ಆಭರಣ, ನಗದು: ಇಬ್ಬರು ಕಳ್ಳರ ಹಿಡಿದ ಗ್ರಾಮಸ್ಥರು

| Published : Apr 06 2024, 12:46 AM IST

ಸಾರಾಂಶ

ಹಾಡಹಗಲೇ ಚಿನ್ನ-ಬೆಳ್ಳಿ ಆಭರಣ, ನಗದು ಕಳವು ಮಾಡಿದ್ದ ಇಬ್ಬರನ್ನು ಗ್ರಾಮಸ್ಥರೇ ಹಿಡಿದು, ಧರ್ಮದೇಟು ನೀಡಿ, ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ದಾವಣಗೆರೆ ತಾಲೂಕಿನ ಮಾಳಗೊಂಡನಹಳ್ಳಿ ಜನತಾ ಕಾಲನಿಯಲ್ಲಿ ನಡೆದಿದೆ.

ದಾವಣಗೆರೆ: ಹಾಡಹಗಲೇ ಚಿನ್ನ-ಬೆಳ್ಳಿ ಆಭರಣ, ನಗದು ಕಳವು ಮಾಡಿದ್ದ ಇಬ್ಬರನ್ನು ಗ್ರಾಮಸ್ಥರೇ ಹಿಡಿದು, ಧರ್ಮದೇಟು ನೀಡಿ, ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ತಾಲೂಕಿನ ಮಾಳಗೊಂಡನಹಳ್ಳಿ ಜನತಾ ಕಾಲನಿಯಲ್ಲಿ ನಡೆದಿದೆ.

ದಾವಣಗೆರೆ ಎಸ್‌ಪಿಎಸ್ ನಗರ 1ನೇ ಕ್ರಾಸ್‌, 1ನೇ ಮೇನ್‌ ವಾಸಿ, ಎಗ್ ರೈಸ್ ಗಾಡಿ ಕೆಲಸದ ಪ್ರಕಾಶ (41), ಬೂದಾಳ್ ರಸ್ತೆಯ ಆಟೋ ರಿಕ್ಷಾ ಚಾಲಕ ರಶೀದ್ ಸಾಬ್‌ (57) ಬಂಧಿತ ಆರೋಪಿಗಳು. ಕದ್ದ ವಸ್ತುಗಳು, ನಗದು ಹಾಗೂ ಆಟೋ ರಿಕ್ಷಾ ಜಪ್ತಿ ಮಾಡಲಾಗಿದೆ.

ಮಾಳಗೊಂಡನಹಳ್ಳಿ ಗ್ರಾಮದ ವಾಗೀಶ ಎಂಬವರ ಮನೆಯಲ್ಲಿ ತೊಟ್ಟಿಲು ಕಾರ್ಯಕ್ರಮಕ್ಕೆಂದು ಗುರುವಾರ ಮನೆಯವರು ಹೊರಹೋಗಿದ್ದರು. ಮಧ್ಯಾಹ್ನ ವಾಗೀಶ್‌ರ ಮಗ ನೀರಿನ ಲೋಟ ಕೊಂಡೊಯ್ಯಲೆಂದು ಮನೆಗೆ ಬಂದಿದ್ದಾರೆ. ಮನೆ ಬಾಗಿಲು ತೆರೆದಿದ್ದರಿಂದ ಯಾರೋ ವ್ಯಕ್ತಿ ಮನೆ ಒಳಗಿನಿಂದ ಓಡಿ ಹೋಗಿದ್ದನ್ನು ಗಮನಿಸಿದ್ದಾರೆ. ಈ ವೇಳೆ ಜೋರಾಗಿ ಕೂಗಿಕೊಂಡಿದ್ದಾರೆ.

ತಕ್ಷಣ‍ವೇ ಗ್ರಾಮಸ್ಥರು ನೆರವಿಗೆ ಧಾವಿಸಿ, ಬೆನ್ನುಹತ್ತಿ ಕಳ್ಳನನ್ನು ಹಿಡಿದಿದ್ದಾರೆ. ಆಗ ವಾಗೀಶ್‌ರ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣ, ವಸ್ತುಗಳನ್ನು ಕದ್ದಿದ್ದಾಗಿ ಆರೋಪಿ ಬಾಯಿಬಿಟ್ಟಿದ್ದಾನೆ. ಸ್ವಲ್ಪ ದೂರದಲ್ಲೇ ಆಟೋ ನಿಲ್ಲಿಸಿಕೊಂಡಿದ್ದ ಮತ್ತೊಬ್ಬ ವ್ಯಕ್ತಿಯನ್ನು ಹಿಡಿದ ಗ್ರಾಮಸ್ಥರು ವಿಚಾರಣೆ ನಡೆಸಿದ್ದಾರೆ. ಆಗ ಅವನೂ ಸಹ ಕಳವು ಮಾಡಲು ಬಂದ ವಿಚಾರ ಬಾಯಿಬಿಟ್ಟಿದ್ದಾನೆ.

ತಕ್ಷಣವೇ ಗ್ರಾಮಸ್ಥರು ಪೊಲೀಸರಿಗೆ ವಿಷಯ ಮುಟ್ಟಿಸಿ, ಇಬ್ಬರನ್ನೂ ಪೊಲೀಸರ ವಶಕ್ಕೆ ಒಪ್ಪಿಸಿದರು. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.