ಪತಿಯ ಆಸೆ ನೆರವೇರಿಸಲು ರಾಜಕೀಯಕ್ಕೆ ಬರುವೆ: ವಾಣಿ ಕೆ.ಶಿವರಾಂ

| Published : Mar 14 2024, 02:05 AM IST

ಪತಿಯ ಆಸೆ ನೆರವೇರಿಸಲು ರಾಜಕೀಯಕ್ಕೆ ಬರುವೆ: ವಾಣಿ ಕೆ.ಶಿವರಾಂ
Share this Article
  • FB
  • TW
  • Linkdin
  • Email

ಸಾರಾಂಶ

ನನ್ನ ಪತಿ ಕೆ. ಶಿವರಾಂ ಅವರು ಕಳೆದ ಹತ್ತು ವರ್ಷಗಳಿಂದ ಸಮಾಜ ಸೇವೆ ಹಾಗೂ ರಾಜಕಾರಣದಲ್ಲಿ ಜನ ಸೇವೆ ಮಾಡುವ ಹಂಬಲ ಹೊಂದಿದ್ದರು. ಹಾಗಾಗಿ ಅವರ ಆಸೆ, ಗುರಿಯನ್ನು ಈಡೇರಿಸಲು ಹಠ, ಛಲದಿಂದ ರಾಜಕೀಯಕ್ಕೆ ಬರುವುದಾಗಿ ವಾಣಿ ಕೆ. ಶಿವರಾಂ ಘೋಷಣೆ ಮಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನನ್ನ ಪತಿ ಕೆ. ಶಿವರಾಂ ಅವರು ಕಳೆದ ಹತ್ತು ವರ್ಷಗಳಿಂದ ಸಮಾಜ ಸೇವೆ ಹಾಗೂ ರಾಜಕಾರಣದಲ್ಲಿ ಜನ ಸೇವೆ ಮಾಡುವ ಹಂಬಲ ಹೊಂದಿದ್ದರು. ಆಗಾಗಿ ಅವರ ಆಸೆ, ಗುರಿಯನ್ನು ಈಡೇರಿಸಲು ಹಠ, ಛಲದಿಂದ ರಾಜಕೀಯಕ್ಕೆ ಬರುವುದಾಗಿ ವಾಣಿ ಕೆ. ಶಿವರಾಂ ಘೋಷಣೆ ಮಾಡಿದರು. ನಗರದ ಡಾ. ರಾಜ್‌ಕುಮಾರ್ ಕಲಾಮಂದಿರದಲ್ಲಿ ಛಲವಾದಿ ಮಹಾಸಭಾ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ಕೆ. ಶಿವರಾಂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

ಹತ್ತು ವರ್ಷಗಳಿಂದ ಅವರಿಗೆ ರಾಜಕಾರಣದಲ್ಲಿ ಬಹಳಷ್ಟು ನಿರಾಶೆಯಾಗಿತ್ತು. ಪ್ರತಿ ಬಾರಿಯು ಟಿಕೆಟ್ ಕೈ ತಪ್ಪಿತ್ತು. ಅವರು ಈ ಬಾರಿ ನಾನು ಗೆದ್ದು ಸಂಸದನಾಗುತ್ತೇನೆ ಎಂಬ ಕನಸು ಕಟ್ಟಿಕೊಂಡಿದ್ದರು. ಜನ ಸೇವೆ ಮಾಡುವ ಆಸೆಯನ್ನುಟ್ಟುಕೊಂಡಿದ್ದರು. ಟಿಕೆಟ್ ಕೈ ತಪ್ಪಿದಾಗಲು ಬೇಸರಗೊಳ್ಳದೇ ಪಕ್ಷದ ನಿಷ್ಠೆಯಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದರು. ಆದರೆ ಯಾವುದೇ ಪಕ್ಷಗಳು ಅವರನ್ನು ಗುರುತಿಸಿರುವುದು ವಿಷಾಧಕರ. ಯಾವುದೇ ಪಕ್ಷಕ್ಕೆ ಹೋದರು ಸಿದ್ಧಾಂತವನ್ನು ಬಿಟ್ಟು ಹೋದವರಲ್ಲ. ಅವರು ಬಹಳ ಕಷ್ಟುಪಟ್ಟು ಜನ ಸೇವೆ ಮಾಡಲು ಛಲವಾದಿ ಮಹಾಸಭಾ ಸಂಘಟನೆಯನ್ನು ಸ್ಥಾಪನೆ ಮಾಡಿದ್ದರು. ಇದನ್ನು ಮುಂದುವರಿಸಿಕೊಂಡು ಹೋಗುವ ಜೊತೆಗೆ ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ. ಎಲ್ಲರು ಸೇರಿ ಅವರನ್ನು ಜೀವಂತವಾಗಿಡುವ ಕೆಲಸವನ್ನು ಮಾಡೋಣ ಎಂದರು.

