ಇಬ್ಬರು ಅಂತಾರಾಜ್ಯ ದರೋಡೆಕೋರರ ಕಾಲಿಗೆ ಗುಂಡು

| Published : Mar 16 2025, 01:45 AM IST

ಸಾರಾಂಶ

ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಅಂತಾರಾಜ್ಯ ದರೋಡೆಕೋರರ ಕಾಲಿಗೆ ಗುಂಡಿಕ್ಕಿ ಬಂಧಿಸುವಲ್ಲಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ: ನಗರದಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು ಕೇಳಿಬಂದಿದೆ. ನಗರದ ದೇಸಾಯಿ ವೃತ್ತದ ಬಳಿಯ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ ಉತ್ತರ ಪ್ರದೇಶ ಮೂಲದ ಇಬ್ಬರು ಅಂತಾರಾಜ್ಯ ದರೋಡೆಕೋರರ ಕಾಲಿಗೆ ಗುಂಡಿಕ್ಕಿ ಬಂಧಿಸುವಲ್ಲಿ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಾ. 15ರಂದು ಶನಿವಾರ ಬೆಳಗ್ಗೆ‌ ಉತ್ತರ ಪ್ರದೇಶದ ಅಕ್ಬರ್, ಇರ್ಷಾದ್ ಗುಂಡೇಟು ತಿಂದು ಸದ್ಯ ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರಿಬ್ಬರ ಮೇಲೆ ಕರ್ನಾಟಕ, ಆಂಧ್ರಪ್ರದೇಶದ, ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

ದರೋಡೆಕೋರರ ಗುಂಪು ಕಳೆದ ಮಾ. 1ರಂದು ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ₹20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ಮಾಡಿತ್ತು. ಈ ಹಿಂದೆ ಇದೇ ಮಾದರಿಯಲ್ಲಿ ಧಾರವಾಡದ ವಿದ್ಯಾಗಿರಿ, ಧಾರವಾಡ ಶಹರ, ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ‌ ದರೋಡೆ ಪ್ರಕರಣ ನಡೆದಿದ್ದವು. ಇದರ ಪತ್ತೆಗೆ ಮುಂದಾದಾಗ ಈ ಗ್ಯಾಂಗ್ ಕಣ್ಣಿಗೆ ಬಿದ್ದಿತ್ತು.

ಈ ತಂಡ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಸಕ್ರಿಯವಾಗಿತ್ತು. ಐಷಾರಾಮಿ ಕಾರ್‌ಗಳಲ್ಲಿ ಸುತ್ತಾಡುವುದು, ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು. ಪ್ರಮುಖ ನಗರದಲ್ಲಿನ ಶ್ರೀಮಂತರು ಹೆಚ್ಚಾಗಿರುವ ಪ್ರದೇಶಗಳಲ್ಲಿ ಸಂಚರಿಸಿ ಮನೆ ಗುರುತಿಸಿ ಬಳಿಕ ಕಳ್ಳತನ ಮಾಡುತ್ತಿದ್ದರು. ಈ ತಂಡದಲ್ಲಿ 15ರಿಂದ 20 ಜನರಿದ್ದಾರೆ ಎಂಬ ಮಾಹಿತಿ ಗೊತ್ತಾಗಿದೆ.

ಶನಿವಾರ ಬೆಳಗ್ಗೆ ಕೆಎಂಸಿಆರ್‌ಐಗೆ ಭೇಟಿ ನೀಡಿ ಗಾಯಾಳುಗಳ ಭೇಟಿ ಮಾಡಿ ಮಾಹಿತಿ ನೀಡಿದ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ‌ಶಶಿಕುಮಾರ್, ಈ ದರೋಡೆಕೋರನನ್ನು ಟ್ರ್ಯಾಕ್ ಮಾಡಿದಾಗ ಶಿವಮೊಗ್ಗದಲ್ಲಿರುವುದು ಗೊತ್ತಾಯಿತು. ನಂತರ ಹುಬ್ಬಳ್ಳಿಯತ್ತ ಬರುತ್ತಿರುವ ಮಾಹಿತಿ ಸಿಕ್ಕಿತು. ಶುಕ್ರವಾರ ತಡರಾತ್ರಿ ಹುಬ್ಬಳ್ಳಿಯಲ್ಲಿ ಮಾರುತಿ ಎನ್ನುವರ ಮೇಲೆ ಹಲ್ಲೆ ಮಾಡಿ ಹಣ, ಮೊಬೈಲ್ ಮತ್ತು ಬೈಕ್ ಕಸಿದುಕೊಂಡು ಪರಾರಿಯಾಗಿದ್ದರು ಎಂದರು.

