ಇಷ್ಟಾರ್ಥ ಸಿದ್ಧಿಗೆ ಜನರು ಕುಟುಂಬ ಸಮೇತ ಬಂದು ದೀರ್ಘ ದಂಡ ನಮಸ್ಕಾರ ಹಾಕಿ ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು

ಗಂಗಾವತಿ: ಸಮೀಪದ ಚಿಕ್ಕಡಂಕನಕಲ್ ಗ್ರಾಮದ ಹೊರ ಹೊಲಯದಲ್ಲಿರುವ ಉದ್ಭವ ಮೂರ್ತಿ ಶ್ರೀಕೆರೆಮಾರುತೇಶ್ವರ ದೇವರ ಜಾತ್ರೆ ಶನಿವಾರ ಶ್ರದ್ಧಾ ಭಕ್ತಿಯಿಂದ ಜರುಗಿತು.

ಪ್ರತಿ ವರ್ಷದಂತೆ ಈ ಬಾರಿಯು ಕಾರ್ತಿಕೋತ್ಸವದ ಅಂಗವಾಗಿ ಗ್ರಾಮದ ಕೆರೆಮಾರುತೇಶ್ವರ ದೇವರ ಜಾತ್ರೆ ಅಂಗವಾಗಿ ಬೆಳಗ್ಗೆ ವಿಗ್ರಹ ಮೂರ್ತಿಗೆ ವಿಶೇಷ ರುದ್ರಾಭೀಷೇಕ ಪೂಜೆ ಹಾಗೂ ಇಷ್ಟಾರ್ಥ ಸಿದ್ಧಿಗೆ ಜನರು ಕುಟುಂಬ ಸಮೇತ ಬಂದು ದೀರ್ಘ ದಂಡ ನಮಸ್ಕಾರ ಹಾಕಿ ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

ಉಚ್ಛಾಯ ಉತ್ಸವ ಮೆರವಣಿಗೆ:

ಪ್ರತಿ ವರ್ಷದಂತೆ ಕಾರ್ತಿಕೋತ್ಸವ ಅಂಗವಾಗಿ ಶ್ರೀಕೆರೆಮಾರುತೇಶ್ವರ ದೇವರ ಉಚ್ಛಾಯ ಉತ್ಸವದ ಮೆರವಣಿಗೆ ಸಂಜೆ ಅದ್ಧೂರಿಯಾಗಿ ಡೊಳ್ಳು ಬಾರಿಸುವುದರ ಜತೆಗೆ ಮೆರವಣಿಗೆಯು ದೇವಾಲಯದಿಂದ ಎದುರು ಬಸವಣ್ಣ ಪಾದುಗಟ್ಟೆಯವರೆಗೆ ಮೆರವಣಿಗೆ ನಡೆಯಿತು. ವಿಶೇಷವಾಗಿ ಗ್ರಾಮದ ಮಹಿಳೆಯರು ಪುರುಷರೊಂದಿಗೆ ಜೊತೆಗೂಡಿ ತಾವೇ ಸ್ವತಃ ದೇವರ ಉಚ್ಛಾಯ ಎಳೆಯುವ ಮೂಲಕ ಗಮನ ಸೆಳೆದರು.

ಗ್ರಾಮದ ಕೆರೆ ಮಾರುತೇಶ್ವರ ಸೇವಾ ಟ್ರಸ್ಟ್ ವತಿಯಿಂದ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಸುಗಮ ದರ್ಶನದ ವ್ಯವಸ್ಥೆ ಹಾಗೂ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಚಿಕ್ಕಡಂಕನಕಲ್ ಗ್ರಾಮಸ್ಥರು ಹಾಗೂ ಸುತ್ತಲಿನ ಹಳ್ಳಿಯ ಭಕ್ತರು ಭಾಗವಹಿಸಿದ್ದರು.