ನನಗೆ ರಾಜಕೀಯ ಶಕ್ತಿ ತುಂಬಿ:ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸುಮಾರು 1000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸುತ್ತಿದ್ದಾರೆ. ಬೆಂಗಳೂರಿನಿಂದ ಹೊರಟು ಊಟ, ತಿಂಡಿಯನ್ನು ಬಿಟ್ಟು ನಗರಕ್ಕೆ ಬರುತ್ತಿದ್ದರು. ರಾಜಕೀಯ ಅಧಿಕಾರ ಇದ್ದರೆ, ಮಾತ್ರ ಜನ ಸೇವೆ ಮಾಡಲು ಸಾಧ್ಯ ಎಂಬ ಸತ್ಯವನ್ನು ಎಲ್ಲರು ಅರಿತು ಕೊಳ್ಳಬೇಕು. ಶಿವರಾಂ ಅವರಿಗೆ ಬಹಳ ಅನ್ಯಾಯವಾಗಿದೆ. ಆ ಅನ್ಯಾಯವನ್ನು ಸರಿಪಡಿಸಲು ನಾನು ಮನೆಯಲ್ಲಿ ಕೂರದೇ, ನಿಮ್ಮೊಂದಿಗೆ ಇರುತ್ತೇನೆ. ನಮ್ಮ ಯಜಮಾನರ ಆಸೆ, ಗುರಿಯನ್ನು ನೆರವೇರಿಸಲು ರಾಜಕೀಯಕ್ಕೆ ಬರುತ್ತೇನೆ. ಹೀಗಾಗಿ ನನ್ನಗೊಂದು ಅವಕಾಶ ಕೊಡಿ. ನನಗೆ ರಾಜಕೀಯ ಶಕ್ತಿಯನ್ನು ತುಂಬುವ ಮೂಲಕ ಅವರನ್ನು ಜೀವಂತವಾಗಿ ಉಳಿಸಿಕೊಡಿ ಎಂದು ವಾಣಿ ಭಾವುಕರಾದರು.

ಕೆ. ಶಿವರಾಂ ಎರಡನೇ ಅಂಬೇಡ್ಕರ್:

ಚಿತ್ರದುರ್ಗದ ಛಲವಾದಿ ಮಠಾಧ್ಯಕ್ಷ ಛಲವಾದಿ ಬಸವನಾಗಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ಬಿ.ಆರ್. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾರ್ಗದಲ್ಲಿಯೇ ಕೆ. ಶಿವರಾಂ ಅವರು ಸಾಗಿ, ಉನ್ನತ ಅಧಿಕಾರಿಯಾಗಿ, ಎಲ್ಲಾ ವರ್ಗದ ಜನರ ಸೇವೆಯನ್ನು ಮಾಡಿದ್ದಾರೆ. ಅತ್ಯಂತ ಬಡತನದಲ್ಲಿ ಹುಟ್ಟಿದ ಕೆ. ಶಿವರಾಂ ಮೊಟ್ಟ ಮೊದಲು ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಸಾರ್ವಜನಿಕರ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಅಂಬೇಡ್ಕರ್‌ ಪ್ರೇರಣೆ ಮತ್ತು ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ನಡೆದ ಶಿವರಾಂ ಎರಡನೇ ಅಂಬೇಡ್ಕರ್ ಆಗಿದ್ದಾರೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ತಿ. ನರಸೀಪುರದ ಬುದ್ದ ವಿಹಾರದ ಬೋಧಿರತ್ನ ಬಂತೇಜಿ ಸಾನ್ನಿಧ್ಯ ವಹಿಸಿ ಆಶೀರ್ವಚನೆ ನೀಡಿದರು. ಪತ್ರಕರ್ತ ಕೆ. ದೀಪಕ್ ಮಾತನಾಡಿದರು. ಛಲವಾದಿ ಮಹಾಸಭಾದ ಅಧ್ಯಕ್ಷ ಅಣಗಳ್ಳಿ ಬಸವರಾಜು ಪ್ರಸ್ತಾವಿಕವಾಗಿ ಮಾತನಾಡಿದರು.

ದಲಿತ ಮಹಾಸಭಾದ ರಾಜ್ಯ ಉಪಾಧ್ಯಕ್ಷ ವೆಂಕಟರಮಣಸ್ವಾಮಿ, (ಪಾಪು), ಛಲವಾದಿ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಹಂಸರಾಜು, ಡಾ. ಬಿ.ಆರ್. ಅಂಬೇಡ್ಕರ್ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ಕೆ. ಮಂಜುನಾಥ್, ಡಿಎಸ್‌ಎಸ್ ಸಂಚಾಲಕ ಕೆ.ಎಂ.ನಾಗರಾಜು, ಸಂಯೋಜಕ ಸಿ.ಎಂ. ಶಿವಣ್ಣ, ನಗರಸಭಾ ಸದಸ್ಯ ಆರ್.ಪಿ. ನಂಜುಂಡಸ್ವಾಮಿ, ಕೆ. ಶಿವರಾಂ ಅಳಿಯ ಭರತ್, ಛಲವಾದಿ ಮಹಾಸಭಾದ ಮೈಕೋ ನಾಗರಾಜು ಇದ್ದರು.