ಆಹಾರ ಅರಸಿ ಬಂದಿದ್ದ ಕಡವೆಗಳು ಬಾವಿಯ ಅಂಚಿನಲ್ಲಿ ಕಾಲು ಜಾರಿ ಒಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾರವಾರ: ತಾಲೂಕಿನ ಬೈತ್‌ಖೋಲ್ ವ್ಯಾಪ್ತಿಯ ಅಲಿಗದ್ದಾದಲ್ಲಿ ತೆರೆದ ಬಾವಿಗೆ ಬಿದ್ದು 2 ಗಂಡು ಕಡವೆಗಳು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.ಆಹಾರ ಅರಸಿ ಬಂದಿದ್ದ ಕಡವೆಗಳು ಬಾವಿಯ ಅಂಚಿನಲ್ಲಿ ಕಾಲು ಜಾರಿ ಒಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ವಿಷಯ ತಿಳಿದು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬಾವಿಯಲ್ಲಿ ಈ ಹಿಂದೆಯೂ ಜಾನುವಾರುಗಳು ಹಾಗೂ ಕಾಡುಪ್ರಾಣಿಗಳು ಬಿದ್ದು ಮೃತಪಟ್ಟಿದ್ದವು ಎನ್ನಲಾಗಿದೆ. ಅಲ್ಲದೆ, ಮಹಿಳೆಯೊಬ್ಬರೂ ಇದೇ ಬಾವಿಗೆ ಬಿದ್ದು ಜೀವ ಕಳೆದುಕೊಂಡಿದ್ದರು ಎನ್ನಲಾಗಿದೆ. ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಿರುವುದರಿಂದ ಬಾವಿಯ ನೀರು ಕಲುಷಿತಗೊಂಡು ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿದೆ.

ಇಷ್ಟಾದರೂ ಸಂಬಂಧಪಟ್ಟ ಇಲಾಖೆಯಿಂದ ಬಾವಿಗೆ ತಡೆಗೋಡೆ ನಿರ್ಮಿಸುವ ಅಥವಾ ಸುರಕ್ಷತಾ ಕ್ರಮ ಕೈಗೊಳ್ಳುವ ಕಾರ್ಯವಾಗಲಿ ನಡೆದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನಿಷ್ಠ ತಂತಿ ಬೇಲಿಯಾದರೂ ಅಳವಡಿಸಿದ್ದರೆ ಇಂತಹ ದುರಂತಗಳನ್ನು ತಪ್ಪಿಸಬಹುದಿತ್ತು. ಜನರು ಹಾಗೂ ವನ್ಯಜೀವಿಗಳ ಸುರಕ್ಷತೆಗೆ ಕೂಡಲೇ ಬಾವಿಗೆ ತಡೆಗೋಡೆ ಅಥವಾ ಬೇಲಿ ನಿರ್ಮಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಸ್- ಟ್ಯಾಂಕರ್ ಮುಖಾಮುಖಿ ಡಿಕ್ಕಿ: ಆರು ಮಂದಿಗೆ ಗಾಯ

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 52ರ ತಾಲೂಕಿನ ಸರಳೆಬೈಲ್ ಬಳಿ ಸಾರಿಗೆ ಬಸ್ ಹಾಗೂ ಟ್ಯಾಂಕರ್ ನಡುವೆ ಸೋಮವಾರ ಬೆಳಗ್ಗೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಬಸ್‌ನಲ್ಲಿದ್ದ ಐವರು ಪ್ರಯಾಣಿಕರು ಹಾಗೂ ಟ್ಯಾಂಕರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಕಾರವಾರದಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್ ಹಾಗೂ ಹುಬ್ಬಳ್ಳಿಯಿಂದ ಬಾಳೆಗುಳಿ ಕಡೆಗೆ ಬರುತ್ತಿದ್ದ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದೆ. ಗಾಯಾಳುಗಳನ್ನು ಅಂಕೋಲಾ ಹಾಗೂ ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಆಗಮಿಸಿದ ಅಂಕೋಲಾ ಪೊಲೀಸರು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪಿಎಸ್‌ಐ ಸುನೀಲ ಹುಲ್ಲೋಳ್ಳಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.