ಬೇಲೂರು ಬಸ್ಟ್ಯಾಂಡ್‌ ಮುಂಭಾಗ ಇರುವ ಅಂಗಡಿ ಮಳಿಗೆಗಳ ಸಜ್ಜೆ ಕುಸಿದು ಇಬ್ಬರು ಸಾವು

| N/A | Published : Mar 10 2025, 12:22 AM IST / Updated: Mar 10 2025, 11:23 AM IST

ಬೇಲೂರು ಬಸ್ಟ್ಯಾಂಡ್‌ ಮುಂಭಾಗ ಇರುವ ಅಂಗಡಿ ಮಳಿಗೆಗಳ ಸಜ್ಜೆ ಕುಸಿದು ಇಬ್ಬರು ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಬೇಲೂರು ಬಸ್ಟ್ಯಾಂಡ್‌ ಮುಂಭಾಗ ಇರುವ ನಾಲ್ಕು ವಾಣಿಜ್ಯ ಮಳಿಗೆಗಳ ಸಜ್ಜೆ ಕುಸಿದು ಬಿದ್ದ ಪರಿಣಾಮ ಒಬ್ಬರು ಸ್ಥಳದಲ್ಲಿ ಸಾವನ್ನಪ್ಪಿ, ಮತ್ತೊಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ  

  ಬೇಲೂರು : ಭಾನುವಾರ ಮಧ್ಯಾಹ್ನ ರಾಜ್ಯ ಸಾರಿಗೆ ಸಂಸ್ಥೆಯ ನಿಲ್ದಾಣ ಮುಂಭಾಗ ಇರುವ ಖಾಸಗಿ ವ್ಯಕ್ತಿಗೆ ಸೇರದ ನಾಲ್ಕು ವಾಣಿಜ್ಯ ಮಳಿಗೆಗಳ ಸಜ್ಜೆ ಕುಸಿದು ಬಿದ್ದ ಪರಿಣಾಮ ಒಬ್ಬರು ಸ್ಥಳದಲ್ಲಿ ಸಾವನ್ನಪ್ಪಿ, ಮತ್ತೊಬ್ಬರು ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ, ಉಳಿದ ಮೂವರ ಪರಿಸ್ಥಿತಿ ಚಿಂತಾಜನಕವಾಗಿದೆ.

ಚೀಕನಹಳ್ಳಿ ಸತ್ಯನಾರಾಯಣಗೌಡ ಎಂಬುವರಿಗೆ ಸೇರಿದ ನಾಲ್ಕು ವಾಣಿಜ್ಯ ಮಳಿಗೆಗಳ ಮುಂಭಾಗದ ಸಜ್ಜೆ ಕುಸಿದು ಬಿದ್ದು ಇಂತಹ ದುರ್ಘಟನೆ ಸಂಭವಿಸಿದೆ. ಅಮರನಾಥ್ ಎಂಬುವರು ಸಜ್ಜೆ ಬಿದ್ದ ರಭಸಕ್ಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೆಂಪೇಗೌಡ ಬೀದಿಯ ನಜೀರ್ ಎಂಬುವರು ಜಿಲ್ಲಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಜ್ಯೋತಿ ಎಂಬುವರ ಪರಿಸ್ಥಿತಿ ಚಿಂತಾಜನಕವಾಗಿದ್ದು ಐಸಿಯುನಲ್ಲಿದ್ದಾರೆ. ನೀಲಮ್ಮ ಎಂಬುವರ ಕಾಲುಗಳು ಜಖಂಗೊಂಡಿದೆ. ಸರ್ಕಾರಿ ಆಸ್ಪತ್ರೆಯ ನರ್ಸ್ ಜ್ಯೋತಿ ಎಂಬುವರ ಕಾಲಿಗೆ ಪೆಟ್ಟಾಗಿದ್ದು, ಸಾಕಷ್ಟು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಜ್ಜೆ ಬಿದ್ದ ಕೂಡಲೇ ಅದನ್ನು ತೆಗೆಯಲು ಸಾರ್ವಜನಿಕರು ಹರಸಾಹಸಪಟ್ಟರು. ನಂತರ ಜೆಸಿಬಿಯನ್ನು ತರಿಸಿ ಸಜ್ಜೆ ತೆರವು ಗೊಳಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ರಸ್ತೆಯು ಸಂಪೂರ್ಣ ಜನ ದಟ್ಟಣೆಯಿಂದ ಕೂಡಿದ್ದು ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

