ಲಿ ಚಳಿಗಾಲದ ವಾತಾವರಣ ಸೃಷ್ಟಿಸಿದೆ. ಈ ನಡುವೆ ಜಿಟಿಜಿಟಿ ಮಳೆಗೆ ತಾಲೂಕಿನ ಚನ್ನಾಪುರದಲ್ಲಿ ಮನೆ ಗೋಡೆ ಕುಸಿದು ಮೂವರು ಗಾಯಗೊಂಡಿದ್ದಾರೆ.

20 ಮನೆಗೆ ಹಾನಿ:ಹುಬ್ಬಳ್ಳಿ ಶಹರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ವರೆಗೆ 18 ಮನೆಗೆ ಹಾನಿಯಾಗಿದ್ದರೆ ಶನಿವಾರ ಮತ್ತೆ ಎರಡು ಮನೆಗೆ ಹಾನಿಯಾಗಿದೆ. ಇದರಿಂದ ಮನೆಗಳ ಹಾನಿ ಸಂಖ್ಯೆ 20ಕ್ಕೆ ಏರಿದೆ. ತಾಲೂಕಿನ ಚನ್ನಾಪೂರದ ಮನೆ ಗೋಡೆ ಕುಸಿತದಲ್ಲಿ ಗ್ರಾಮದ ಯಲ್ಲವ್ವ ಫಕ್ಕೀರಪ್ಪ ನಡೂರ, ಮುತ್ತಪ್ಪ ಫಕ್ಕೀರಪ್ಪ ನಡೂರ, ಗಂಗವ್ವ ಗುರುಸಿದ್ದಪ್ಪ ಹುಲಮನಿ ಅವರಿಗೆ ಗಾಯಗಳಾಗಿದ್ದು, ಚಿಕಿತ್ಸೆ ನೀ​ಡಲಾಗಿದೆ. ತಹಸೀಲ್ದಾ​ರ್‌ ಪ್ರಕಾಶ ನಾಶಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ತಗ್ಗು ಗುಂಡಿಗಳಲ್ಲಿ ನೀರು:

ಮಹಾನಗರದ ಕೆಲ ಪ್ರಮುಖ ರಸ್ತೆಗಳು ಸೇರಿದಂತೆ ಬಡಾವಣೆ ರಸ್ತೆಗಳಲ್ಲಿನ ತಗ್ಗು ಗುಂಡಿಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವಂತಾಯಿತು. ಅನೇಕ ರಸ್ತೆಗಳಲ್ಲಿ ತಗ್ಗು-ಗುಂಡಿಗಳು ಬಿದ್ದ ಪರಿಣಾಮ ಬೈಕ್‌ ಸವಾರರು ಬಿದ್ದು ಗಾಯಗೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ನಿ​ರಂತ​ರವಾ​ಗಿ ಬೀಳುತ್ತಿರುವ ತುಂತುರು ಮಳೆಗೆ ಮಣ್ಣಿನ ರಸ್ತೆಗಳು ಕೆಸರಿನ ಗದ್ದೆಗಳಂತಾಗಿವೆ. 20.07 ಮಿಮೀ ಮಳೆ:

ಹುಬ್ಬಳ್ಳಿ ಶಹರ ಮತ್ತು ಗ್ರಾಮೀಣ ತಾಲೂಕು ಪ್ರದೇಶದಲ್ಲಿ ಶುಕ್ರವಾರ ಸತತ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ಥಗೊಳ್ಳುವಂತಾಗಿದೆ. ಹುಬ್ಬಳ್ಳಿ ಶಹರ 10.02 ಮಿಮೀ, ಛಬ್ಬಿ 9.04 ಮಿಮೀ, ಶಿರಗುಪ್ಪಿ 8.06 ಮಿಮೀ, ಬ್ಯಾಹಟ್ಟಿ 8.04ಮಿ ಮೀ. ಮಳೆಯಾ​ಗಿ​ದೆ.ಬಾಗಿನ ಇಂದು:

ಸತತ ಮಳೆಯಿಂದ ಐತಿಹಾಸಿಕ ಉಣಕಲ್‌ ಕೆರೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಉಣಕಲ್‌ ಗ್ರಾಮದ ನಿವಾಸಿಗಳ ವತಿಯಿಂದ ಜು. 21ರಂದು ಬೆಳಗ್ಗೆ 9ಕ್ಕೆ ಬಾಗಿನ ಅರ್ಪಣೆ , ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಮಹೇ​ಶ ಟೆಂಗಿನಕಾಯಿ, ಮೇಯರ ರಾಮಣ್ಣ ಬಡಿಗೇರ, ಉಪಮೇಯರ ದುರ್ಗಮ್ಮ ಬಿಜವಾಡ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಿಗಿ, ಉಮೇಶಗೌಡ ಕೌಜ​ಗೇ​ರಿ, ಹಿರಿಯರಾದ ಚನ್ನು ಪಾಟೀಲ್‌ ಇ​ತ​ರ​ರು ಭಾಗವಹಿಸಲಿದ್ದಾರೆ.ಬೆಣ್ಣಿಹಳ್ಳ-ತುಪರಿಹಳ್ಳಕ್ಕೆ ಒಳಹರಿವು ಹೆಚ್ಚಳ:

ಈ ನಡುವೆ ನವಲಗುಂದ ತಾಲೂಕಿನಲ್ಲಿ ಹರಿದಿರುವ ಬೆಣ್ಣಿಹಳ್ಳ ಹಾಗೂ ತುಪರಿಹಳ್ಳಗಳಿಗೆ ಒಳಹರಿವಿನ ಪ್ರಮಾಣ ಜಾಸ್ತಿಯಾಗುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಒಳಹರಿವು ಹೆಚ್ಚಾಗಿದೆ. ಇನ್ನು ಕೆಲ ದಿನಗಳಲ್ಲಿ ಈ ಎರಡು ಹಳ್ಳಗಳು ಭರ್ತಿಯಾಗುವ ಸಾಧ್ಯತೆ ಇದೆ.