ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಕದಲೂರು ಉದಯ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು 3 ವರ್ಷಗಳು ಯಶಸ್ವಿಯಾಗಿ ಪೂರೈಸಿದ ಸವಿನೆನಪಿಗಾಗಿ ಭಾರತೀನಗರದಲ್ಲಿ ಮಾ.4ರಂದು ಉದಯಯಾನ-2.0 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ.ಎಂ. ಉದಯ್ ಹೇಳಿದರು.ಪಟ್ಟಣದ ಶಾಸಕರ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಸ್ಟ್ ಮೂಲಕ ಅನೇಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಕೂಲಿಕಾರರಿಗೆ, ಬಡವರಿಗೆ, ಶ್ರಮಿಕರಿಗೆ, ರೈತರಿಗೆ ಸೇರಿದಂತೆ ಪ್ರತಿಯೊಂದು ವರ್ಗಕ್ಕೂ ಅನುಕೂಲವಾಗಲು ಹಲವು ಜನ ಉಪಯೋಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಕಾರ್ಯಕ್ರಮವನ್ನು ಚಿತ್ರನಟ ದರ್ಶನ್ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮ ರಾಜಕೀಯ ಹೊರತಾಗಿದ್ದು, ಯಾವುದೇ ರಾಜಕೀಯ ನಾಯಕರು ಭಾಗವಹಿಸುವುದಿಲ್ಲ. ಟ್ರಸ್ಟ್ ನ ಟ್ರಸ್ಟಿಗಳು ಮಾತ್ರ ಉಪಸ್ಥಿತರಿರುತ್ತಾರೆ ಎಂದರು.ಮದ್ದೂರು ಪಿಎಲ್ ಡಿ ಬ್ಯಾಂಕಿನಲ್ಲಿ ಸುಸ್ತಿದಾರರ ಸಾಲದ ಮೊತ್ತವನ್ನು ಟ್ರಸ್ಟ್ ವತಿಯಿಂದ ಪಾವತಿಸಲಾಗುವುದು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹೆಣ್ಣು ಮಕ್ಕಳಿಗೆ ಜೀವನೋಪಾಯಕ್ಕಾಗಿ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡಲಾಗುವುದು. ಶ್ರಮಿಕ ರೈತರಿಗೆ ಮರ ಹತ್ತುವ ಏಣಿಗಳನ್ನು ಉಚಿತವಾಗಿ ನೀಡಲಾಗುವುದು ಎಂದರು.
ಭಾರತೀನಗರ ಮತ್ತು ಚಿಕ್ಕರಸಿನಕೆರೆ ಜಿಪಂ ವ್ಯಾಪ್ತಿಗೆ ಶವ ಸಾಗಿಸುವ ಒಂದು ವಾಹನಗಳನ್ನು ನೀಡಲಾಗುವುದು. ಆಯ್ದ ಪದವಿ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ, ತಾಲೂಕಿನ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಕ್ಷರ ದಾಸೋಹ ಸಿಬ್ಬಂದಿಗೆ ಸಮವಸ್ತ್ರವನ್ನು ವಿತರಣೆ ಮಾಡಲಾಗುವುದು ಎಂದರು.ಆಲಭುಜನಹಳ್ಳಿ ಬಸವೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬಸವ ರಥವನ್ನು ವಿತರಣೆ ಮಾಡಲಾಗುವುದು. ಸುಮಾರು 20 ಸಾವಿರಕ್ಕೂ ಹೆಚ್ಚಿನ ಮಂದಿ ಭಾಗವಹಿಸಲಿದ್ದು ಎಲ್ಲರಿಗೂ ಕುಡಿಯುವ ನೀರು, ಊಟದ ವ್ಯವಸ್ಥೆ ಹಾಗೂ ಇನ್ನಿತರ ಮೂಲಸೌಕರ್ಯ ಒದಗಿಸಲಾಗಿದೆ ಎಂದರು.ಮಂಡ್ಯದಲ್ಲಿ ಸಿ.ಡಿ.ಗಂಗಾಧರ್ ಅಧಿಕಾರ ಸ್ವೀಕಾರ
ಮಂಡ್ಯ:ಮೈಷುಗರ್ ಕಾರ್ಖಾನೆ ನೂತನ ಅಧ್ಯಕ್ಷರಾಗಿರುವ ಸಿ.ಡಿ.ಗಂಗಾಧರ್ ಅವರು ಮಂಡ್ಯ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಹಾಗೂ ಆಡಳಿತ ಕಚೇರಿ ಉದ್ಘಾಟನೆ ಮಾ.4ರಂದು ಮಧ್ಯಾಹ್ನ 12 ರಿಂದ 1ರವರೆಗೆ ನಡೆಯಲಿದೆ. ಕೃಷಿ, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹೀಗಾಗಿ ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಮುಖಂಡರು, ಮುಂಚೂಣಿ ಘಟಕದ ಅಧ್ಯಕ್ಷರು, ಉಸ್ತುವಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಆಗಮಿಸಬೇಕು ಎಂದು ಕೆ.ಆರ್.ಪೇಟೆ ಉಸ್ತುವಾರಿ ಸಿ.ಆರ್.ರಮೇಶ್ ಹಾಗೂ ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಎನ್.ಕೃಷ್ಣೇಗೌಡ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.