ಬಳಿಕ ನಗರದ ಹೊರವಲಯದ ದೇವರ ಗುಡಿಹಾಳ‌ ರಸ್ತೆಯಲ್ಲಿ ಮತ್ತೆ ದರೋಡೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿ ಅಡಗಿ ಕುಳಿತಿರುವ ಮಾಹಿತಿ ಮೇರೆಗೆ‌ ಪೊಲೀಸರ ತಂಡ ದರೋಡೆಕೋರರನ್ನು ಹಿಡಿಯಲು ಸ್ಥಳಕ್ಕೆ ತೆರಳಿದಾಗ ಪೊಲೀಸರ ಕಣ್ಣಿಗೆ ಖಾರದಪುಡಿ ಎರಚಿ, ಆಯುಧಗಳಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು‌ ಯತ್ನಿಸಿದ್ದಾರೆ. ಈ ವೇಳೆ ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು 2 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದರೂ ಅವರು ನಿಂತಿಲ್ಲ. ಬಳಿಕ ಇಬ್ಬರ ಎರಡೂ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.‌ ಈ ವೇಳೆ ತಪ್ಪಿಸಿಕೊಂಡಿದ್ದ ಶಂಷಾದ್ ಖುರೇಷಿಯನ್ನೂ ನಂತರ ಬಂಧಿಸಿರುವುದಾಗಿ ಅವರು ಮಾಹಿತಿ ನೀಡಿದರು.

ಈ ಘಟನೆಯಲ್ಲಿ ಉಪನಗರ ಠಾಣೆ ಪಿಎಸ್ಐ ದೇವೇಂದ್ರ ಮಾವಿನದಂಡಿ, ಸಿಬ್ಬಂದಿಗಳಾದ ದ್ಯಾನೇಶ, ಆನಂದ ಜಾವೂರಗೆ ಗಾಯಗಳಾಗಿವೆ. ಆರೋಪಿಗಳು ಮತ್ತು ಸಿಬ್ಬಂದಿಗೆ ಕೆಎಂಸಿಆರ್‌ಐನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಆರೋಪಿಗಳ ಪತ್ತೆಗಾಗಿ ಈಗಾಗಲೇ ಎರಡು ತಂಡಗಳನ್ನು ರಚಿಸಲಾಗಿದ್ದು, ಆದಷ್ಟು ಬೇಗನೆ ಇನ್ನುಳಿದವರನ್ನೂ ಬಂಧಿಸುವುದಾಗಿ ತಿಳಿಸಿದರು.

ಸಾಕ್ಷಿ ನಾಶಕ್ಕೆ ಕಾರಿಗೆ ಬೆಂಕಿ:

ಈ‌ ನಟೋರಿಯಸ್ ದರೋಡೆಕೋರರು ಕೃತ್ಯಕ್ಕೆ ಬಳಿಸಿದ ಕಾರುಗಳು ಹಾಗೂ ಬೈಕ್​ನ್ನು ನಾಶಪಡಿಸುವುದಾಗಿ ಆರೋಪಿಯೊಬ್ಬ ಬಾಯಿ ಬಿಟ್ಟಿದ್ದ. ಅದರಂತೆ ರಾಯನಾಳ ಕ್ರಾಸ್ ಬಳಿ ಕಾರಿಗೆ ಬೆಂಕಿ ಹಚ್ಚಿದ್ದು, ತಪ್ಪಿಸಿಕೊಂಡು ಹೋಗಿದ್ದ ಆರೋಪಿಯೊಬ್ಬ ಈ‌ ಕಾರಿಗೆ ಬೆಂಕಿ ಹಚ್ಚಿರಬಹುದೆಂಬ ಅನುಮಾನವಿದೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದರು.