ಬ್ಯಾಡಗಿಯಲ್ಲಿ ಶೀಘ್ರ ಇನ್ನೆರಡು ಕೋಲ್ಡ್‌ ಸ್ಟೋರೇಜ್ ನಿರ್ಮಾಣ: ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ

| Published : Apr 08 2025, 12:33 AM IST

ಬ್ಯಾಡಗಿಯಲ್ಲಿ ಶೀಘ್ರ ಇನ್ನೆರಡು ಕೋಲ್ಡ್‌ ಸ್ಟೋರೇಜ್ ನಿರ್ಮಾಣ: ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಮಾರುಕಟ್ಟೆಯಲ್ಲಿ ನಿರೀಕ್ಷೆಗೂ ಮೀರಿ ಮೆಣಸಿನಕಾಯಿ ಆವಕವಾಗುತ್ತಿದೆ. ಈ ನಿಟ್ಟಿನಲ್ಲಿ ಮೆಣಸಿನಕಾಯಿ ದಾಸ್ತಾನು ಮಾಡಲು ಎರಡು ಸರ್ಕಾರಿ ಸಾಮಿತ್ವದಲ್ಲಿ ಕೋಲ್ಡ್ ಸ್ಟೋರೇಜ್(ನೋ ಲಾಸ್ ನೋ ಪ್ರಾಫಿಟ್) ನಿರ್ಮಾಣಕ್ಕೆ ಚಿಂತನೆ ನಡೆಸಲಾಗುತ್ತಿದೆ.

ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಆಡಳಿತಾಧಿಕಾರಿ ಎಸ್.ಜಿ. ನ್ಯಾಮಗೌಡ ಸೇರಿದಂತೆ ಹಲವು ಉನ್ನತ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮೆಣಸಿನಕಾಯಿ ವ್ಯಾಪಾರ ವಹಿವಾಟು ಹಾಗೂ ವಾಹನ ನಿಲುಗಡೆ(ಪಾರ್ಕಿಂಗ್) ಸಮುಚ್ಚಯ ಕಾಮಗಾರಿ ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ನಿರೀಕ್ಷೆಗೂ ಮೀರಿ ಮೆಣಸಿನಕಾಯಿ ಆವಕವಾಗುತ್ತಿದೆ. ಈ ನಿಟ್ಟಿನಲ್ಲಿ ಮೆಣಸಿನಕಾಯಿ ದಾಸ್ತಾನು ಮಾಡಲು ಎರಡು ಸರ್ಕಾರಿ ಸಾಮಿತ್ವದಲ್ಲಿ ಕೋಲ್ಡ್ ಸ್ಟೋರೇಜ್(ನೋ ಲಾಸ್ ನೋ ಪ್ರಾಫಿಟ್) ನಿರ್ಮಾಣಕ್ಕೆ ಚಿಂತನೆ ನಡೆಸಲಾಗುತ್ತಿದೆ. ಇದರಿಂದ ದರ ಕಡಿಮೆ ಇದ್ದ ಸಮಯದಲ್ಲಿ ರೈತರು ಈ ಕೋಲ್ಡ್ ಸ್ಟೋರೇಜ್‌ನಲ್ಲಿ ಮೆಣಸಿನಕಾಯಿ ಸಂಗ್ರಹ ಮಾಡಿಟ್ಟುಕೊಂಡು ಉತ್ತದ ದರ ಸಿಗುವ ಸಮಯದಲ್ಲಿ ಮಾರಾಟ ಮಾಡಿಕೊಳ್ಳಬಹುದು ಎಂದರು.

ರೈತರ ಅನುಕೂಲಕ್ಕಾಗಿ ವಾಹನ ನಿಲುಗಡೆ ಕಟ್ಟಡ ನಿರ್ಮಿಸಲಾಗುತ್ತಿದೆ. ಈಗಾಗಲೇ 2 ಅಂತಸ್ತು ಕಟ್ಟಡಕ್ಕೆ ಅನುಮೋದನೆ ನೀಡಲಾಗಿದೆ. ಇದರಲ್ಲಿ 300ಕ್ಕೂ ಹೆಚ್ಚು ವಾಹನ(ಮಿನಿ ವ್ಯಾನ್) ನಿಲುಗಡೆ ಮಾಡಬಹುದು. ಇದರಿಂದ ಮಾರುಕಟ್ಟೆ ಪ್ರಾಂಗಣದಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ. ಇನ್ನೊಂದು ಅಂತಸ್ತು ಹೆಚ್ಚಳ ಚಿಂತನೆ ನಡೆಸಲಾಗಿದೆ. ಶೀಘ್ರದಲ್ಲಿಯೇ ವಾಹನ ನಿಲುಗಡೆ ಕಟ್ಟಡ ಲೋಕಾರ್ಪಣೆಗೊಳ್ಳಲಿದೆ ಎಂದರು.

