ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ತಾಲೂಕಿನಲ್ಲಿ ಟೆಂಪಲ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಕಳೆದೆರಡು ದಿನಗಳಿಂದ ದೇವಸ್ಥಾನಗಳಿಗೆ ಕಳ್ಳರು ನುಗ್ಗಿ ಕಳವು ನಡೆಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಮವಾರ ಮುಂಜಾನೆ ಸುಜೀರು ಶ್ರೀದೇವಕಿಕೃಷ್ಣ ರವಳನಾಥ ಮಂದಿರದಲ್ಲಿ ಕಳವು ನಡೆಸಿದ ಕಳ್ಳರು, ಸೋಮವಾರ ರಾತ್ರಿ ತುಂಬೆ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಕಳವು ನಡೆಸಿದ್ದು, ಈ ಘಟನೆ ಪೊಲೀಸರ ನಿದ್ದೆಗೆಡಿಸಿದೆ.ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಸಮೀಪದ ಸುಜೀರು ಎಂಬಲ್ಲಿರುವ ಶ್ರೀ ದೇವಕಿಕೃಷ್ಣ ರವಳನಾಥ ಮಂದಿರದಲ್ಲಿ ಸೋಮವಾರ ಮುಂಜಾನೆ ಸುಮಾರು 4 ಗಂಟೆಗೆ 2.30 ಲಕ್ಷ ರು. ಮೌಲ್ಯದ ನಗನಗದುಗಳನ್ನು ಕಳ್ಳರು ಎಗರಿಸಿದ್ದಾರೆ.
ದೇವಳಕ್ಕೆ ಸಂಬಂಧಿಸಿದಂತೆ ಅನಾಧಿಕಾಲದ ನೂರಾರು ವರ್ಷಗಳ ಹಳೆಯದಾದ ಹಿರಿಯರು ಮಾಡಿಸಿದಂತ ಸುಮಾರು ಒಂದುವರೆ ಕೆ.ಜಿ.ತೂಕದ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ದೇವರ ಮೂಗುತಿ ದೇವರ ಕೊಡೆ ಸೇರಿದಂತೆ ಒಟ್ಟು 2 ಕೆ.ಜಿ.ಯಷ್ಟು ಬೆಳ್ಳಿ ಹಾಗೂ 3 ಪವನ್ ಚಿನ್ನ ಕಳವಾಗಿದೆ. ಇದರ ಜೊತೆಗೆ ಕಾಣಿಕೆ ಹುಂಡಿಯಲ್ಲಿರುವ ನಗದು ದೋಚಿದ್ದಾರೆ.ಸಿ.ಸಿ.ಕ್ಯಾಮರಾದಲ್ಲಿ ಸೆರೆ
ಸುಮಾರು 5 ಜನರ ತಂಡ ಈ ಕಳ್ಳತನದಲ್ಲಿ ಭಾಗಿಯಾಗಿರುವುದನ್ನು ಸಿ.ಸಿ.ಕ್ಯಾಮರಾ ದ ವಿಡಿಯೋ ಸಾಕ್ಷಿ ಹೇಳುತ್ತದೆ. ವಾಹನದ ಮೂಲಕ ಬಂದ ಕಳ್ಳರ ತಂಡ ಸುಮಾರು 3.30 ರ ಸಮಯದಲ್ಲಿ ದೇವಸ್ಥಾನದ ಹಿಂಬದಿಯ ಬಾಗಿಲಿನ ಚಿಲಕ ಮುರಿದು ಒಳಪ್ರವೇಶ ಮಾಡಿದೆ. ಗರ್ಭಗುಡಿಯ ಬೆಳ್ಳಿಯ ದೇವರ ಪೀಠ ಹಾಗೂ ಬಂಗಾರದ ವಸ್ತುಗಳನ್ನು ಗೋಣಿಯಲ್ಲಿ ತುಂಬಿಸಿಕೊಂಡು ದೇವಳದ ಗೋಪುರಕ್ಕೆ ಬರುತ್ತಾರೆ. ಗೋಪುರದಲ್ಲಿ ಕಳ್ಳತನ ಮಾಡಿದ ಎಲ್ಲಾ ಬೆಳೆಬಾಳುವ ವಸ್ತುಗಳನ್ನು ಒಂದೇ ಚೀಲದಲ್ಲಿ ಭದ್ರಗೊಳಿಸಿ ವಾಪಸು ಹೋಗುವ ದೃಶ್ಯ ಕಂಡು ಬಂದಿದೆ.ಸುಳಿವು ನೀಡಿದ ನಾಯಿ:
