ಹೊನ್ನಾವರ ತಾಲೂಕಿನಲ್ಲಿ ಎರಡು ಪ್ರತ್ಯೇಕ ಅಪಘಾತ: ಹಲವರಿಗೆ ಗಾಯ

| Published : Feb 02 2025, 11:48 PM IST

ಸಾರಾಂಶ

ಗೇರುಸೊಪ್ಪದಿಂದ ಸುಮಾರು ಎರಡು ಕಿಮೀ ದೂರದಲ್ಲಿರುವ ಡ್ಯಾಂ ಬಳಿಯಲ್ಲಿ ಮಿನಿ ಬಸ್ಸೊಂದು ಧರೆಗೆ ಗುದ್ದಿ ಅಪಘಾತ ಸಂಭವಿಸಿದ್ದು, ಚಿಕ್ಕಮಗಳೂರಿನಿಂದ ಗೋವಾಗೆ ತೆರಳುತ್ತಿದ್ದ ಮಿನಿ ಬಸ್ ಅಪಘಾತಕ್ಕೆ ತುತ್ತಾಗಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 9 ಜನರಿಗೂ ಗಂಭೀರ ಗಾಯಗಳಾಗಿದ್ದು, ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.

ಹೊನ್ನಾವರ:

ತಾಲೂಕಿನಲ್ಲಿ ಎರಡು ಪ್ರತ್ಯೇಕ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಲೂಕಿನ ಗೇರುಸೊಪ್ಪದಿಂದ ಸುಮಾರು ಎರಡು ಕಿಮೀ ದೂರದಲ್ಲಿರುವ ಡ್ಯಾಂ ಬಳಿಯಲ್ಲಿ ಮಿನಿ ಬಸ್ಸೊಂದು ಧರೆಗೆ ಗುದ್ದಿ ಅಪಘಾತ ಸಂಭವಿಸಿದ್ದು, ಚಿಕ್ಕಮಗಳೂರಿನಿಂದ ಗೋವಾಗೆ ತೆರಳುತ್ತಿದ್ದ ಮಿನಿ ಬಸ್ ಅಪಘಾತಕ್ಕೆ ತುತ್ತಾಗಿದೆ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 9 ಜನರಿಗೂ ಗಂಭೀರ ಗಾಯಗಳಾಗಿದ್ದು, ಪಟ್ಟಣದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.

ಇನ್ನೊಂದು ಪ್ರಕರಣದಲ್ಲಿ ಬಾಳೆಗದ್ದೆಯಲ್ಲಿ ಮದುವೆ ಟೆಂಪೋವೊಂದು ಚಾಲಕನಿಲ್ಲದೆ ಚಲಿಸಿ ಅಪಘಾತಕ್ಕೆ ತುತ್ತಾಗಿದೆ. ಚಾಲಕನಿಲ್ಲದೆ ಚಲಿಸಿದ ಟೆಂಪೋ ಅಲ್ಲಿಯೇ ನಿಂತಿದ್ದ ಬೈಕ್ ಮೇಲೆ ಹರಿದು ಬೈಕ್ ಜಖಂಗೊಂಡಿದೆ. ಟೆಂಪೊದೊಳಗೆ ನಾಲ್ಕು ಜನರಿಗೆ ಚಿಕ್ಕಪುಟ್ಟ ಗಾಯಗಳಾಗಿದೆ.

ಉತ್ತರ ಕನ್ನಡದಲ್ಲಿ ಒಸಿ ಪ್ರಕರಣವೇ ಅಧಿಕ

ಕಾರವಾರ: ಜಿಲ್ಲೆಯಲ್ಲಿ ಕಳೆದ ಎರಡು ವರ್ಷದಲ್ಲಿ ಒಸಿ(ಮಟ್ಕಾ) ಪ್ರಕರಣವೇ ಹೆಚ್ಚು ದಾಖಲಾಗಿದೆ. ಮಿತಿ ಮೀರಿದ ಬಡ್ಡಿ ವಿಧಿಸಿರುವ ಪ್ರಕರಣ ಅತ್ಯಂತ ಕಡಿಮೆ ದಾಖಲಾಗಿದೆ.

