ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ತೆಪ್ಪದಲ್ಲಿ ತುಂಗಭದ್ರಾ ನದಿಗೆ ಇಳಿದಿದ್ದ ಮೂವರ ಪೈಕಿ ಇಬ್ಬರು ನೀರು ಪಾಲಾಗಿ, ಮತ್ತೊಬ್ಬ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಘಟನೆ ಹೊನ್ನಾಳಿ ಪಟ್ಟಣದ ತುಂಗಭದ್ರಾ ನದಿಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.ಜಿಲ್ಲೆಯ ಹೊನ್ನಾಳಿ ಪಟ್ಟಣದ ವಾಸಿಗಳಾದ ತಿಪ್ಪೇಶ (23), ಮುಕ್ತಿಯಾರ್ (28) ಇಬ್ಬರೂ ನೀರು ಪಾಲಾಗಿದ್ದು, ಸಾಹಿಲ್ ಎಂಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಆತನನ್ನು ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೊನ್ನಾಳಿ ಪಟ್ಟಣದ ತುಂಗಭದ್ರಾ ನದಿಯು ತಮಿಳು ಕ್ವಾರಿಯಲ್ಲಿ ತೆಪ್ಪ ಮುಗುಚಿ ಈ ದುರ್ಘಟನೆ ಸಂಭವಿಸಿದೆ. ತಿಪ್ಪೇಶ, ಮುಕ್ತಿಯಾರ್ ನದಿಯಲ್ಲಿ ಮುಳುಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ಇಬ್ಬರ ಕುಟುಂಬ, ಬಂಧು, ಬಳಗ, ಸ್ನೇಹಿತರು ನದಿ ಬಳಿ ದೌಡಾಯಿಸಿದ್ದಾರೆ.ವಿಷಯ ತಿಳಿದ ಹೊನ್ನಾಳಿ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಸಹ ಆಗಮಿಸಿದ್ದಾರೆ. ಸ್ಥಳೀಯರ ಜತೆಗೆ ಹರಿಹರದ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಈಜುಗಾರರು ನೀರಿನಲ್ಲಿ ನಾಪತ್ತೆಯಾದ ತಿಪ್ಪೇಶ, ಮುಕ್ತಿಯಾರ್‌ಗಾಗಿ ಶೋಧ ನಡೆಸಿದ್ದಾರೆ. ಈಜು ತಜ್ಞರು ನದಿಯಲ್ಲಿ ಮುಳುಗಿ ಹುಡುಕಾಟ ನಡೆಸಿದರೆ, ಅಗ್ನಿಶಾಮಕ ದಳದ ಸಿಬ್ಬಂದಿ ತೆಪ್ಪದಿಂದ ಪಾತಾಳ ಗರಡಿಯನ್ನು ನದಿಗೆ ಹಾಕಿ, ನಾಪತ್ತೆಯಾದವರಿಗೆ ಶೋಧ ನಡೆಸಿದರು.
ನತದೃಷ್ಟ ತಿಪ್ಪೇಶ, ಮುಕ್ತಿಯಾರ್ ಹಾಗೂ ಅಪಾಯದಿಂದ ಪಾರಾದ ಸಾಹಿಲ್ ತೆಪ್ಪದಲ್ಲಿ ನದಿಗೆ ಏಕೆ ಇಳಿದಿದ್ದರು ಎಂಬುದು ತಿಳಿದು ಬಂದಿಲ್ಲ. ನದಿಯಲ್ಲಿ ಅಕ್ರಮ ಮರಳುಗಾರಿಕೆ ಮಾಡಿದ ಪರಿಣಾಮ ಕೆಲ ಕಡೆ ಚೂಪಾದ ಕಲ್ಲುಗಳಿದ್ದರೆ ಮತ್ತೆ ಕೆಲವು ಕಡೆ 20-30 ಆಳದಷ್ಟು ಗುಂಡಿಗಳುಂಟಾಗಿವೆ. ಮೂವರೂ ಮೀನು ಹಿಡಿಯಲಿಕ್ಕೆ ತೆರಳಿದ್ದರೇ ಅಥವಾ ಮರಳು ಎತ್ತಲೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ನದಿಯಲ್ಲಿ ತೆಪ್ಪಕ್ಕೆ ಹುಟ್ಟು ಹಾಕಿಕೊಂಡು