ಉಡಾನ್‌ ಅಂತ್ಯೋದಯ ಕೇಂದ್ರ ಬಾಗಿಲು ಮುಚ್ಚಿ 4 ವರ್ಷ!

| Published : Mar 14 2024, 02:05 AM IST

ಉಡಾನ್‌ ಅಂತ್ಯೋದಯ ಕೇಂದ್ರ ಬಾಗಿಲು ಮುಚ್ಚಿ 4 ವರ್ಷ!
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಗೆ ಅರಿಯದೇ ಬರುತ್ತಿದ್ದ ಭಿಕ್ಷುಕರು, ಅಶಕ್ತರು, ಶೋಷಿತರ ಆಶಾಕಿರಣವಾಗಿದ್ದ ಇಲ್ಲಿನ ರೈಲ್ವೆ ನಿಲ್ದಾಣದ "ಉಡಾನ್‌ ಅಂತ್ಯೋದಯ ಕ್ಷೇಮ ಕೇಂದ್ರ " ಇದೀಗ ಬಾಗಿಲು ಮುಚ್ಚಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಹುಬ್ಬಳ್ಳಿಗೆ ಅರಿಯದೇ ಬರುತ್ತಿದ್ದ ಭಿಕ್ಷುಕರು, ಅಶಕ್ತರು, ಶೋಷಿತರ ಆಶಾಕಿರಣವಾಗಿದ್ದ ಇಲ್ಲಿನ ರೈಲ್ವೆ ನಿಲ್ದಾಣದ "ಉಡಾನ್‌ ಅಂತ್ಯೋದಯ ಕ್ಷೇಮ ಕೇಂದ್ರ " ಇದೀಗ ಬಾಗಿಲು ಮುಚ್ಚಿದೆ.

ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಲಯದ ಕೇಂದ್ರ ಕಚೇರಿಯಿರುವ ಊರು. ಜಂಕ್ಷನ್‌ ಇರುವ ಇಲ್ಲಿನ ನಿಲ್ದಾಣಕ್ಕೆ ಪ್ರತಿದಿನ 35-40 ಸಾವಿರಕ್ಕೂ ಅಧಿಕ ಜನ ಪ್ರಯಾಣಿಕರ ಆಗಮನ ಹಾಗೂ ನಿರ್ಗಮನ ಆಗುತ್ತದೆ. ರಾಜಸ್ತಾನ, ಗುಜರಾತ್‌, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಿಂದ ಇಲ್ಲಿಗೆ ನೇರ ರೈಲು ಸಂಪರ್ಕ ಇದೆ. ಹೀಗಾಗಿ ಸಹಜವಾಗಿ ರೈಲಿನ ಮೂಲಕ ಅಶಕ್ತರು, ಮಾನಸಿಕ ಅಸ್ವಸ್ಥರು, ಭಿಕ್ಷುಕರು, ಶೋಷಿತರು, ಮನೆಯಲ್ಲಿ ಜಗಳ ಮಾಡಿಕೊಂಡು ಸಿಟ್ಟಿಗೆದ್ದು ಬರುವವರ ಸಂಖ್ಯೆಯೇನೋ ಕಮ್ಮಿಯಿಲ್ಲ. ಹೀಗೆ ಬಂದವರಲ್ಲಿ ಮರಳಿ ತಮ್ಮೂರಿಗೆ ಹೋಗುವುದು ಹೇಗೆ? ಎಂಬುದು ತಿಳಿಯದೇ ಇಲ್ಲೇ ಅನಾಥರಾಗಿಯೇ ಭಿಕ್ಷೆ ಬೇಡುತ್ತಾ ಕಾಲ ಕಳೆಯುತ್ತಾರೆ. ಕೊನೆಗೊಂದು ದಿನ ಇಹಲೋಕ ತ್ಯಜಿಸುವವರ ಸಂಖ್ಯೆಗೂ ಕೊರತೆಯಿಲ್ಲ. ಈಗಲೂ ರೈಲ್ವೆ ನಿಲ್ದಾಣದಲ್ಲಿ ಅಕ್ಕಪಕ್ಕದಲ್ಲಿ ಭಿಕ್ಷುಕರಂತೆ ಕುಳಿತವರನ್ನು ಮಾತನಾಡಿಸಿದರೆ ಅರಿವಾಗುತ್ತದೆ. ಕೆಲವೊಬ್ಬರಿಗೆ ತಾವೂ ಎಲ್ಲಿಂದ ಬಂದಿದ್ದೇವೆ ಎಂಬುದು ಗೊತ್ತಿರುವುದಿಲ್ಲ. ಮಾತನಾಡಬೇಕೆಂದರೆ ಎಷ್ಟೋ ಜನರಿಗೆ ಕನ್ನಡ ಕೂಡ ಬರುತ್ತಿರುವುದಿಲ್ಲ. ಯಾರಾದರೂ ಏನಾದರೂ ಕೊಟ್ಟರೆ ತಿಂತಾರೆ,. ಇಲ್ಲದಿದ್ದರೆ ಹಾಗೆ ಉಪವಾಸವೇ ಅಲ್ಲೇ ಎಲ್ಲೋ ಮಲಗುತ್ತಾರೆ.