ಸ್ಥಳಾಂತರ: ಮಾರುಕಟ್ಟೆ ಪ್ರಾಂಗಣದಲ್ಲಿ ಸ್ಥಳಾವಕಾಶದ ಕೊರತೆಯಿಂದ ಶೇ. 90ರಷ್ಟು ಖರೀದಿದಾರರು ಪ್ರಾಂಗಣದಿಂದ ಹೊರ ಹೋಗಿದ್ದಾರೆ. ಆದರೆ ಇಲ್ಲಿರುವ ದಲಾಲರಿಗೆ ಸ್ಥಳಾವಕಾಶದ ಕೊರತೆ ಎದ್ದು ಕಾಣುತ್ತಿದೆ. ನಮ್ಮದೇ ಪ್ರಾಂಗಣದಲ್ಲಿದ್ದ ವೇರ್ ಹೌಸ್ ಶಿಥಿಲಗೊಳಿಸಿದ್ದು, ಕಡ್ಡಾಯವಾಗಿ ದಲಾಲರಿಗೆ ನೀಡಲಾಗುವುದು. ಜತೆಗೆ ‘ಲೀಸ್ ಕಂ ಸೇಲ್’ ನಿಯಮದಡಿ ನೀಡಿದ್ದ ವೇರ್ ಹೌಸ್(ಗೋದಾಮು) ಮರಳಿ ಪಡೆಯಲು ಹಾಗೂ ಬಿಎಸ್‌ಎನ್‌ಎಲ್ ಕಚೇರಿ ಸ್ಥಳಾಂತರಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದರು.ವ್ಯಾಪಾರ ವಹಿವಾಟು ವೀಕ್ಷಣೆ: ಮಾರುಕಟ್ಟೆಯಲ್ಲಿ ವಿವಿಧ ಅಂಗಡಿಗಳಿಗೆ ತೆರಳಿದ ಸಚಿವರು ವ್ಯಾಪಾರ ವಹಿವಾಟು ಹಾಗೂ ಮೆಣಸಿನಕಾಯಿಯನ್ನು ವೀಕ್ಷಣೆ ಮಾಡಿದರು. ಪಾರದರ್ಶಕ ವ್ಯಾಪಾರ ವಹಿವಾಟು ನಡೆಸಲು ವ್ಯಾಪಾರಸ್ಥರಿಗೆ ಸೂಚನೆ ನೀಡಿದರು. ಪ್ರಸಕ್ತ ವರ್ಷ ಮಾರುಕಟ್ಟೆಯಲ್ಲಿ ಉಂಟಾಗಿರುವ ದರ ಕುಸಿತದಿಂದ ತಮಗಾದ ನಷ್ಟದ ಕುರಿತಾಗಿ ನೂರಾರು ರೈತರು ಸಚಿವರಲ್ಲಿ ಅಳಲನ್ನು ತೋಡಿಕೊಂಡರು. ಮಾರುಕಟ್ಟೆಯಲ್ಲಿ ಕೆಲ ವ್ಯಾಪಾರಸ್ಥರು ಹಣ ನೀಡಲು ವಿಳಂಬ ಮಾಡುತ್ತಿರುವುದನ್ನು ಸಚಿವರ ಗಮನಕ್ಕೆ ತಂದರು. ಕ್ರಿಮಿನಲ್ ಮೊಕದ್ದಮೆ ದಾಖಲಿಸಿ: ಮಾರುಕಟ್ಟೆಯಲ್ಲಿ ಕೆಲ ದಲಾಲರು ರೈತರಿಗೆ ಹಣ ನೀಡದೇ ಪರಾರಿಯಾಗಿದ್ದಾರೆ ಎಂದು ರೈತರು ಆರೋಪಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಇಂತಹ ಕೆಲವರಿಂದ ಮಾರುಕಟ್ಟೆ ವಹಿವಾಟಿಗೆ ಧಕ್ಕೆ ನಿಶ್ಚಿತ. ಮೆಣಸಿನಕಾಯಿ ಬೆಳೆದ ರೈತನಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗಬಾರದು. ಆದರೆ ರೈತರು ವರ್ತಕರೊಂದಿಗೆ ಹೊಂದಾಣಿಕೆ ಮಾಡಿಕೊಂಡು 15 ದಿನಗಳವರೆಗೆ ಹಣಕ್ಕಾಗಿ ಅನುಕೂಲ ಕಲ್ಪಿಸಿದ್ದಾರೆ. ಮಾರುಕಟ್ಟೆ ಅಭಿವೃದ್ಧಿಗೆ ಇದೂ ಕಾರಣವಾಗಿದೆ. ಒಬ್ಬ ವರ್ತಕನ ತಪ್ಪಿನಿಂದ ಇನ್ನುಳಿದ ವರ್ತಕರು ಇಂತಹ ಅವಕಾಶದಿಂದ ವಂಚಿತವಾಗಬಾರದು. ಅಂತಹ ವ್ಯಾಪಾರಸ್ಥರ ಲೈಸೆನ್ಸ್ ರದ್ದು ಮಾಡಿ, ತಪ್ಪಿತಸ್ಥರನ್ನು ಹುಡುಕಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಎಪಿಎಂಸಿ ಕಾರ್ಯದರ್ಶಿ ಅಮೃತ, ಆಡಳಿತಾಧಿಕಾರಿ ನ್ಯಾಮಗೌಡ್ರ ಸೇರಿದಂತೆ ಎಪಿಎಂಸಿ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.