ದೇವಸ್ಥಾನದ ಕಂಪೌಂಡ್ ನ ಒಳಗಡೆಯೇ ಅರ್ಚಕರ ಮನೆಯಿದೆ. ಕಳ್ಳರು ದೇವಸ್ಥಾನದ ಒಳಗೆ ಪ್ರವೇಶ ಮಾಡುವುದನ್ನು ಇವರ ಸಾಕು ನಾಯಿ ಗಮನಿಸಿ ಜೋರಾಗಿ ಬೊಗಳಲು ಆರಂಭಿಸಿದೆ. ನಾಯಿಯ ಬೊಗಳಿದ್ದರಿಂದ ಅರ್ಚಕರಿಗೆ ಎಚ್ಚರವಾಗಿದೆ.ನಾಯಿ ಯಾಕೆ ಬೊಗಳುತ್ತಿದೆ ಎಂದು ಸಿ.ಸಿ.ಕ್ಯಾಮರಾವನ್ನು ನೋಡಿದಾಗ ದೇವಸ್ಥಾನದ ಒಳಗೆ ಮೂವರು ಕಂಡುಬಂದಿದ್ದಾರೆ. ಕೂಡಲೇ ಅರ್ಚಕರು ದೇವಸ್ಥಾನದ ಮ್ಯಾನೇಜರ್ ಅವರಿಗೆ ವಿಚಾರ ತಿಳಿಸಿದ್ದಾರೆ. ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮೂವರು ದೇವಸ್ಥಾನದ ಒಳಗೆ ಇದ್ದು, ತನಗೆ ಒಬ್ಬನಿಗೆ ಹೋಗಲು ಹೆದರಿಕೆ ಆಗುತ್ತಿದ್ದು ಅವರನ್ನು ಬರುವಂತೆ ತಿಳಿಸಿದ್ದಾರೆ. ಕೂಡಲೇ ಅವರು ಇಲ್ಲಿಗೆ ಬಂದರಾದರೂ ಅದಾಗಲೇ ಕಳ್ಳರು ಕಾಲ್ಕಿತ್ತಿದ್ದಾರೆ.
ರಾತ್ರಿ ತುಂಬೆ ದೇವಳಕ್ಕೆ...:ತಾಲೂಕಿನ ತುಂಬೆಯಲ್ಲಿರುವ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಮುಂಬಾಗಿಲಿನ ಚಿಲಕ ಮುರಿದು ಸೋಮವಾರ ರಾತ್ರಿ ಒಳಗೆ ಪ್ರವೇಶ ಮಾಡಿದ ಕಳ್ಳರು ಸುಮಾರು ರು. 2 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ಹೇಳಲಾಗಿದೆ.
ಕಚೇರಿಯಲ್ಲಿರಿಸಿದ್ದ ಸುಮಾರು ಒಂದುವರೆ ಕೆ.ಜಿ ತೂಕದ ಮಹಾಲಿಂಗೇಶ್ವರ ದೇವರ ಬೆಳ್ಳಿಯ ಜಲದ್ರೋಣವನ್ನು ಕಳ್ಳತನ ಮಾಡಲಾಗಿದೆ. ಸುಮಾರು 50 ಸಾವಿರ ರು.ಯಷ್ಟು ನಗದು ಕಳವಾಗಿದೆ.ಇಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರೂ. ಕಳ್ಳರ ತಂಡ ಕಳ್ಳರ ತಂಡ ಕ್ಯಾಮರಾ ಡಿ.ವಿಆರ್ ನ್ನು ಕೂಡ ಬಿಡದೆ ಎಗರಿಸಿದೆ.
ಮಂಗಳವಾರ ಬೆಳಗ್ಗೆ ದೇವಸ್ಥಾನದ ಸಿಬ್ಬಂದಿ ಬಂದಾಗ ಕಳವಿನ ಅರಿವಾಗಿದ್ದು ಅವರು ದೇವಸ್ಥಾನದ ಸೇವಾ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ ತುಂಬೆಗೆ ತಿಳಿಸಿದ್ದಾರೆ.ಬಂಟ್ವಾಳ ಪೊಲೀಸರು ಎರಡೂ ಪ್ರಕರಣಗಳ ತನಿಖೆ ನಡೆಸುತ್ತಿದ್ದಾರೆ.