ಕುಷ್ಟಗಿ ತಾಲೂಕಿಗೆ ಒಲಿದ ಎರಡು ರಾಜ್ಯೋತ್ಸವ ಪ್ರಶಸ್ತಿ

| Published : Oct 31 2025, 03:00 AM IST

ಕುಷ್ಟಗಿ ತಾಲೂಕಿಗೆ ಒಲಿದ ಎರಡು ರಾಜ್ಯೋತ್ಸವ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಕುಷ್ಟಗಿ ತಾಲೂಕಿನ ಇಬ್ಬರು ಮಹನೀಯರಿಗೆ ಪ್ರಶಸ್ತಿ ಲಭಿಸಿರುವುದು ತಾಲೂಕಿನ ಕೀರ್ತಿ ಹೆಚ್ಚಿಸಿದೆ

ಪರಶಿವಮೂರ್ತಿ ದೋಟಿಹಾಳ ಕುಷ್ಟಗಿ

ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ರಾಜ್ಯ ಸರ್ಕಾರ ಪ್ರಕಟಿಸಿದ್ದು, ತಾಲೂಕಿನ ಇಬ್ಬರು ಮಹನೀಯರಿಗೆ ಪ್ರಶಸ್ತಿ ಲಭಿಸಿರುವುದು ತಾಲೂಕಿನ ಕೀರ್ತಿ ಹೆಚ್ಚಿಸಿದೆ.

ತಾಲೂಕಿನ ಗುಮಗೇರಾ ಗ್ರಾಮದ ಶೇಖರಗೌಡ ಮಾಲಿಪಾಟೀಲ ಅವರಿಗೆ ಸಹಕಾರ ಕ್ಷೇತ್ರದಲ್ಲಿ ಅಪಾರ ಸಾಧನೆಗೈದ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಅದೇ ರೀತಿ ತಾಲೂಕಿನ ತೆಗ್ಗಿಹಾಳ ಗ್ರಾಮದ ಬಸಪ್ಪ ಚೌಡ್ಕಿ ಅವರಿಗೆ ಜಾನಪದ ಕ್ಷೇತ್ರದಲ್ಲಿ ಅಪಾರ ಸಾಧನೈದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದೆ.

ಶೇಖರಗೌಡ ಮಾಲಿಪಾಟೀಲ: ಮೂಲತಃ ಕುಷ್ಟಗಿ ತಾಲೂಕಿನ ಗುಮಗೇರಾ ಗ್ರಾಮದ ಶೇಖರಗೌಡ ಮಾಲಿಪಾಟೀಲ ವಿದ್ಯಾರ್ಥಿ ದಿಸೆಯಿಂದಲೇ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡ ಇವರು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಮಾಡಿ ನಂತರ ಸ್ವಗ್ರಾಮ ಗುಮಗೇರಾದಲ್ಲಿ ಉದಯ ಯುವಕ ಮಂಡಳ ಸ್ಥಾಪಿಸಿ ಅನೇಕ ಉತ್ತಮ ಕಾರ್ಯ ಮಾಡಿ ಜಿಲ್ಲಾ ಯುವಪ್ರಶಸ್ತಿ ಹಾಗೂ ರಾಜ್ಯಯುವ ಪ್ರಶಸ್ತಿಗೆ ಭಾಜನರಾಗಿದ್ದರು. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ ಇವರು ಸಹಕಾರ ರಂಗಕ್ಕೆ ಕಾಲಿಡುವ ಮೂಲಕ ತಮ್ಮ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಳೆದ ಹಲವು ವರ್ಷಗಳಿಂದ ಕೊಪ್ಪಳ ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷರಾಗಿ ಇಂದಿಗೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇವರು ಸದ್ಯ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ, ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ನಿರ್ದೇಶಕ, ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ, ರಾಯಚೂರು ಜಿಲ್ಲಾ ಕೇಂದ್ರ ಸಹಕಾರಿ ಮಧ್ಯವರ್ತಿ ಬ್ಯಾಂಕ್ ನಿರ್ದೇಶಕ, ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಅಧ್ಯಕ್ಷರಾಗಿ, ಪಿಕಾರ್ಡ ಬ್ಯಾಂಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಗುಮಗೇರಾ, ಕೊಪ್ಪಳ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಇವರು ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಗಂಗಾವತಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಿದ್ದಾರೆ, ಜಿಲ್ಲಾ ಯುವ ಮಹಾಮಂಡಳದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘ-ಸಂಸ್ಥೆಯ ಪ್ರತಿನಿಧಿಯಾಗಿ ಸೇವೆ ಮಾಡಿರುವ ಇವರು ಅನೇಕ ಕಾದಂಬರಿ ಬರೆದಿದ್ದಾರೆ. ಸಾಧನೆಗೈದ ಇವರಿಗೆ ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ, ಕನ್ನಡಶ್ರೀ ಪ್ರಶಸ್ತಿ, ರಾಜ್ಯಯುವ ಪ್ರಶಸ್ತಿ, ಸಮನ್ವಯಶ್ರೀ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಸಹಕಾರ ರಂಗದಲ್ಲಿ ಸೇವೆ ಮುಂದುವರಿಸಿದ್ದಾರೆ.

