ಮತ್ತೆರಡು ಟೆಲಿ ಐಸಿಯುಗೆ ಚಾಲನೆ

| Published : Feb 03 2024, 01:45 AM IST

ಸಾರಾಂಶ

ಬೆಂಗಳೂರಿನ ವಿಕ್ಟೋರಿಯಾ, ಬಳ್ಳಾರಿಯಲ್ಲಿ ಮತ್ತೆರಡು ಟೆಲಿ ಐಸಿಯುಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಚಾಲನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆ ಹಾಗೂ ಬಳ್ಳಾರಿ ವೈದ್ಯಕೀಯ ಕಾಲೇಜಿನಲ್ಲಿ ನೂತನ ಟೆಲಿ ಐಸಿಯು ಕ್ಲಸ್ಟರ್ ಮಾಡಲಾಗಿದ್ದು, ಅಲ್ಲಿಂದಲೇ ತಾಲೂಕು ಆಸ್ಪತ್ರೆಗಳ ಐಸಿಯು ಕೇಂದ್ರಗಳನ್ನು ಪರಿಶೀಲಿಸಿ ನಿಗಾ ವಹಿಸಬಹುದು. ಈ ತಂತ್ರಜ್ಞಾನ ಆರೋಗ್ಯ ಕ್ಷೇತ್ರದಲ್ಲೇ ಕ್ರಾಂತಿಕಾರಕ ಹೆಜ್ಜೆಯಾಗಲಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಹುಬ್ಬಳ್ಳಿ ಹಾಗೂ ಮೈಸೂರು ಬಳಿಕ ಬೆಂಗಳೂರಿನ ವಿಕ್ಟೋರಿಯಾ ಹಾಗೂ ಬಳ್ಳಾರಿ ಮೆಡಿಕಲ್ ಕಾಲೇಜುಗಳಲ್ಲಿ ಮಾಡಿರುವ ಟೆಲಿ ಐಸಿಯು ಕ್ಲಸ್ಟರನ್ನು ಶುಕ್ರವಾರ ಡಿ.ಕೆ.ಶಿವಕುಮಾರ್‌ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಈ ತಂತ್ರಜ್ಞಾನದ ಸದುಪಯೋಗ ಪಡೆಯಲು ತಾಲೂಕು ಮಟ್ಟದಲ್ಲಿ ಕನಿಷ್ಠ 5 ರಿಂದ 10 ಐಸಿಯು ಬೆಡ್‌ಗಳ ಆರೋಗ್ಯ ಘಟಕ ಸ್ಥಾಪಿಸಿ. ತುರ್ತು ಪರಿಸ್ಥಿತಿಯಲ್ಲಿ ಟೆಲಿ ಐಸಿಯು ಮೂಲಕ ರೋಗಿಗಳನ್ನು ಪರಿಶೀಲಿಸಿ ಗುಣಮಟ್ಟದ ಆರೋಗ್ಯ ಸೇವೆ ನೀಡಿ ಎಂದು ಸಲಹೆ ನೀಡಿದರು.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಮಾತನಾಡಿ, ನುರಿತ ತಜ್ಞರಿಂದ ಗ್ರಾಮೀಣ ಪ್ರದೇಶದಲ್ಲೂ ಚಿಕಿತ್ಸೆ ದೊರೆಯಬೇಕು. ತಾಲೂಕು ಆಸ್ಪತ್ರೆಗಳಲ್ಲಿಯೇ ಸೂಪರ್ ಸ್ಪೆಷಾಲಿಟಿ ಕೇರ್‌ ಒದಗಿಸಲು ಟೆಲಿ ಐಸಿಯು ಉಪಯುಕ್ತ. ಹೀಗಾಗಿ ಹಂತ ಹಂತವಾಗಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿ ಐಸಿಯು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಒಟ್ಟು ನಾಲ್ಕು ಸರ್ಕಾರಿ ವೈದ್ಯಕೀಯ ಸಂಸ್ಥೆಗಳನ್ನು ಹಬ್‌ಗಳನ್ನಾಗಿ ರೂಪಿಸಿದ್ದು, 41 ತಾಲೂಕು ಆಸ್ಪತ್ರೆಗಳನ್ನು ಲಿಂಕ್ ಮಾಡಲಾಗಿದೆ. ಈ 41 ತಾಲೂಕು ಆಸ್ಪತ್ರೆಗಳಲ್ಲಿ ತಲಾ 10 ಟೆಲಿಐಸಿಯು ಬೆಡ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ಎಐ ತಂತ್ರಜ್ಞಾನಗಳ ಮೂಲಕ ತಜ್ಞ ವೈದ್ಯರ ಸಲಹೆಯೊಂದಿಗೆ ಆರೈಕೆ ಮಾಡಲಾಗುವುದು ಎಂದರು.

ಮುಂದಿನ ವರ್ಷ 60 ತಾಲೂಕು ಆಸ್ಪತ್ರೆಗಳಲ್ಲಿ ಟೆಲಿಐಸಿಯು ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಹಂತ ಹಂತವಾಗಿ ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಟೆಲಿಐಸಿಯು ಮೂಲಕ ತಜ್ಞ ವೈದ್ಯರ ಆರೋಗ್ಯ ಸೇವೆ ಕಲ್ಪಿಸಿಕೊಡುವುದಾಗಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ್‌ ಹಾಜರಿದ್ದರು.‘ಖಾಸಗಿ ಮಾಫಿಯಾದಿಂದ

108 ಆ್ಯಂಬುಲೆನ್ಸ್ ರಕ್ಷಿಸಿ’

ನಮ್ಮ 108 ಆ್ಯಂಬುಲೆನ್ಸ್‌ಗಳನ್ನು ಖಾಸಗಿ ಆಸ್ಪತ್ರೆ ಹಾಗೂ ಮಾಫಿಯಾಗಳ ಜತೆ ಕೈಜೋಡಿಸುವುದನ್ನು ತಪ್ಪಿಸಬೇಕು. ಆ್ಯಂಬುಲೆನ್ಸ್ ಚಾಲಕರು ಖಾಸಗಿ ಆಸ್ಪತ್ರೆಗಳ ಜತೆ ಸೇರಿಕೊಂಡು ತುರ್ತು ಪರಿಸ್ಥಿತಿಯಲ್ಲಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಎಂಬ ಅನೇಕ ದೂರುಗಳನ್ನು ಕೇಳಿದ್ದೇನೆ. ಈ ಮಾಫಿಯಾ ತಪ್ಪಿಸಬೇಕು ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.