ಸಾರಾಂಶ
ಕೃಷಿಕರ ಬದುಕು ಹಸನಾಗಬೇಕೆಂಬ ಅಚಲ ನಿಷ್ಠೆ ಹೊಂದಿದ್ದ ಜನನಾಯಕ, ಬೆಳೆವಿಮೆ ಹರಿಕಾರ ದಿ.ಸಿ.ಎಂ. ಉದಾಸಿ ಅವರು ನೀರಾವರಿ ಯೋಜನೆಗಳೇ ರೈತನ ಜೀವನಾಡಿ ಎಂದು ಕೆಲಸ ಮಾಡಿದರು ಎಂದು ಮಾಜಿ ಶಾಸಕ ಶಿವರಾಜ ಸಜ್ಜನ ತಿಳಿಸಿದರು.
ಹಾನಗಲ್ಲ: ಕೃಷಿಕರ ಬದುಕು ಹಸನಾಗಬೇಕೆಂಬ ಅಚಲ ನಿಷ್ಠೆ ಹೊಂದಿದ್ದ ಜನನಾಯಕ, ಬೆಳೆವಿಮೆ ಹರಿಕಾರ ದಿ.ಸಿ.ಎಂ. ಉದಾಸಿ ಅವರು ನೀರಾವರಿ ಯೋಜನೆಗಳೇ ರೈತನ ಜೀವನಾಡಿ ಎಂದು ಕೆಲಸ ಮಾಡಿದರು ಎಂದು ಮಾಜಿ ಶಾಸಕ ಶಿವರಾಜ ಸಜ್ಜನ ತಿಳಿಸಿದರು.
ಭಾನುವಾರ ಹಾನಗಲ್ಲಿನ ಸದಾಶಿವ ಮಂಗಲ ಭವನದಲ್ಲಿ ಆಯೋಜಿಸಿದ ದಿ. ಸಿ.ಎಂ.ಉದಾಸಿ ಅವರ ೮೯ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಉದಾಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಜನಪ್ರತಿನಿಧಿಯಾಗಿ ಜನತೆಯ ಅಭಿವೃದ್ಧಿಯ ರಾಜಕಾರಣಿ ಸಿ.ಎಂ. ಉದಾಸಿ ಅತ್ಯಂತ ಮಾರ್ಗದರ್ಶಿಯಾಗಿದ್ದರು. ರೈತರಿಗೆ ಬೆಳೆ ವಿಮೆ ತುಂಬಲು ತರಬೇತಿ ನೀಡಿಸುತ್ತಿದ್ದರು. ಹೀಗಾಗಿಯೇ ಹಾನಗಲ್ಲ ತಾಲೂಕು ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆವಿಮೆ ಪಡೆದ ಉದಾಹರಣೆಗಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ನೀರಾವರಿಗೆ ಆದ್ಯತೆ ನೀಡುತ್ತಿಲ್ಲ ಎಂಬ ಖೇದವಿದೆ. ರೈತರ ಕೃಷಿ ಭೂಮಿಗೆ ನೀರಾವರಿಗಾಗಿ ನೀರು ಕೊಡಿ, ರೈತರೇ ಸರಕಾರಕ್ಕೆ ಸಾಲ ಕೊಡುತ್ತಾರೆ ಎಂದು ಶಿವರಾಜ ಸಜ್ಜನ ಮನವಿ ಮಾಡಿದರು.ಮಾಜಿ ಜಿಪಂ ಸದಸ್ಯ ಬಸವರಾಜ ಹಾದಿಮನಿ ಮಾತನಾಡಿ, ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾನು ಹಾನಗಲ್ಲ ತಾಲೂಕಿನ ಶಾಸಕನಂತೆ ಈ ತಾಲೂಕಿನ ಜನತೆಯ ರಕ್ಷಣೆಗೆ ಅಭಿವೃದ್ಧಿಗೆ ಮುಂದಾಗುತ್ತೇನೆ ಎಂದು ಘೋಷಣೆ ಮಾಡಿದ್ದರು. ಆದರೆ ಅವರು ಹಾನಗಲ್ಲ ತಾಲೂಕಿನತ್ತ ಬರುತ್ತಿಲ್ಲ. ಅಲ್ಲದೆ ದಿ.ಸಿ.ಎಂ.ಉದಾಸಿ ಅವರ ಆತ್ಮಕ್ಕೆ ಶಾಂತಿ ಕೋರುವುದಾದರೆ ವರದಾ ಬೇಡ್ತಿ ನದಿ ಜೋಡಣೆಯನ್ನು ಅವರ ಈ ಅವಧಿಯಲ್ಲಿ ಸಾಧ್ಯ ಮಾಡಿದರೆ ಅದೇ ನಿಜವಾಗಿಯೂ ದಿ.