ಕೂಡ್ಲಿಗಿ: ಸಮೀಪದ ಗಂಡಬೊಮ್ಮನಹಳ್ಳಿ ಕೆರೆಯಲ್ಲಿ ಸ್ನಾನಕ್ಕೆ ಇಳಿದ ವೇಳೆ ಇಬ್ಬರು ಸಹೋದರಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಗುಡೇಕೋಟೆ ಗ್ರಾಮದ ಸರೋಜಾ (35), ಸುಜಾತಾ (28) ಕೆರೆಯಲ್ಲಿ ಮುಳುಗಿ ಮೃತಪಟ್ಟವರು.ಕೆರೆಯ ನೀರು ಕುಡಿದು ಗಂಭೀರವಾಗಿರುವ ಶ್ರಾವಣಿ (20), ಭೂಮಿಕಾ (20), ಅನಿತಾ (26), ಸಂಗೀತಾ(18) ಎಂಬವರನ್ನು ಬಳ್ಳಾರಿ ವಿಮ್ಸ್‌ಗೆ ದಾಖಲಿಸಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಇವರನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಜಾತ್ರೆಗೆ ಬಂದಿದ್ರು:ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ಗ್ರಾಮದೇವತೆ ಹಬ್ಬಕ್ಕೆಂದು ಬಂದ ಸಂಬಂಧಿಕರು ಮತ್ತು ಅದೇ ಗ್ರಾಮದ 15 ಜನರ ತಂಡವೊಂದು ಬಟ್ಟೆ ತೊಳೆಯಲು ಸಮೀಪದ ಗಂಡಬೊಮ್ಮನಹಳ್ಳಿ ಕೆರೆಗೆ ತೆರಳಿತ್ತು. ಮಧ್ಯಾಹ್ನ 3 ಗಂಟೆ ಸುಮಾರಿಗೆ ಕೆರೆಯಲ್ಲಿ ಸ್ನಾನಕ್ಕೆ ಇಳಿದಾಗ ಹಲವರು ನೀರುಪಾಲಾದರು. ಸರೋಜಾಳ ಸಹೋದರ ಸಾಮ್ರಾಟ್‌ಗೆ ತನ್ನ ಒಡಹುಟ್ಟಿದ ಸಹೋದರಿಯರನ್ನು ಉಳಿಸಲು ಸಾಧ್ಯವಾಗಲಿಲ್ಲ. ಆದರೆ ಅಕ್ಕನ ಇಬ್ಬರು ಮಕ್ಕಳು ಸೇರಿದಂತೆ ಇತರೆ ಸಂಬಂಧಿಕರು ನೀರಿನಲ್ಲಿ ಮುಳುಗುತ್ತಿದ್ದಾಗ ಸಾಹಸಗೈದು ರಕ್ಷಣೆ ಮಾಡಿದ್ದಾನೆ.
ಗುಡೇಕೋಟೆ ಗ್ರಾಮದೇವತೆ ಜಾತ್ರೆ ನಡೆಯುತ್ತಿರುವಾಗಲೇ ಈ ದುರ್ಘಟನೆ ನಡೆದಿದೆ. ಇಡೀ ಗುಡೇಕೋಟೆ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸುವಂತೆ ಮಾಡಿದೆ. ಸಂಬಂಧಿಕರ ರೋದನ ಮುಗಿಲು ಮುಟ್ಟಿದ್ದು, ಹಬ್ಬದ ಸಂಭ್ರಮದ ವಾತಾವರಣಕ್ಕೆ ತಣ್ಣೀರೆರಚಿದಂತಾಗಿದೆ.