ಬಸಪ್ಪ ಭರಮಪ್ಪ ಚೌಡ್ಕಿ: ಕುಷ್ಟಗಿ ತಾಲೂಕಿನ ತೆಗ್ಗಿಹಾಳ ಗ್ರಾಮದ 93 ವರ್ಷದ ಬಸಪ್ಪ ಭರಮಪ್ಪ ಚೌಡ್ಕಿ ಮೂಲತಃ ಜಾನಪದ ಕ್ಷೇತ್ರದಲ್ಲೊಂದಾದ ಚೌಡ್ಕಿ ಪದದ ಕಲಾವಿದರಾಗಿದ್ದು, ಇವರು ತಾತ ಮುತ್ತಾತನ ಕಾಲದಿಂದಲೂ ವಂಶಪರಂಪರೆಯಾಗಿ ಬಂದಿರುವ ಚೌಡ್ಕಿ ಪದ ಹಾಡುವುದು. ಚೌಡ್ಕಿ,ತುಂತುಣಿ ವಾದ್ಯ ನುಡಿಸುತ್ತಾ ಚೌಡ್ಕಿ ಪದ ಉಳಿಸಿ ಬೆಳೆಸುತ್ತಾ ಬಂದಿದ್ದು ಇಂದಿಗೂ ಸಹಿತ ಚೌಡ್ಕಿ ಪದಗಳಷ್ಟೆ ಅಲ್ಲದೇ,ಗೀಗೀ ಪದ, ರಿವಾಯತ್ ಪದ, ತತ್ವಪದ ಹಾಡುತ್ತಿರುವ ಇವರು ಶ್ರೀಕೃಷ್ಣ ಪಾರಿಜಾತದಲ್ಲಿ ರಾಧೆಯಾಗಿ. ಧೂತೆಯಾಗಿ ನೂರಾರು ಸಣ್ಣಾಟಗಳಲ್ಲಿ ಅಭಿನಯಿಸಿ ಗಾಯಕರಾಗಿ ಕಲಾವಿದರಾಗಿ ಸೈ ಎನಿಸಿಕೊಂಡಿದ್ದಾರೆ.

ಇವರು ಆನೆಗೊಂದಿ ಉತ್ಸವ, ಕೊಪ್ಪಳ ಜಿಲ್ಲಾ ಮಟ್ಟದ ಯುವಜನ ಮೇಳ, ಜಾನಪದ ಕಲಾ ತರಬೇತಿ ಶಿಬಿರ, ಜಾನಪದ ಜಾತ್ರೆ, ಕರ್ನಾಟಕ ಜಾನಪದ ಅಕಾಡೆಮಿ, 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕರ್ನಾಟಕ ಜಾನಪದ ಅಕಾಡೆಮಿ,ಜಾನಪದ ಸಂಗೀತ ಕಲಾವಿದರ ತರಬೇತಿ ಸೇರಿದಂತೆ ರಾಜ್ಯಮಟ್ಟದ ಹಾಗೂ ರಾಷ್ಟ್ರಮಟ್ಟದ ಕಾರ್ಯಕ್ರಮ ದಸರಾ ಕಾರ್ಯಕ್ರಮಗಳಲ್ಲಿ ಚೌಡ್ಕಿ ಪದ ಹಾಡುವ ಮೂಲಕ ಜಾನಪದ ಕಲೆ ಇಂದಿಗೂ ಉಳಿಸಿಕೊಂಡು ಬೆಳೆಸಿಕೊಂಡು ಬಂದಿರುವ ಇವರ ಸಾಧನೆ ಅಪಾರವಾಗಿದೆ.

ನಮ್ಮ ತಂದೆ ಬಸಪ್ಪ ಚೌಡ್ಕಿಯವರಿಗೆ ಈ ವರ್ಷ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ವಂಶಪರಂಪರೆಯಾಗಿ ಜಾನಪದ ಕಲೆ ಮೈಗೂಡಿಸಿಕೊಂಡು ಸಾವಿರಾರು ಕಾರ್ಯಕ್ರಮ ಮಾಡಿದ್ದೇವೆ ಇದನ್ನು ಗುರುತಿಸಿ ಪ್ರಶಸ್ತಿ ನೀಡಿರುವ ರಾಜ್ಯ ಸರ್ಕಾರಕ್ಕೆ ಧನ್ಯವಾದ ಎಂದು ಪ್ರಶಸ್ತಿ ಪುರಸ್ಕೃತ ಬಸಪ್ಪನ ಮಗ ಶಿವರಾಯಪ್ಪ ಚೌಡ್ಕಿ ತಿಳಿಸಿದ್ದಾರೆ.

ನನ್ನ 39 ವರ್ಷದ ಸಹಕಾರ ರಂಗದಲ್ಲಿ ಸಲ್ಲಿಸಿರುವ ಸೇವೆಗೆ ಸಿಕ್ಕ ಪ್ರಶಸ್ತಿ ಇದಾಗಿದ್ದು, ನಾನು ಪ್ರಾಥಮಿಕ ಹಂತದಿಂದ ರಾಜ್ಯಮಟ್ಟದಲ್ಲಿಯೂ ಕೆಲಸ ನಿರ್ವಹಿಸಿದ್ದೇನೆ. ಈ ಪ್ರಶಸ್ತಿ ಸಹಕಾರಿಗಳಿಗೆ ಅರ್ಪಿಸಲಾಗುತ್ತಿದ್ದು ನನಗೆ ಈ ಪ್ರಶಸ್ತಿ ನೀಡಿರುವ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ ಎಂದು ಸಹಕಾರಿ ಧುರೀಣ ಶೇಖರಗೌಡ ಮಾಲಿಪಾಟೀಲ ತಿಳಿಸಿದ್ದಾರೆ.