ಬರುವ ವೇಳೆ ಯಾವುದೋ ಚೂಪಾದ ಕಲ್ಲಿಗೆ ತೆಪ್ಪವು ಜೋರಾಗಿ ಬಡಿದು, ತೆಪ್ಪ ಸಂಪೂರ್ಣ ಮುಳುಗಿ ದುರಂತ ಸಂಭವಿಸಿದೆ. ನದಿಯಲ್ಲಿ ಈಗ ನೀರಿನ ಹರಿವು ಕಡಿಮೆಯಾಗಿರುವುದರಿಂದ ನದಿಯಲ್ಲಿ ಕೆಲ ಕಡೆ 20-30 ಅಡಿ ಆಳದ ಗುಂಡಿಗಳಿವೆ. ಅಲ್ಲಲ್ಲಿ ಸುಳಿ ಸಹ ಇದ್ದು, ಇದೂ ಸಹ ತೆಪ್ಪ ಮಗುಚಲು ಕಾರಣ ಇರಬಹುದೆಂದು ನದಿಯನ್ನು ನಿತ್ಯ ಗಮನಿಸುವ ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಳಿಗ್ಗೆಯಿಂದಲೇ ನಾಪತ್ತೆಯಾದವರಿಗೆ ಶೋಧ ನಡೆಸಿದ್ದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಹರಿಹರದಿಂದ ಮುಳುಗು ತಜ್ಞ ಸಾದತ್ ಖಾನ್ ಹಾಗೂ 7 ಜನರ ತಂಡವು ಹೊನ್ನಾಳಿಯ ತುಂಗಭದ್ರಾ ನದಿಗೆ ಧಾವಿಸಿ, ನಾಪತ್ತೆಯಾದವರ ಶೋಧ ಕೈಗೊಂಡಿದೆ. ಇನ್ಸಪೆಕ್ಟರ್ ಸುನಿಲಕುಮಾರ, 112 ಅಧಿಕಾರಿ, ಸಿಬ್ಬಂದಿ, ಅಗ್ನಿಶಾಮಕ ದಳ ಅಧಿಕಾರಿಗಳೂ ಸ್ಥಳಕ್ಕೆ ಧಾವಿಸಿ, ಅಲ್ಲೇ ಬೀಡು ಬಿಟ್ಟಿದ್ದಾರೆ.ನದಿಯಲ್ಲಿ ತೆಪ್ಪ ಮುಗುಚಿ ನಾಪತ್ತೆಯಾದ ತಿಪ್ಪೇಶ, ಮುಕ್ತಿಯಾರ್ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟುವಂತಿತ್ತು. ಬಾಳಿ ಬದುಕಬೇಕಾಗಿದ್ದ, ಎರಡೂ ಕುಟುಂಬಗಳಿಗೆ ಆಸರೆಯಾಗಿದ್ದ ದುಡಿಯುವ ಮನೆ ಮಕ್ಕಳೇ ನದಿಯಲ್ಲಿ ನಾಪತ್ತೆಯಾದ ಸಂಗತಿ ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಪವಾಡ ಎಂಬುದೇನಾದರೂ ಇದ್ದರೆ ಇಬ್ಬರೂ ಜೀವಂತ ಬರಲಿ ಎಂದು ದೇವರಿಗೆ ಮೊರೆ ಇಡುತ್ತಿದ್ದುದು ಸಾಮಾನ್ಯವಾಗಿತ್ತು. ತೆಪ್ಪದಲ್ಲಿದ್ದರೂ ಅದೃಷ್ಟವಶಾತ್ ಪಾರಾದ ಸಾಹಿತ್ ಹೊನ್ನಾಳಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೊನ್ನಾಳಿ, ಹರಿಹರ ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಕೆಲವರು ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದು, ಬೋಟ್ ಮೂಲಕವೂ ಮರಳು ಎತ್ತುವ ದಂಧೆಯನ್ನು ನಡೆಸುತ್ತಾರೆ. ಕಂದಾಯ ಇಲಾಖೆ, ಪೊಲೀಸ್ ಇಲಾಖೆಯವರು ಇಂತಹವರಿಗೆ ತಡೆ ಹಾಕಬೇಕು. ಅಮಾಯಕರ ಜೀವ ಬಲಿಯಾಗುವುದನ್ನು ತಡೆಯಲು ಜಿಲ್ಲಾಡಳಿತ, ತಾಲೂಕು ಆಡಳಿತಗಳು ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.