ರಾಜ್ಯದ ಕೆಲವೆಡೆ ಮುಂದುವರಿದ ಮಳೆ, ಸಿಡಿಲು ಬಡಿದು ಇಬ್ಬರ ಸಾವು

| Published : Apr 15 2024, 01:18 AM IST / Updated: Apr 15 2024, 11:18 AM IST

ರಾಜ್ಯದ ಕೆಲವೆಡೆ ಮುಂದುವರಿದ ಮಳೆ, ಸಿಡಿಲು ಬಡಿದು ಇಬ್ಬರ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಕೆಲವೆಡೆ ಭಾನುವಾರವೂ ಅಕಾಲಿಕ ಮಳೆಯಾಗಿದ್ದು, ಸಿಡಿಲಬ್ಬರದ ಮಳೆಗೆ ಇಬ್ಬರು ಬಲಿಯಾಗಿದ್ದಾರೆ.

 ಬೆಂಗಳೂರು :  ರಾಜ್ಯದ ಕೆಲವೆಡೆ ಭಾನುವಾರವೂ ಅಕಾಲಿಕ ಮಳೆಯಾಗಿದ್ದು, ಸಿಡಿಲಬ್ಬರದ ಮಳೆಗೆ ಇಬ್ಬರು ಬಲಿಯಾಗಿದ್ದಾರೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಪ್ಪನಟಗಿ ಗ್ರಾಮದಲ್ಲಿ ಸಿಡಿಲು ಬಡಿದು ಮಂಜುನಾಥ (22) ಎಂಬುವರು ಮೃತಪಟ್ಟಿದ್ದಾರೆ. ಹೊಲದಲ್ಲಿ ಕೆಲಸ ಮಾಡುವ ವೇಳೆ ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿಯಿತು. ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಮಲ್ಕಾಪುರ ಕ್ಯಾಂಪ್‌ನಲ್ಲಿ ಶಾಂತಪ್ಪ (18) ಎಂಬುವರು ಸಿಡಿಲಿಗೆ ಬಲಿಯಾಗಿದ್ದಾರೆ.

ಇದೇ ವೇಳೆ, ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಆಲ್ಕೋಡ್ ಗ್ರಾಮದಲ್ಲಿ ಸಿಡಿಲಿಗೆ ಎರಡು ಎತ್ತುಗಳು ಮೃತಪಟ್ಟಿವೆ. ಮುದಗಲ್‌ ನಲ್ಲಿ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೃಹತ್ ಮರವೊಂದು ಧರೆಗುರುಳಿದ್ದು, ಅದೃಷ್ಟವಶಾತ್‌ ಚಿಕಿತ್ಸೆಗೆ ಆಗಮಿಸಿದ ರೋಗಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೊಲಾಳ ಮದ್ದಪ್ಪನಹಟ್ಟಿ ಗ್ರಾಮದಲ್ಲಿ ಮಳೆಗೆ ಎರಡು ಎಕರೆ ಪ್ರದೇಶದಲ್ಲಿ ಬೆಳೆದ ಸುಮಾರು 2000 ಬಾಳೆ ಗಿಡಗಳು ನಾಶವಾಗಿವೆ.

3 ದಿನ ಬಿಡುವು, 18ರಿಂದ ಮತ್ತೆ ಚುರುಕು ಸಾಧ್ಯತೆ : ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮುಂದಿನ ಮೂರು ದಿನ ಬಿಡುವು ನೀಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಎರಡ್ಮೂರು ದಿನ ಉತ್ತರ ಕರ್ನಾಟಕ ಜಿಲ್ಲೆಗಳು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು. 

ಭಾನುವಾರದಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಮುಂದಿನ ಮೂರು ದಿನ ರಾಜ್ಯಾದ್ಯಂತ ಬಹುತೇಕ ಒಣ ಹವೆ ಮುಂದುವರೆಯುವ ಸಾಧ್ಯತೆ ಇದೆ. ಏ.18 ರಿಂದ ರಾಜ್ಯಾದ್ಯಂತ ಮತ್ತೆ ಮಳೆ ಚುರುಕುಗೊಳ್ಳಲಿದೆ.

2 ದಿನ ಕರಾವಳಿಯಲ್ಲಿ ಸೆಕೆ:ಕರಾವಳಿ ಜಿಲ್ಲೆಗಳಲ್ಲಿ ಏ.15 ಹಾಗೂ ಏ.16 ರಂದು ಗಾಳಿಯಲ್ಲಿ ತೇವಾಂಶ ಹೆಚ್ಚಾಗಿ ಕಂಡು ಬಂದರೂ ಸೆಕೆ ಹೆಚ್ಚಾಗಿರಲಿದೆ. ಗರಿಷ್ಠ ಉಷ್ಣಾಂಶ ಕಡಿಮೆ ಇದ್ದರೂ ತಾಪ ಹೆಚ್ಚಾದ ರೀತಿ ಅನುಭವವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಿರುವ ವರದಿಯ ಪ್ರಕಾರ, ಶಿವಮೊಗ್ಗದ ಆಗುಂಬೆಯಲ್ಲಿ ಅತಿ ಹೆಚ್ಚು 8 ಸೆಂ.ಮೀ. ಮಳೆಯಾಗಿದೆ. ಉಳಿದಂತೆ ಕೊಪ್ಪಳದ ತಾವರಗೇರಾದಲ್ಲಿ 7, ಧರ್ಮಸ್ಥಳ, ಚಿಕ್ಕಮಗಳೂರಿನ ಎನ್‌.ಆರ್‌.ಪುರದಲ್ಲಿ ತಲಾ 4, ಧಾರವಾಡ, ಲಿಂಗನಮಕ್ಕಿ, ಆನಮಟ್ಟಿ, ಕೊಪ್ಪಳದ ಬೇವೂರು, ರಾಯಚೂರಿನ ಮದಗಲ್‌, ಇಂಡಿಯಲ್ಲಿ ತಲಾ 3, ಹರಪನಹಳ್ಳಿ, ಶೃಂಗೇರಿ, ಕೊಪ್ಪ, ಸಿದ್ದಾಪುರ, ಔರಾದ್‌, ಕುಡತಿನಿ ತಲಾ 2 ಸೆಂ.ಮೀ. ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಲಾಗಿದೆ.