ಕಾಯಕ ಬಂಧುಗಳು ಕೂಲಿಕಾರರಿಗೆ ನೆರಳಿನ, ಕುಡಿಯುವ ನೀರಿನ, ವ್ಯವಸ್ಥೆಯನ್ನು ಮಾಡಬೇಕು. ಅವರ ಹಾಜರಾತಿ ಕಡ್ಡಾಯವಾಗಿ ನಿರ್ವಹಿಸಬೇಕು.

ಲಕ್ಷ್ಮೇಶ್ವರ: ನರೇಗಾ ಯೋಜನೆ ಅಡಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದು, ಕೂಲಿಕಾರರು ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ನೀಡಬೇಕೆಂದು ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ ಸಲಹೆ ನೀಡಿದರು.

ತಾಲೂಕಿನ ಸೂರಣಗಿ ಗ್ರಾಮ ಪಂಚಾಯಿತಿಯಲ್ಲಿ ಮೊದಲನೇ ದಿನದ ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಕೂಲಿಕಾರರ ಕೆಲಸವನ್ನು ಪರಿಶೀಲಿಸಿ ಅಳತೆಗೆ ತಕ್ಕ ಕೆಲಸವನ್ನು ನೀಡಿ, ಕೂಲಿ ಕಾರ್ಮಿಕರು ಎರಡು ಬಾರಿ ಹಾಜರಾತಿ ಹಾಕಿಸದಿದ್ದರೆ ಕೂಲಿ ಪಾವತಿ ಆಗುವುದಿಲ್ಲ. ಎಲ್ಲರೂ ಸರಿಯಾಗಿ ಕೆಲಸವನ್ನು ನಿರ್ವಹಿಸಿ ₹370 ಕೂಲಿ ಪಡೆದುಕೊಳ್ಳಬಹುದು ಎಂದರು.

ತಾಲೂಕು ಪಂಚಾಯಿತಿಯ ಗ್ರಾಮೀಣ ಉದ್ಯೋಗ ಖಾತ್ರಿಯ ಸಹಾಯಕ ನಿರ್ದೇಶಕರಾದ ಧರ್ಮರ ಕೃಷ್ಣಪ್ಪ ಮಾತನಾಡಿ, ಕೂಲಿಕಾರರು ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಬೆಳಗ್ಗೆ ಬೇಗ ಬಂದು ಅಳತೆಗೆ ತಕ್ಕ ಕೆಲಸ ನೀಡಿ ಬೇಗ ಮುಗಿಸಿಕೊಂಡು ಹಾಜರಾತಿ ನೀಡಿ ಮನೆಗೆ ಹೋಗಬೇಕು. ಎರಡು ಬಾರಿ ಹಾಜರಾತಿ ನೀಡಿದವರಿಗೆ ₹370 ಕೂಲಿ ತಮ್ಮ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತದೆ ಎಂದರು.

ಸಾಮಾಜಿಕ ಭದ್ರತೆ ಯೋಜನೆ, ವಿಮಾ ಯೋಜನೆ, ನರೇಗಾ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಕಾಯಕ ಬಂಧುಗಳು ಕೂಲಿಕಾರರಿಗೆ ನೆರಳಿನ, ಕುಡಿಯುವ ನೀರಿನ, ವ್ಯವಸ್ಥೆಯನ್ನು ಮಾಡಬೇಕು. ಅವರ ಹಾಜರಾತಿ ಕಡ್ಡಾಯವಾಗಿ ನಿರ್ವಹಿಸಬೇಕು ಎಂದರು.

2026- 27ನೇ ಸಾಲಿನ ಕ್ರಿಯಾಯೋಜನೆ ಅನುಮೋದನೆಯ ನಂತರ ಹಾಗೂ ಮುಂಗಾರು ಮಳೆ ಬಿದ್ದು ಕೃಷಿ ಚಟುವಟಿಕೆ ಪ್ರಾರಂಭವಾಗುವವರೆಗೂ ಕೆಲಸ ನೀಡಲಾಗುವುದು ಎಂದರು.

ಈ ವೇಳೆ ಸೂರಣಗಿ ಪಿಡಿಒ ಜಿ.ಎಂ. ರೋಣದ, ಟಿಐಇಸಿ ಮಂಜುನಾಥ್ ಸ್ವಾಮಿ ಎಚ್.ಎಂ., ಟಿಎಂಐಎಸ್ ಚಂದ್ರಶೇಖರ್ ಹಳ್ಳಿ, ತಾಂತ್ರಿಕ ಸಹಾಯಕ ಫಕೀರೇಶ ನಿಟ್ಟಾಲಿ, ಬಿಎಫ್ಟಿ ಕಾಸಿಂಸಾಬ್ ನದಾಫ್, ಡಿಇಒ ಗುಡ್ಡದಪ್ಪ ಕಮತ, ಕಾಯಕ ಬಂಧುಗಳು, 450 ನರೇಗಾ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.