ಇಂಥ ಅಶಕ್ತರಿಗಾಗಿ ಕೇಂದ್ರ:

2018ರಿಂದ 2020ರ ವರೆಗೆ ಅಂದರೆ ಕೊರೋನಾ ಬರುವ ಮೊದಲು ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ "ಉಡಾನ್‌ ಅಂತ್ಯೋದಯ ಕ್ಷೇಮ ಕೇಂದ್ರ " ತೆರೆದಿತ್ತು. ಈ ಕೇಂದ್ರವನ್ನು ರೈಲ್ವೆ ಇಲಾಖೆಯ ಸಿಬ್ಬಂದಿಯೇ ನಿರ್ವಹಿಸುತ್ತಿತ್ತು. ಆಗ ಮಹಾಪ್ರಬಂಧಕರಾಗಿದ್ದ ಎ.ಕೆ. ಸಿಂಗ್‌ ಇದಕ್ಕೆ ₹ 1 ಲಕ್ಷ ದೇಣಿಗೆ ನೀಡಿದ್ದರು. ಉಳಿದ ಸಿಬ್ಬಂದಿ, ಅಧಿಕಾರಿ ವರ್ಗ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಈ ಕೇಂದ್ರವನ್ನು ನಿರ್ವಹಿಸುತ್ತಿದ್ದರು.

ಆಗಿನಿಂದ ಆರ್‌ಪಿಎಫ್‌ ಸಿಬ್ಬಂದಿ ಸೇರಿದಂತೆ ಭದ್ರತಾ ಸಿಬ್ಬಂದಿಗಳೆಲ್ಲ ಪ್ರತಿದಿನ ಬೆಳಗ್ಗೆ 5 ಗಂಟೆಗೆಲ್ಲ ರೈಲ್ವೆ ನಿಲ್ದಾಣ, ಆ ಸಮಯದಲ್ಲಿ ಬರುತ್ತಿದ್ದ ರೈಲುಗಳಲ್ಲಿ ಯಾರಾದರೂ ಸಂಸಾರದೊಂದಿಗೆ ಪರಿತ್ಯಕ್ತರಾದವರು, ಭಿಕ್ಷುಕರಂತೆ ಕಾಣುವವರು, ಅನಾಥ ವೃದ್ಧರೋ, ಮಕ್ಕಳೋ ಇದ್ದಾರೇನೋ ಎಂದು ಪತ್ತೆ ಹಚ್ಚುತ್ತಿದ್ದರು. ಅವರನ್ನು ಈ ಕೇಂದ್ರಕ್ಕೆ ಕರೆತಂದು ಸೋಪುಕೊಟ್ಟು ಸ್ನಾನ ಮಾಡುವಂತೆ ಸೂಚಿಸುತ್ತಿದ್ದರು. ಆತನಿಗೇನಾದರೂ ಸ್ನಾನ ಮಾಡಲು ಶಕ್ತಿ ಇಲ್ಲದಿದ್ದರೆ ಸಿಬ್ಬಂದಿಯೇ ಸ್ನಾನ ಮಾಡಿಸುತ್ತಿದ್ದರು. ಶೇವಿಂಗ್‌, ಕಟಿಂಗ್‌ ಮಾಡಿಸುತ್ತಿದ್ದರು. ಹೊಸ ಬಟ್ಟೆ ಕೊಡುತ್ತಿದ್ದರು. ಉಪಹಾರ ಕೊಟ್ಟು ಉಪಚರಿಸುತ್ತಿದ್ದರು. ಜತೆಗೆ ಚಿಕಿತ್ಸೆ ಅಗತ್ಯಬಿದ್ದರೆ ರೈಲ್ವೆ ಆಸ್ಪತ್ರೆಯಲ್ಲೇ ತೋರಿಸುತ್ತಿದ್ದರು. ಬಳಿಕ ಅವರು ಎಲ್ಲಿಯವರು, ಇಲ್ಲೇಕೆ ಬಂದಿದ್ದಾರೆ. ಮಕ್ಕಳು ಎಲ್ಲಿದ್ದಾರೆ ಎಂಬುದನ್ನೆಲ್ಲ ಪತ್ತೆ ಹಚ್ಚಿ ಅವರನ್ನು ಮರಳಿ ಗೂಡಿಗೆ ಸಾಗಿಸುವ ಕೆಲಸ ಮಾಡುತ್ತಿದ್ದರು.

