ಉಚ್ಚಿಲ ದಸರಾ: ಭರ್ಜರಿ ರೈಸಿದ ‘ಪೊಣ್ಣು ಪಿಲಿ’ ನಲಿಕೆ!
KannadaprabhaNewsNetwork | Published : Oct 23 2023, 12:16 AM IST
ಉಚ್ಚಿಲ ದಸರಾ: ಭರ್ಜರಿ ರೈಸಿದ ‘ಪೊಣ್ಣು ಪಿಲಿ’ ನಲಿಕೆ!
ಸಾರಾಂಶ
ಅವಿಭಜಿತ ದ.ಕ. ಜಿಲ್ಲೆಯಿಂದ ಸುಮಾರು 30ಕ್ಕೂ ಹೆಚ್ಚು ಮಹಿಳಾ ತಂಡಗಳು, ವೈಯಕ್ತಿಕ ಸ್ಪರ್ಧಿಗಳು ಭಾಗವಹಿಸಿದ್ದು, ಹೆಣ್ಣುಮಕ್ಕಳು ತಾಸೆಯ ಪೆಟ್ಟಿಗೆ ವೇದಿಕೆಯ ಹುಡಿಯಾಗುವಂತೆ ಕುಣಿದು ಕುಪ್ಪಳಿಸಿದರು.
ಕನ್ನಡಪ್ರಭ ವಾರ್ತೆ ಉಚ್ಚಿಲ ಇಲ್ಲಿನ ಮಹಾಲಕ್ಷ್ಮೀ ದೇವಾಲಯದಲ್ಲಿ ನಡೆಯುತ್ತಿರುವ ನವರಾತ್ರಿ-ಉಚ್ಚಿಲ ದಸರಾ 23ರಂಗವಾಗಿ ಶನಿವಾರ ಹೆಣ್ಣುಮಕ್ಕಳಿಗಾಗಿಯೇ ನಡೆದ ತುಳುನಾಡಿನ ಜನಪದ ಕಲೆ ಹುಲಿ ಕುಣಿತ - ಪೊಣ್ಣು ಪಿಲಿನಲಿಕೆ ಸ್ಪರ್ಧೆಯು ಭರ್ಜರಿಯಾಗಿ ಜನಮನಸೂರೆಗೊಂಡಿತು. ಅವಿಭಜಿತ ದ.ಕ. ಜಿಲ್ಲೆಯಿಂದ ಸುಮಾರು 30ಕ್ಕೂ ಹೆಚ್ಚು ಮಹಿಳಾ ತಂಡಗಳು, ವೈಯಕ್ತಿಕ ಸ್ಪರ್ಧಿಗಳು ಭಾಗವಹಿಸಿದ್ದು, ಹೆಣ್ಣುಮಕ್ಕಳು ತಾಸೆಯ ಪೆಟ್ಟಿಗೆ ವೇದಿಕೆಯ ಹುಡಿಯಾಗುವಂತೆ ಕುಣಿದು ಕುಪ್ಪಳಿಸಿದರು. ಈ ಸ್ಪರ್ಧೆಯನ್ನು ದೇವಳದ ಮುಂದಾಳು ನಾಡೋಜ ಜಿ.ಶಂಕರ್ ಅವರು ಸ್ಪರ್ಧೆಗೆ ಚಾಲನೆ ನೀಡಿದರು. ಸ್ಪರ್ಧೆಯನ್ನು ಪ್ರಾಯೋಜಿಸಿದ್ದ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ತುಳುವಸಿರಿ ಅದ್ವಿಕಾ ಶೆಟ್ಟಿ, ಡಾ. ಸುಲತಾ ಭಂಡಾರಿ, ಡಾ.ಎಂ.ಡಿ.ವೆಂಕಟೇಶ್, ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ದೇವಳದ ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಸಹಿತ ಗಣ್ಯರು ಉಪಸ್ಥಿತರಿದ್ದರು. ಸ್ಪರ್ಧೆಯ ಗುಂಪು ವಿಭಾಗದಲ್ಲಿ ಪ್ರಥಮ: ಡಿಡಿ ಗ್ರೂಪ್ ನಿಟ್ಟೂರು, ದ್ವಿತೀಯ: ಪಿಲಿಪಜ್ಜೆ ಟೀಮ್ ಕೊರಂಗ್ರಪಾಡಿ ಮತ್ತು ತೃತೀಯ: ಟೈಗರ್ ಫ್ರೆಂಡ್ಸ್ ಕೊರಂಗ್ರಪಾಡಿ ಬಹುಮಾನಗಳನ್ನು ಗೆದ್ದುಕೊಂಡವು. ವೈಯಕ್ತಿಕ ವಿಭಾಗದಲ್ಲಿ ಪ್ರಥಮ: ಅಂತರಾ ಕೋಟ್ಯಾನ್, ದ್ವಿತೀಯ: ರಮ್ಯಾ, ತೃತೀಯ: ಅಂಕಿತಾ ಬಹುಮಾನಗಳನ್ನು ಪಡುದುಕೊಂಡರು. ಜಿ.ಶಂಕರ್, ಯಶ್ಪಾಲ್ ಸುವರ್ಣ ಕುಣಿತ ಎಂತಹವರನ್ನು ಕಾಲು ಕುಣಿಸುವಂತೆ ಮಾಡುವ ತಾಸೆ ಪೆಟ್ಟಿಗೆ, ಸ್ಪರ್ಧೆಯ ನಡುವೆ ನಾಡೋಜ ಜಿ.ಶಂಕರ್ ಮತ್ತು ಶಾಸಕ ಯಶ್ಪಾಲ್ ಸುವರ್ಣ ಅವರೂ ವೇದಿಕೆ ಹತ್ತಿ ಕೆಲಕಾಲ ಕುಣಿದದ್ದು ಗಮನಾರ್ಹವಾಗಿತ್ತು. ಜೊತೆಗೆ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ಮಂಗಳೂರಿನ 72ರ ಹರೆಯದ ಸವಿತಾ ಅವರು ಸ್ಪರ್ಧಿಸಿದ್ದು ವಿಶೇಷವಾಗಿತ್ತು.