ಕ್ರಾಫರ್ಡ್‌ ಆಸ್ಪತ್ರೆ ಅಭಿವೃದ್ಧಿಗೆ ₹೨.೬೫ ಕೋಟಿ ಯೋಜನೆ: ಶಾಸಕ ಸಿಮೆಂಟ್ ಮಂಜು

| Published : Jun 26 2024, 12:33 AM IST

ಕ್ರಾಫರ್ಡ್‌ ಆಸ್ಪತ್ರೆ ಅಭಿವೃದ್ಧಿಗೆ ₹೨.೬೫ ಕೋಟಿ ಯೋಜನೆ: ಶಾಸಕ ಸಿಮೆಂಟ್ ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಕ್ರಾಫರ್ಡ್‌ ಆಸ್ಪತ್ರೆ ಅಭಿವೃದ್ದಿಗಾಗಿ ೨.೬೫ ಕೋಟಿ ರು. ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಸಕಲೇಶಪುರದಲ್ಲಿ ಆರೋಗ್ಯ ರಕ್ಷಾ ಸಮಿತಿ ಸಮಾನ್ಯ ಸಭೆಯಲ್ಲಿ ಮಾತನಾಡಿದರು.

ಆರೋಗ್ಯ ರಕ್ಷಾ ಸಮಿತಿ ಸಮಾನ್ಯ ಸಭೆ । ಮೂಲಭೂತ ಸೌಕರ್ಯಕ್ಕೆ ಆದ್ಯತೆ

ಕನ್ನಡಪ್ರಭ ವಾರ್ತೆ ಸಕಲೇಶಪುರ

ಪಟ್ಟಣದ ಕ್ರಾಫರ್ಡ್‌ ಆಸ್ಪತ್ರೆ ಅಭಿವೃದ್ದಿಗಾಗಿ ೨.೬೫ ಕೋಟಿ ರು. ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಮಂಗಳವಾರ ಕ್ರಾಫರ್ಡ್‌ ಆಸ್ಪತ್ರೆ ಅವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ರಕ್ಷಾ ಸಮಿತಿ ಸಮಾನ್ಯ ಸಭೆಯಲ್ಲಿ ಮಾತನಾಡಿ, ಆಸ್ಪತ್ರೆಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಮುಖ್ಯವಾಗಿ ಸೋರುವಿಕೆ ತಡೆಗಟ್ಟುವುದು ಹಾಗೂ ವಿದ್ಯುತ್ ಲೈನ್ ದುರಸ್ತಿಪಡಿಸಲು ಈ ಅನುದಾನ ಬಳಸಲು ಚಿಂತಿಸಲಾಗಿದೆ. ಆಸ್ಪತ್ರೆಯಲ್ಲಿ ೫೫ ಲಕ್ಷ ರು. ವೆಚ್ಚದಲ್ಲಿ ಅತ್ಯಾಧುನಿಕ ಲ್ಯಾಬ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ವೈದ್ಯಾಧೀಕಾರಿ ಮಹೇಶ್ ಮಾತನಾಡಿ, ಆಸ್ಪತ್ರೆಯ ನಗುಮೊಗು ಆ್ಯಂಬುಲೆನ್ಸ್‌ನ ಸೇವೆ ಉಚಿತವಾಗಿ ನೀಡಲಾಗುತ್ತಿದೆ. ೧೦೮ ಆ್ಯಂಬುಲೆನ್ಸ್ ಸೇವೆಗೆ ಕಿ.ಮೀ.ಗೆ ನಾಲ್ಕು ರು. ವಿಧಿಸಲಾಗುತ್ತಿದೆ ಎಂದು ಸಭೆಯಲ್ಲಿ ವಿವರಿಸಿದರು.

ಆಸ್ಪತ್ರೆಯ ಮಕ್ಕಳ ವೈದ್ಯೆ ಸಂದ್ಯಾ, ಆಸ್ಪತ್ರೆಯಲ್ಲಿ ನಾಯಿಗಳ ಹಾವಳಿ ಹೆಚ್ಚಿದ್ದು ಆಸ್ಪತ್ರೆಯ ಒಳ ರೋಗಿಗಳ ಕೊಠಡಿಗೆ ಬಂದು ಮಲಗುತ್ತವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕ ಆಸ್ಪತ್ರೆಯಲ್ಲಿ ನಾಯಿ ಹಾವಳಿ ತಪ್ಪಿಸಲು ಶೀಘ್ರವೇ ಕಾವಲುಗಾರರನ್ನು ನೇಮಕ ಮಾಡಲಾಗುವುದು ಎಂದರು.

ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಾಸಿಗೆ ಕೊರತೆ ಇರುವ ಕಾರಣ ಸಾಕಷ್ಟು ರೋಗಿಗಳನ್ನು ವಾಪಸ್‌ ಕಳುಹಿಸಲಾಗುತ್ತಿದೆ. ಆಸ್ಪತ್ರೆಗೆ ದಾಖಲಿಸಿಕೊಳ್ಳದಿದ್ದರೆ ರೋಗಿ ಸಂಬಂಧಿಕರಿಂದ ಪ್ರಶ್ನೆಗಳನ್ನು ಎದುರಿಸಬೇಕಿದೆ. ಅಲ್ಲದೆ ಹೊರರೋಗಿಗಳ ಸಂಖ್ಯೆ ಹೆಚ್ಚಿದ್ದು ನಿತ್ಯ ೯೦೦ ರಿಂದ ಒಂದು ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಬೇಕಿದೆ. ಹೊರರೋಗಿಗಳ ಚಿಕಿತ್ಸೆ ನೀಡುವ ವೇಳೆ ತುರ್ತುಚಿಕಿತ್ಸೆಗೂ ತಾವೇ ತೆರಳಬೇಕು. ಇದರಿಂದ ಹೊರ ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ. ತುರ್ತುಚಿಕಿತ್ಸೆಗೆ ಬಂದ ರೋಗಿಗಳಿಗೆ ಚಿಕಿತ್ಸೆ ನೀಡಲು ಅಲ್ಪ ವಿಳಂಬವಾದರೂ ಪ್ರಭಾವಿಗಳಿಗೆ ಕರೆ ಮಾಡುತ್ತಾರೆ. ಇದು ಸಹ ಒತ್ತಡ ಸೃಷ್ಟಿಸುತ್ತಿದೆ. ಮುಂಜಾನೆ ರೋಗಿಗಳ ಸಂಖ್ಯೆ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ಸಂಜೆ ವೇಳೆ ಹೆಚ್ಚಿನ ಹೊರ ರೋಗಿಗಳು ಬರುತ್ತಿರುವುದರಿಂದ ಮುಂಜಾನೆಯಿಂದ ರಾತ್ರಿವರಗೂ ಕೆಲಸ ಮಾಡಬೇಕಿದೆ. ಇದರಿಂದ ನಿತ್ಯ ಒತ್ತಡದಲ್ಲಿ ಕೆಲಸ ಮಾಡಬೇಕಿದೆ ಎಂದು ಕ್ರಾಫರ್ಡ್‌ ಆಸ್ಪತ್ರೆಯ ವೈದ್ಯರು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಶಾಸಕ, ವೈದ್ಯರ ಕೊರತೆ ಹೆಚ್ಚಿನ ಒತ್ತಡಕ್ಕೆಕಾರಣವಾಗಿದೆ. ಶೀಘ್ರವೇ ನಾಲ್ವರು ತುರ್ತುಚಿಕಿತ್ಸಾ ವೈದ್ಯಾಧಿಕಾರಿಗಳನ್ನು ನೇಮಿಸಲಾಗುವುದು. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಜತೆ ಚರ್ಚಿಸಿದ್ದು ನೇಮಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಹೆಚ್ಚುವರಿಯಾಗಿ ಒಳರೋಗಿಗಳ ಕೊಠಡಿಯನ್ನು ತೆರೆಯಲಾಗುವುದು. ಅಲ್ಲದೆ ಐವರು ಶುಶ್ರೂಷಕಿಯರನ್ನು ನೇಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಗೆ ಬಾರದ ಆಯುಷ್ಮಾನ್ ಇಲಾಖೆ ಉಪ ನಿರ್ದೇಶಕ ಮೊಸ್ಯಾ ಬೇರ‍್ಯಾ ಅವರಿಗೆ ಶಾಸಕ ಸಿಮೆಂಟ್ ಮಂಜು ಕರೆ ಮಾಡಿ, ‘ಶಾಸಕರು ಕರೆದ ಸಭೆಗೆ ಬರದಿರುವಷ್ಟು ನಿರ್ಲಕ್ಷ್ಯವೇ ನಿಮಗೆ. ಜಿಲ್ಲೆಯಲ್ಲಿ ನಿಮ್ಮ ಆಸ್ಪತ್ರೆಗಳು ಎಷ್ಟಿವೆ. ಕಚೇರಿಯಲ್ಲಿ ಕುಳಿತು ಏನು ಮಾಡುತ್ತಿದ್ದೀರಾ, ಸಾರ್ವಜನಿಕರ ಕೆಲಸ ಮಾಡಲು ನಾನು ಬಂದಿರುವುದು. ಜಿಲ್ಲೆಗೆ ನೀವು ಬಂದು ಮೂರು ತಿಂಗಳಾದರೂ ಇದುವರಗೆ ನಿಮ್ಮ ಮುಖ ನೋಡಿಲ್ಲ. ಇದುವರಗೆ ನಿಮ್ಮನ್ನು ನಾವು ಸಭೆಗೆ ಕರೆದಿದ್ದೇವೆ, ಮತ್ತೊಮ್ಮೆ ಇದೇ ರೀತಿ ಮುಂದುವರಿದರೆ ಉನ್ನತ ಅಧಿಕಾರಿಗಳಿಗೆ ನಿಮ್ಮ ವಿರುದ್ಧ ದೂರು ನೀಡಲಾಗುವುದು’ ಎಂದುಆಕ್ರೋಶ ವ್ಯಕ್ತಪಡಿಸಿದರು.

ರಕ್ಷಾ ಸಮಿತಿ ಸದಸ್ಯರಾದ ವಳಲಹಳ್ಳಿ ಅಶ್ವಥ್, ಸಂಜೀತ್ ಶೆಟ್ಟಿ, ಗುರುಪ್ರಸಾದ್, ಕುಸುಮಾ ಭೂಪಾಲ್, ಬ್ಯಾಕರವಳ್ಳಿ ಜಯಣ್ಣ, ಸುದೀಶ್. ಡಾ.ಸುಧಾಕರ್, ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ, ತಹಸೀಲ್ದಾರ್ ಮೇಘನಾ ಇದ್ದರು.