ಕೊಂಡ ಹಾಯುವ ವೇಳೆ ಆಯತಪ್ಪಿ ಬಿದ್ದ ಇಬ್ಬರು ಅರ್ಚಕ

| Published : Apr 17 2025, 12:01 AM IST

ಸಾರಾಂಶ

ಕೊಂಡ ಹಾಯುವ ವೇಳೆ ಆಯತಪ್ಪಿ ಬಿದ್ದ ಇಬ್ಬರು ಅರ್ಚಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕೂತಗಾನಹಳ್ಳಿಯಲ್ಲಿ ನಡೆದಿದೆ.

ಕನಕಪುರ: ಕೊಂಡ ಹಾಯುವ ವೇಳೆ ಆಯತಪ್ಪಿ ಬಿದ್ದ ಇಬ್ಬರು ಅರ್ಚಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕೂತಗಾನಹಳ್ಳಿಯಲ್ಲಿ ನಡೆದಿದೆ. ತಾಲೂಕಿನ ಕೂತಗಾನಹಳ್ಳಿಯ ಶ್ರೀ ಬಾಣಂತಮಾರಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಶಿವಣ್ಣ(43), ರಾಮಸ್ವಾಮಿ(63) ಗಾಯಗೊಂಡವರು. ಶಿವಣ್ಣನಿಗೆ ದೊಡ್ಡ ಆಲಹಳ್ಳಿ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದ್ದು, ರಾಮಸ್ವಾಮಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರತಿ ವರ್ಷ ನಡೆಯುವ ಕೊಂಡೋತ್ಸವದಲ್ಲಿ ಹಿಂದಿನಿಂದಲೂ ಪ್ರಧಾನ ಅರ್ಚಕರ ಕುಟುಂಬವೇ ಹೊಂಡ ಹಾಯುತ್ತಾ ಬರುತ್ತಿದ್ದು ಈ ಬಾರಿ ಶಿವಣ್ಣ ಕೊಂಡ ಹಾಯುವ ವೇಳೆ ಆಯತಪ್ಪಿ ಬೀಳುವ ಸಮಯದಲ್ಲಿ ಭಕ್ತಾದಿಗಳು ಹಿಡಿದುಕೊಂಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಕೊಂಡ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಶಿವಣ್ಣ ಕುಟುಂಬದ ರಾಮಸ್ವಾಮಿ ಕೊಂಡ ಹಾಯಲು ಮುಂದಾಗಿದ್ದು ಅವರು ಸಹ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ.

ಭಕ್ತಾದಿಗಳ ಬೇಸರ:

ಬಹಳ ಹಿಂದಿನಿಂದಲೂ ಶ್ರದ್ಧಾ-ಭಕ್ತಿಯಿಂದ ದೇವರ ಕಾರ್ಯಆಚರಿಸಲಾಗುತ್ತಿತ್ತು. ಆದರೆ ಈಗ ಮಾಡುವ ಪೂಜಾ ವಿಧಿ- ವಿಧಾನಗಳಲ್ಲಿ ಲೋಪಗಳಾಗಿರುವುದೇ ಈ ಅವಘಡಕ್ಕೆ ಕಾರಣ ಎಂದು ಕೊಂಡ ವೀಕ್ಷಿಸಲು ಬಂದಿದ್ದ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.