ಪೊಲೀಸ್ ಇಲಾಖೆಯೊಂದೇ ಲಕ್ಷಾಂತರ ರುಪಾಯಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದೆ. ಗೋವಾ ರಾಜ್ಯದ ಗಡಿಯನ್ನು ಕಾರವಾರ ಹಾಗೂ ಜೋಯಿಡಾ ತಾಲೂಕುಗಳು ಹಂಚಿಕೊಂಡಿದ್ದು, ಗೋವಾದಲ್ಲಿ ಮದ್ಯ ಕಡಿಮೆ ಬೆಲೆಗೆ ಸಿಗುವುದರಿಂದ ಅಕ್ರಮವಾಗಿ ಅಲ್ಲಿಂದ ಉತ್ತರ ಕನ್ನಡಕ್ಕೆ ತಂದು ಮಾರಾಟ ಮಾಡಲಾಗುತ್ತಿದೆ. ಪೊಲೀಸ್, ಅಬಕಾರಿ, ಕರಾವಳಿ ಕಾವಲು ಪಡೆ ಕಣ್ಣು ತಪ್ಪಿಸಿ ಮದ್ಯವನ್ನು ಸಾಗಾಟ ಮಾಡುವುದು ಪ್ರತಿನಿತ್ಯ ನಡೆಯುತ್ತಿದೆ.ಜಿಲ್ಲೆಯಲ್ಲಿ ಕಳೆದ ೨ವರ್ಷದಲ್ಲಿ ಎನ್‌ಡಿಪಿಎಸ್(ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್) ಕಾಯಿದೆಯಡಿ ೮೯ ಪ್ರಕರಣ ದಾಖಲಾಗಿದ್ದು, ೨೦೯ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ₹೨೦.೨೩ ಲಕ್ಷ ಮೌಲ್ಯದ ೪೯.೯೮೭ ಕೆಜಿ ಮಾದಕ ವಸ್ತು ಜಪ್ತಿ ಮಾಡಲಾಗಿದೆ.

ಗೋಹತ್ಯೆ ನಿಷೇಧ ಕಾಯಿದೆಯಡಿ ೬೪ ಪ್ರಕರಣ ದಾಖಲಾಗಿದ್ದು, ೪೧೨ ಜಾನುವಾರು ರಕ್ಷಣೆ ಮಾಡಲಾಗಿದೆ. ೨೧೧೫ ಕೆಜಿ ಗೋಮಾಂಸ ವಶಕ್ಕೆ ಪಡೆಯಲಾಗಿದೆ. ಒಸಿ(ಮಟ್ಕಾ) ಸಂಬಂಧಿಸಿ ೬೩೩ ಪ್ರಕರಣ ದಾಖಲಿಸಲಾಗಿದ್ದು, ೭೨೧ ಜನರನ್ನು ಬಂಧಿಸಲಾಗಿದೆ.₹೯.೯೮ ಲಕ್ಷ ಜಪ್ತಿ ಮಾಡಲಾಗಿದೆ. ಅಬಕಾರಿ ಕಾಯಿದೆಯಡಿ ೩೮೦ ಪ್ರಕರಣ ದಾಖಲಿಸಿದ್ದು, ೪೦೮ ಜನರನ್ನು ವಶಕ್ಕೆ ಪಡೆಯಲಾಗಿದೆ. ₹೫೨.೫೭ ಲಕ್ಷ ಮೌಲ್ಯದ ೧೫೦೭೯ ಲೀ. ಮದ್ಯ ಜಪ್ತಿ ಮಾಡಲಾಗಿದೆ. ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿದಂತೆ ೧೬೬ ಪ್ರಕರಣ ದಾಖಲಾಗಿದ್ದು, ೧೮೭ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.₹೭೦ ಲಕ್ಷ ಮೌಲ್ಯದ ಮರಳನ್ನು ವಶಕ್ಕೆ ಪಡೆಯಲಾಗಿದೆ. ಮಿತಿ ಮೀರಿದ ಬಡ್ಡಿ ವಿಧಿಸುವಿಕೆ ಕಾಯಿದೆಯಡಿ ೫ ಪ್ರಕರಣ ದಾಖಲಾಗಿದ್ದು, ೭ ಜನರನ್ನು ವಶಕ್ಕೆ ಪಡೆಯಲಾಗಿದೆ.