ಪಶ್ಚಿಮ ಬಂಗಾಳದ ರಾಮಚಂದ್ರ ರವಿದಾಸ (60) ಎಂಬುವರನ್ನು ಬರೋಬ್ಬರಿ 1 ತಿಂಗಳಿಗೂ ಅಧಿಕ ಕಾಲ ಕೇಂದ್ರದಲ್ಲೇ ಉಳಿಸಿಕೊಂಡು ಉಪಚರಿಸಿ ಕೊನೆಗೆ ಅವನ ಊರಿಗೆ ಮುಟ್ಟಿಸಿದ್ದರು. ಆಗ ಬರೋಬ್ಬರಿ ಒಂದುವರೆ ವರ್ಷಕ್ಕೂ ಅಧಿಕ ಕಾಲ ಈ ಕೇಂದ್ರ ಕಾರ್ಯನಿರ್ವಹಿಸಿತ್ತು. 1200ಕ್ಕೂ ಅಧಿಕ ಅಶಕ್ತರನ್ನು ಅವರವರ ಮನೆಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದುಂಟು. ಬಡ ಮಕ್ಕಳಿಗಾಗಿ ಶಾಲೆ:

ಬರೀ ಇದಷ್ಟೇ ಅಲ್ಲ. ಉಡಾನ್‌ ಕೇಂದ್ರದಲ್ಲಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30ರ ವರೆಗೆ ಬಡ ಮಕ್ಕಳಿಗಾಗಿ ಉಚಿತ ಶಾಲೆಯೊಂದನ್ನು ತೆರೆಯಲಾಗಿತ್ತು. ರೈಲ್ವೆ ನಿಲ್ದಾಣದ ಸುತ್ತಮುತ್ತವಿರುವ ಕೊಳಚೆ ಪ್ರದೇಶದಲ್ಲಿನ ಮಕ್ಕಳನ್ನು ಕರೆದುತಂದು ಪಾಠ ಪ್ರವಚನ ಮಾಡಿಸಲಾಗುತ್ತಿತ್ತು. 25-30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದರು. ರೈಲ್ವೆ ಸ್ಕೂಲ್‌ನಿಂದ ಪ್ರತಿದಿನ ಒಬ್ಬ ಶಿಕ್ಷಕರು ಬಂದು ಇಲ್ಲಿ ಪಾಠ ಮಾಡುತ್ತಿದ್ದರು. ಇಲ್ಲಿಗೆ ಬರುತ್ತಿದ್ದ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ವ್ಯವಸ್ಥೆಯೂ ಇತ್ತು.

ಅತ್ತ ಕೊರೋನಾ ಬಂದ ಬಳಿಕ ಈ ಕೇಂದ್ರವೇ ಬಾಗಿಲು ಮುಚ್ಚಿತು. ಮತ್ತೆ ಕೊರೋನಾ ಹೋಗಿ ಸಹಜಸ್ಥಿತಿಗೆ ಬಂದರೂ ಕೇಂದ್ರ ಪುನಾರಂಭಗೊಂಡಿಲ್ಲ. ಹೀಗಾಗಿ ಮತ್ತೆ ರೈಲ್ವೆ ನಿಲ್ದಾಣದ ಸುತ್ತಮುತ್ತಲು ಅಶಕ್ತರು ಕಣ್ಣಿಗೆ ಕಾಣಿಸುವಂತಾಗಿದೆ.

ಇದೀಗ ನೈಋತ್ಯ ರೈಲ್ವೆ ವಲಯಕ್ಕೆ ಹೊಸ ಮಹಾಪ್ರಬಂಧಕರಾಗಿ ಅರವಿಂದ ಶ್ರೀವಾತ್ಸವ ಎಂಬುವವರು ಬಂದಿದ್ದಾರೆ. ಈ ಕೇಂದ್ರವನ್ನು ಪುನಾರಂಭಿಸಬೇಕೆಂಬುದು ಪ್ರಜ್ಞಾವಂತರ ಅಂಬೋಣ.