ಇಬ್ಬರು ಕಳ್ಳರ ಸೆರೆ: ೨೯ ಬೈಕ್‌ಗಳು ವಶಕ್ಕೆ

| Published : May 19 2024, 01:47 AM IST

ಸಾರಾಂಶ

ಇಳಕಲ್ಲ ಪೊಲೀಸರು ರಾತ್ರಿ ಗಸ್ತು ತಿರುಗುತ್ತಿದ್ದಾಗ ಅನುಮಾನದ ಮೇಲೆ ಇಬ್ಬರನ್ನು ವಿಚಾರಣೆ ನಡೆಸಿದಾಗ ಬೈಕ್‌ ಕಳ್ಳತನ ಪ್ರಕರಣ ಬಯಲಿಗೆ ಬಂದಿದ್ದು, ಅವರಿಂದ 29 ಬೈಕ್‌ಗಳು ಹಾಗೂ ಗೂಡ್ಸ್‌ ವಾಹನ ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಇಳಕಲ್ಲ

ಪೊಲೀಸರು ರಾತ್ರಿ ಗಸ್ತು ತಿರುಗುತ್ತಿದ್ದಾಗ ಇಬ್ಬರು ವ್ಯಕ್ತಿಗಳ ಚಲನವಲನದ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಬೈಕ್‌ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ. ಕೂಡಲೇ ಇಬ್ಬರನ್ನೂ ಬಂಧಿಸಿದ ಪೊಲೀಸರು ಅವರಿಂದ 29 ಬೈಕ್‌ಗಳು ಹಾಗೂ ಗೂಡ್ಸ್‌ ವಾಹನವೊಂದನ್ನು ವಶಪಡಿಸಿಕೊಂಡಿದ್ದಾರೆ.

ಬೀಳಗಿ ಮತ್ತು ಕೊಪ್ಪಳ ಮೂಲದವರು ಎಂದು ತಿಳಿದು ಬಂದಿದೆ. ಆರೋಪಿಗಳು ಕೊಪ್ಪಳ, ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಕದ್ದ ಬೈಕ್‌ಗಳನ್ನು ಸಾಗಿಸುತ್ತಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ. ಈಚೆಗೆ ಇಳಕಲ್ಲ ನಗರದ ಬಸವೇಶ್ವರ ವೃತ್ತದಲ್ಲಿ ಬೈಕ್‌ ಕಳ್ಳತನವಾದ ಕುರಿತು ಮುಧೋಳ ತಾಲೂಕಿನ ಶಿವಲಿಂಗಯ್ಯ ಸಂಕದ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಎರಡು ದಿನಗಳಿಂದ ನಗರದಲ್ಲಿ ರಾತ್ರಿ ವೇಳೆ ಗಸ್ತು ಬಿಗಿಗೊಳಿಸಿದ್ದರು.

ಈ ವೇಳೆ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಇವರ ಜೊತೆಗೆ ಇನ್ನೂ ಕೆಲವು ಆರೋಪಿಗಳು ಬೈಕ್‌ ಕಳ್ಳತನ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಹುನಗುಂದ ಉಪವಿಭಾಗದ ವೃತ್ತ ನಿರೀಕ್ಷಕ ಸುನೀಲ ಸವದಿ ಮಾರ್ಗದರ್ಶನದಲ್ಲಿ ಇಳಕಲ್ಲ ನಗರ ಠಾಣೆಯ ಪಿಎಸ್‌ಐ ಸೋಮೇಶ ಗಜ್ಜಿ, ಗ್ರಾಮೀಣ ಠಾಣೆ ಎಸ್ಸೈ ಎಂ.ಎ. ಸತ್ತಿಗೌಡರ, ಅಪರಾಧ ವಿಭಾಗದ ಎಸೈ ಶಕುಂತಲಾ ಸಡುವಿನಕೇರಿ ನೇತೃತ್ವದಲ್ಲಿ ಸಿಬ್ಬಂದಿ ಎ.ಎಚ್. ಸುತಗುಂಡಾರ, ಆನಂದ ಗೋಲಪ್ಪನವರ, ರಜಾಕ್‌ ಗುಡದಾರಿ, ಚನ್ನಪ್ಪ ಬಳಿಗೇರ, ಬಿ.ವಿ. ಕಟಗಿ, ರವಿಕುಮಾರ ಕಂಕಣಮೇಲಿ, ಅಮರೇಶ ಗ್ಯಾರಡ್ಡಿ, ಮಹಾಂತೇಶ ಬೋಳರೆಡ್ಡಿ, ಮಂಜು ಹುನಗುಂದ, ನಭಿ ಕಾಲೆವಾನ್, ಚಂದು ಚಟ್ಟಪ್ಪಗೋಳ, ಬಸು ಜಗಲಿ, ಮುತ್ತು ಬಿಸನಾಳ ಹಾಗೂ ಬುಡ್ಡಾ ವಾಲೀಕಾರ, ಮಂಜು ಬಡಿಗೇರ ತಂಡದಲ್ಲಿ ಇದ್ದರು.