ಸಾರಾಂಶ
ಹಾಸನ/ಬೆಂಗಳೂರು : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡರ ಕಚೇರಿ ಸಿಬ್ಬಂದಿ ಚೇತನ್ ಹಾಗೂ ಆಪ್ತ ಲಿಖಿತ್ ಅವರನ್ನು ಬಂಧಿಸಲಾಗಿದೆ.
ಪೆನ್‌ಡ್ರೈವ್ ಹಾಗೂ ಕಂಪ್ಯೂಟರ್ ಸಿಪಿಯು ಅನ್ನು ನಾಶ ಮಾಡಲು ಯತ್ನಿಸುತ್ತಿದ್ದ ಖಚಿತ ಮಾಹಿತಿಯನ್ನು ಅರಿತು ಎಸ್‌ಐಟಿ ತಂಡ ಈ ಇಬ್ಬರನ್ನೂ ಬಂಧಿಸಿದೆ. ಪೆನ್‌ಡ್ರೈವ್ ಹಾಗೂ ಸಿಪಿಯು ಅನ್ನು ವಶಕ್ಕೆ ಪಡೆದಿದೆ.
ಪೆನ್‌ಡ್ರೈವ್‌ನಲ್ಲಿನ ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡಿದ ಆರೋಪ ಸಂಬಂಧ ಏ.23ರಂದು ಇವರ ವಿರುದ್ಧ ಹಾಸನ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ, ಈ ಪ್ರಕರಣವನ್ನು ಎಸ್‌ಐಟಿಗೆ ವರ್ಗಾಯಿಸಲಾಗಿತ್ತು. ಶನಿವಾರ ರಾತ್ರಿ ಇವರಿಬ್ಬರನ್ನೂ ವಶಕ್ಕೆ ಪಡೆದ ಅಧಿಕಾರಿಗಳು ಹಾಸನ ನಗರ ಪೊಲೀಸ್ ಠಾಣೆಯ ಸಮುಚ್ಚಯದಲ್ಲಿ ವಿಚಾರಣೆ ನಡೆಸಿದರು. ವಿಚಾರಣೆ ಬಳಿಕ ಇಬ್ಬರನ್ನೂ ಬಂಧಿಸಲಾಯಿತು.
ಭಾನುವಾರ ಚೇತನ್‌ರನ್ನು ಅವರ ಸ್ವಗ್ರಾಮ ಹಾಸನ ತಾಲೂಕಿನ ಯಲಗುಂದಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಯಿತು. ಮತ್ತೊಂದೆಡೆ, ಲಿಖಿತ್‌ರನ್ನು ಶ್ರವಣಬೆಳಗೊಳಕ್ಕೆ ಕರೆದುಕೊಂಡು ಹೋಗಿ, ಅವರ ಮನೆಯಲ್ಲಿ ಮಹಜರು ನಡೆಸಲಾಯಿತು. ಬಳಿಕ, ಸೈಬರ್ ಠಾಣೆಗೆ ಕರೆದುಕೊಂಡು ಬಂದು, ಅವರ ಹೇಳಿಕೆಗಳನ್ನು ದಾಖಲಿಸಲಾಯಿತು. ನಂತರ, ವೈದ್ಯಕೀಯ ಪರೀಕ್ಷೆ ನಡೆಸಿ, ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿದೆ ಎಂದು ಮೂಲಗಳು ತಿಳಿಸಿವೆ.