ಸಿ.ಎಂ.ಉದಾಸಿ ಅವರಿಗೆ ಸಲ್ಲಿಸುವ ಗೌರವಾಗಿದೆ. ನಮ್ಮ ಜನಪ್ರತಿನಿಧಿಗಳು ರೈತರಿಗೆ ಉಪಕಾರ ಮಾಡುವುದಾದರೆ ಮೊದಲು ನೀರಾವರಿ ಯೋಜನೆಗಳನ್ನು ಜಾರಿಗೆ ತರಲಿ. ಉದಾಸಿ ಅವರು ಬಾಳಂಬೀಡ ಸೇರಿದಂತೆ ಹಲವು ನೀರಾವರಿ ಯೋಜನೆಗಳನ್ನು ರೈತರಿಗಾಗಿ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ ತಮ್ಮ ಇಚ್ಛಾಶಕ್ತಿಯನ್ನು ವರದಾ ಬೇಡ್ತಿ ನದಿ ಜೋಡಣೆಯಲ್ಲಿ ಸಾರ್ಥಕವಾಗಿ ಮಾಡಲಿ ಎಂದರು.ಮಾಜಿ ಜಿಪಂ ಸದಸ್ಯ ಪದ್ಮನಾಭ ಕುಂದಾಪೂರ ಮಾತನಾಡಿ, ದಿ.ಸಿ.ಎಂ.ಉದಾಸಿ ಆಲದ ಮರದಂತೆ ನೆರಳು ಆಶ್ರಯ ನೀಡಿದ್ದರು. ಆದರೆ ಈಗ ನಮ್ಮ ತಾಲೂಕಿನ ಜನತೆಯನ್ನು ಅದರಲ್ಲೂ ಬಿಜೆಪಿ ಕಾರ್ಯಕರ್ತರನ್ನು ಅಭಿವೃದ್ಧಿಯಲ್ಲಿ, ವಿವಿಧ ಸಮಸ್ಯೆಗಳಲ್ಲಿ ಕಾಪಾಡುವ ನಾಯಕರಿಲ್ಲದಂತಾಗಿ ಅನಾಥರಾಗಿದ್ದೇವೆ. ನಮ್ಮ ಪಕ್ಷದ ಕಾರ್ಯಕರ್ತರಂತೂ ಈ ಅವಧಿಯಲ್ಲಿ ಭಯಭೀತರಾಗಿದ್ದಾರೆ. ಉದಾಸಿ ಅವರಿಲ್ಲದ ದಿನಗಳನ್ನು ನೆನಪಿಸಲೂ ಆಗುತ್ತಿಲ್ಲ. ಬಿಜೆಪಿ ಕಾರ್ಯಕರ್ತರು ನಾಯಕರು ಯಾರಿಗೆ ಯಾರೂ ಸಂಬಂಧವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿರುವುದು ಖೇದದ ಸಂಗತಿ. ಇನ್ನಾದರೂ ಬಿಜೆಪಿ ನಾಯಕರು, ಕಾರ್ಯರ್ತರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.ಬಿಜೆಪಿ ತಾಲೂಕು ಅಧ್ಯಕ್ಷ ಮಹೇಶ ಕಮಡೊಳ್ಳಿ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಕಟ್ಟೇಗೌಡರ, ಶಿವಲಿಂಗಪ್ಪ ತಲ್ಲೂರ, ನಾಯಕರಾದ ಸಿದ್ದಲಿಂಗಪ್ಪ ಶಂಕ್ರಿಕೊಪ್ಪ, ರಾಜಣ್ಣ ಗೌಳಿ, ಕಲ್ಯಾಣಕುಮಾರ ಶೆಟ್ಟರ, ಚಂದ್ರಪ್ಪ ಹರಿಜನ, ರವಿರಾಜ ಕಲಾಲ, ಮಹೇಶ ಬಣಕಾರ, ಸಿದ್ದನಗೌಡ ಪಾಟೀಲ, ಬಸವಣ್ಣೆಪ್ಪ ಬೆಂಚಳ್ಳಿ, ಎಸ್.ಎಂ.ಕೋತಂಬರಿ, ಸಿದ್ದಲಿಂಗಪ್ಪ ಕಮಡೊಳ್ಳಿ, ರಾಘವೇಂದ್ರ ತಹಸೀಲ್ದಾರ್, ರಾಮನಗೌಡ ಪಾಟೀಲ, ನಿಜಲಿಂಗಪ್ಪ ಮುದೆಪ್ಪನವರ, ಹಸೀನಾ ನಾಯ್ಕನವರ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.