ಅವಳಿ ರಸ್ತೆ ಧೂಳುಮುಕ್ತ ಮಾಡಲು ಬಂದ್ವು ಎರಡು ಯಂತ್ರ

| Published : Apr 01 2024, 12:45 AM IST

ಅವಳಿ ರಸ್ತೆ ಧೂಳುಮುಕ್ತ ಮಾಡಲು ಬಂದ್ವು ಎರಡು ಯಂತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾನಗರ ಪಾಲಿಕೆ ₹2.96 ಕೋಟಿ ವೆಚ್ಟದಲ್ಲಿ ಧೂಳು ತೆಗೆಯುವ 2 ಯಂತ್ರಗಳನ್ನು ಮತ್ತೆ ಖರೀದಿಸಿದೆ. ಪುಣೆಯಿಂದ ಗುರುವಾರ ಯಂತ್ರಗಳು ಬಂದಿದ್ದು, ಮೇ ಮೊದಲ ಇಲ್ಲವೇ 2ನೇ ವಾರದಲ್ಲಿ ರಸ್ತೆಗಿಳಿಯಲಿವೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹು-ಧಾ ಮಹಾನಗರವನ್ನು ಧೂಳು ಮುಕ್ತ ನಗರವನ್ನಾಗಿ ಮಾಡುವ ಉದ್ದೇಶದೊಂದಿಗೆ ಮಹಾನಗರ ಪಾಲಿಕೆ ₹2.96 ಕೋಟಿ ವೆಚ್ಟದಲ್ಲಿ ಧೂಳು ತೆಗೆಯುವ 2 ಯಂತ್ರಗಳನ್ನು ಮತ್ತೆ ಖರೀದಿಸಿದೆ. ಪುಣೆಯಿಂದ ಗುರುವಾರ ಯಂತ್ರಗಳು ಬಂದಿದ್ದು, ಮೇ ಮೊದಲ ಇಲ್ಲವೇ 2ನೇ ವಾರದಲ್ಲಿ ರಸ್ತೆಗಿಳಿಯಲಿವೆ.

ಕೇಂದ್ರ ಸರ್ಕಾರದ ರಾಷ್ಟ್ರೀಯ ಶುದ್ಧಗಾಳಿ ಯೋಜನೆ (ಎನ್‌ಸಿಪಿಎ) ಅಡಿಯಲ್ಲಿ ಮೊದಲ ಹಂತದಲ್ಲಿ ಧೂಳು ತೆಗೆಯುವ 2 ಯಂತ್ರಗಳನ್ನು ಖರೀದಿಸಲಾಗಿದೆ. ಒಂದು ಯಂತ್ರಕ್ಕೆ ₹1.48 ಕೋಟಿ ವೆಚ್ಚ ಮಾಡಲಾಗಿದ್ದು. ಮೂರು ವರ್ಷದ ನಿರ್ವಹಣೆಗೆ ₹2.88 ಕೋಟಿ ವಿನಿಯೋಗಿಸಲಾಗುತ್ತಿದೆ.

ಗುಜರಿ ಸೇರಿದ ಹಳೆಯ ಯಂತ್ರ

ನಗರದ ಜನತೆಗೆ ಧೂಳಿನಿಂದಾಗಿ ಮುಕ್ತಿ ದೊರೆಯುವ ಉದ್ದೇಶದೊಂದಿಗೆ ಈ ಹಿಂದೆಯೇ ಪಾಲಿಕೆಯು ₹1 ಕೋಟಿ ಖರ್ಚು ಮಾಡಿ ದೂಳು ಸ್ವಚ್ಛಗೊಳಿಸುವ ಯಂತ್ರ ಖರೀದಿಸಿತ್ತು. ಆದರೆ, ಇದು ನಿತ್ಯವೂ ರಸ್ತೆಗಿಳಿದು ಜನರಿಗೆ ಧೂಳಿನಿಂದ ಮುಕ್ತಿ ಕೊಡುತ್ತದೆ ಎಂದು ನಂಬಲಾಗಿತ್ತು. ಆದರೆ, ನಗರಕ್ಕೆ ಗಣ್ಯ ವ್ಯಕ್ತಿಗಳು ಬಂದಾಗ ಈ ಗಾಡಿಯು ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಸಮರ್ಪಕ ನಿರ್ವಹಣೆಯಿಲ್ಲದೆ ಈ ಯಂತ್ರ ಹಾಳಾಗಿ ಗುಜರಿಗೆ ಸೇರಿದೆ. ಇದೀಗ ಮತ್ತೆ ಜರ್ಮನ್ ತಂತ್ರಜ್ಞಾನದ ಹೊಸ ಮಾದರಿಯ ಯಂತ್ರವನ್ನು ಪಾಲಿಕೆಗೆ ತರಿಸಲಾಗಿದ್ದು, ಈ ಯಂತ್ರವಾದರೂ ನಿತ್ಯ ರೋಡಿಗಿಳಿಯಲಿದೆಯೇ ಎಂಬುದು ಜನರ ಪ್ರಶ್ನೆಯಾಗಿದೆ.