ಈ ಖಾಸಗಿ ಮಳಿಗೆಯ ವ್ಯಾಜ್ಯವು ಕೋರ್ಟಿನಲ್ಲಿ ಇದ್ದ ಕಾರಣ ಬಾಗಿಲು ಹಾಕಿದ್ದು ಅದರ ಮುಂಭಾಗ ಹಣ್ಣುಗಳು, ಸೊಪ್ಪು, ತರಕಾರಿ ಮಾರಿ ಜೀವನ ಸಾಗಿಸಿಕೊಂಡಿದ್ದರು. ಕೆಲವು ತಿಂಗಳ ಹಿಂದೆ ಮಳಿಗೆಯ ಹಿಂಭಾಗ ದುಬೈ ಬಜಾರ್ ಎಂಬ ಶಾಪಿಂಗ್ ಮಾಲ್ ಅನ್ನು ಆರಂಭಿಸಲಾಗಿತ್ತು. ಮಳಿಗೆಯ ಹಿಂಭಾಗ ಇದ್ದ ಕಾರಣ ದುಬೈ ಬಜಾರ್ ಸಾರ್ವಜನಿಕರಿಗೆ ಅಷ್ಟಾಗಿ ಕಂಡು ಬರುತ್ತಿರಲಿಲ್ಲ. ಇದರಿಂದ ಕೆಲವು ಪುರಸಭೆಯ ಪಟ್ಟ ಭದ್ರ ಹಿತಾಸಕ್ತಿಗಳು ಮಾಲೀಕರೊಡನೆ ಕೈಜೋಡಿಸಿ ಎರಡು ಮಳಿಗೆಯನ್ನು ತೆರವು ಗೊಳಿಸಿದರು. ಈ ಸಂದರ್ಭದಲ್ಲಿ ಮಳಿಗೆಯ ಮೇಲ್ಭಾಗದ ಸಜ್ಜೆಗೆ ಯಾವುದೇ ಆಧಾರವಿಲ್ಲದೇ ದುರಸ್ತಿ ಹಂತಕ್ಕೆ ತಲುಪಿತ್ತು. ಈಗ ಕೆಳಗೆ ಬಿದ್ದು ಬಡವರ ಸಾವಿಗೆ ದಾರಿ ಮಾಡಿಕೊಟ್ಟಿದೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದರು.

ರೈತ ಸಂಘದ ಬಳ್ಳೂರು ಸ್ವಾಮಿಗೌಡ ಮಾತನಾಡಿ, ಈ ಕಟ್ಟಡವು 35 ವರ್ಷಗಳ ಹಿಂದಿನದಾಗಿದ್ದು, ಪುರಸಭೆಯವರು ಲೈಸೆನ್ಸ್ ನೀಡುವಾಗ ಕಟ್ಟಡದ ಕಾರ್ಯಕ್ಷಮತೆಯನ್ನು ನೋಡಬೇಕಿತ್ತು, ವ್ಯಾಪಾರ ಮಾಡಲು ಅರ್ಹತೆ ಪಡೆದಿದೆ ಎಂದು ಪರಿಶೀಲಿಸಬೇಕಿತ್ತು. ಕಟ್ಟಡ ದುರಸ್ತಿಗೊಳಿಸುವಂತೆ ಮಾಲೀಕರಿಗೆ ಸೂಚಿಸಬೇಕಿತ್ತು. ಇವರ ನಿರ್ಲಕ್ಷ್ಯದಿಂದ ಇಂದು ಬಡವರು, ನಿರ್ಗತಿಕರು ಬೀದಿಬದಿಯಲ್ಲಿ ಪ್ರಾಣ ಕಳೆದುಕೊಳ್ಳುವಂತಾಯಿತು. ಇಂದಿನ ಪ್ರಾಣ ಹಾನಿಗೆ ನೇರವಾಗಿ ಪುರಸಭೆಯವರೇ ಕಾರಣವಾಗಿದ್ದು ಕೂಡಲೇ ಪೊಲೀಸ್ ಇಲಾಖೆ ಎಫ್ಐಆರ್‌ ದಾಖಲಿಸುವಂತೆ ಆಗ್ರಹಿಸಿದರು.

ಬೇಲೂರು ಸರ್ಕಾರಿ ಆಸ್ಪತ್ರೆಗೆ ಮಾಜಿ ಸಚಿವ ಬಿ ಶಿವರಾಂ, ತಹಸೀಲ್ದಾರ್‌ ಮಮತಾ ಎಂ. ವೃತ್ತ ನಿರೀಕ್ಷಕ ರೇವಣ್ಣ, ಪಿಎಸ್ಐ ಪಾಟೀಲ್, ಪ್ರಾಧಿಕಾರ ಅಧ್ಯಕ್ಷ ತೌಫಿಕ್, ಮಾಜಿ ಪುರಸಭೆ ಅಧ್ಯಕ್ಷ ಶಾಂತಕುಮಾರ್ ಇತರರು ಭೇಟಿ ನೀಡಿದ್ದರು.

ಬೇಲೂರು ಪಟ್ಟಣದಲ್ಲಿ ಈ ರೀತಿಯ ಪುರಾತನವಾದ, ಶಿಥಿಲವಾದ ಕಟ್ಟಡಗಳು ಸಾಕಷ್ಟಿವೆ. ಕೂಡಲೇ ಶಾಸಕರು ಇದರ ಬಗ್ಗೆ ಗಮನ ಹರಿಸಿ ಪುರಸಭೆಯವರಿಗೆ ಪರಿಶೀಲಿಸಿ ತೆರವುಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಿದೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಪುರಸಭೆ ಮುಂಭಾಗ ಸಂಘಟನೆಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.

- ಚಂದ್ರಶೇಖರ್, ಕರವೇ ನಾರಾಯಣಗೌಡ ಬಣದ ಅಧ್ಯಕ್ಷ