3 ವರ್ಷ ಗುತ್ತಿಗೆ:

ಈ ಹಿಂದಿನ ಯಂತ್ರದ ನಿರ್ವಹಣೆಯ ಕೊರತೆಯಿಂದಾಗಿ ಗುಜರಿಗೆ ಸೇರಿತ್ತು. ಆದರೆ, ಈಗ ತರಿಸಿರುವ ಯಂತ್ರಗಳ ನಿರ್ವಹಣೆಯ ಜವಾಬ್ದಾರಿಯನ್ನು ಮೂರು ವರ್ಷಗಳ ಅವಧಿಗೆ ಫುಣೆ ಮೂಲದ ಚಾಲೆಂಜರ್‌ ಕಂಪನಿಯೇ ಗುತ್ತಿಗೆ ಪಡೆದಿದೆ. ಈ ವಾಹನಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಚಾಲಕರಿಗೆ ಇದೇ ಕಂಪನಿ ತರಬೇತಿ ನೀಡಲಿದೆ.

ಈ ವಾಹನದ ನಿರ್ವಹಣೆಯ ಜವಾಬ್ದಾರಿಯನ್ನು ಕಂಪನಿಗೆ ವಹಿಸಿರುವುದರಿಂದ, ಏನೇ ಸಮಸ್ಯೆಯಾದರೂ ಕಂಪನಿಯೇ ನಿಭಾಯಿಸಬೇಕು. ಯಂತ್ರಗಳ ಬಿಡಿಭಾಗಗಳು ಇಲ್ಲ ಎಂದು ಸಬೂಬು ಹೇಳಿ ಕಾರ್ಯಾಚರಣೆ ನಿಲ್ಲಿಸುವಂತಿಲ್ಲ. ಈ ಎಲ್ಲ ನಿಯಮಾವಳಿಗಳನ್ನು ಒಪ್ಪಿಕೊಂಡೇ ಕಂಪನಿಯು ಗುತ್ತಿಗೆ ಪಡೆದಿದೆ.

ಯಂತ್ರದ ವಿಶೇಷತೆ ಏನು?:

ಈ ಯಂತ್ರಗಳು ಪ್ರತಿದಿನ ರಾತ್ರಿ 12ರಿಂದ ಬೆಳಗ್ಗೆ 6 ಗಂಟೆಯ ವರೆಗೆ ಕಾರ್ಯಾಚರಣೆ ನಡೆಸಲಿವೆ. ಮೊದಲಿದ್ದ ಧೂಳು ತೆಗೆಯುವ ಯಂತ್ರ ಕೇವಲ ಧೂಳಿನ ಕಣಗಳನ್ನು ಮಾತ್ರ ಸಂಗ್ರಹಿಸುತ್ತಿತ್ತು. ಆದರೆ, ಈ ಯಂತ್ರ 2.5 ಎಂಎಂನಿಂದ 10 ಎಂಎಂ ಗಾತ್ರದ ವರೆಗಿನ ವಸ್ತುಗಳನ್ನು ತೆಗೆಯಲಿದೆ. ಮೊದಲಿನ ಯಂತ್ರ ಮಳೆಗಾಲದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿರಲಿಲ್ಲ. ಈ ಹೊಸ ಯಂತ್ರ ವರ್ಷದ 12 ತಿಂಗಳ ಕಾಲ ಕಾರ್ಯನಿರ್ವಹಿಸಲಿದೆ. ಧೂಳು ತೆಗೆಯುವುದರ ಜತೆಗೆ ರಸ್ತೆಗೆ ನೀರು ಸಿಂಪಡಿಸಿ ಧೂಳು ಮುಕ್ತವಾಗಿಸಲಿದೆ. ಒಂದು ಯಂತ್ರ ಒಂದು ದಿನಕ್ಕೆ 20ರಿಂದ 25 ಕಿ.ಮೀ ವರೆಗೆ ಕಾರ್ಯಾಚರಣೆ ನಡೆಸಲಿದೆ. 5 ಕಿಮೀ ಧೂಳು ತೆಗೆಯಲು ಒಂದು ಗಂಟೆ ಸಮಯ ಬೇಕು. ಇದಕ್ಕೆ 7ರಿಂದ 8 ಲೀಟರ್‌ ಡೀಸೆಲ್‌ ಬೇಕಾಗುತ್ತದೆ. 10 ಗಂಟೆಯಲ್ಲಿ ಸುಮಾರು 40 ಕಿಮೀ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಈ ವಾಹನಗಳು ಹೊಂದಿವೆ.

ಮಹಾನಗರಕ್ಕೆ ಬೇಕಿವೆ 6 ಯಂತ್ರಗಳು

ಹು-ಧಾ ಮಹಾನಗರದ ದೂಳು ನಿವಾರಣೆಗೆ ಬೇಕಿರುವುದು ಒಟ್ಟು 6 ಯಂತ್ರಗಳು. ಮೊದಲ ಹಂತದಲ್ಲಿ ಈಗ 2 ಯಂತ್ರಗಳನ್ನು ಖರೀದಿಸಲಾಗಿದ್ದು, ಮತ್ತೊಂದು ಯಂತ್ರ ಖರೀದಿಗೆ ಅನುಮೋದನೆ ದೊರೆತಿದೆ. ಲೋಕಸಭೆ ಚುನಾವಣೆಯ ನಂತರ ಯಂತ್ರ ಖರೀದಿಗೆ ಟೆಂಡರ್‌ ಕರೆಯಲಾಗುವುದು. ಮುಂದಿನ ದಿನಗಳಲ್ಲಿ ಇನ್ನುಳಿದ 3 ಯಂತ್ರಗಳ ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕ ಮುಖ್ಯ ಕಾರ್ಯ ನಿರ್ವಾಹಕ ಎಂಜಿನಿಯರ್ ವಿಜಯಕುಮಾರ ಕನ್ನಡಪ್ರಭಕ್ಕೆ ತಿಳಿಸಿದರು.