ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮ

| Published : Feb 04 2025, 12:33 AM IST

ಸಾರಾಂಶ

ಮಾಘ ಮಾಸದ ವಸಂತ ಪಂಚಮಿಯ ವಿಶೇಷ ದಿನವಾದ ಸೋಮವಾರ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮದೇವತೆ ದ್ಯಾಮವ್ವ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಭಕ್ತಿಯಿಂದ ಜರುಗಿತು.

ಲಕ್ಷ್ಮೇಶ್ವರ: ಮಾಘ ಮಾಸದ ವಸಂತ ಪಂಚಮಿಯ ವಿಶೇಷ ದಿನವಾದ ಸೋಮವಾರ ತಾಲೂಕಿನ ಅಡರಕಟ್ಟಿ ಗ್ರಾಮದೇವತೆ ದ್ಯಾಮವ್ವ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಭಕ್ತಿಯಿಂದ ಜರುಗಿತು.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ದೇವಿಗೆ ವಿಶೇಷ ಅಲಂಕಾರ, ಪೂಜೆ ನಡೆದವು. ದೇವಸ್ಥಾನವನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದಲೇ ಗ್ರಾಮದ ತುಂಬೆಲ್ಲ ಮಹಿಳೆಯರು ದೇವಸ್ಥಾನಕ್ಕೆ ಆಗಮಿಸಲಾರಂಭಿಸಿದ್ದರು. ಗ್ರಾಮದ ನೂರಾರು ಮಹಿಳೆಯರು ದೇವಿಗೆ ಉಡಿ ತುಂಬಿದರು. ಆನಂತರ ಮಹಿಳೆಯರು ಪರಸ್ಪರ ಉಡಿ ತುಂಬಿಕೊಂಡರು. ಭಕ್ತರಿಗೆ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಗ್ರಾಮಸ್ಥರಿಗೆ ಯಾವುದೇ ಕಷ್ಟ-ಕಾರ್ಪಣ್ಯ ಬರಬಾರದು, ಗ್ರಾಮದಲ್ಲಿ ಸುಖ-ಶಾಂತಿ ನೆಲೆಸಲಿ ಎಂಬ ಉದ್ದೇಶದಿಂದ ಕಳೆದ ನಾಲ್ಕೈದು ವರ್ಷಗಳಿಂದ ನಾವು ಮಾಘ ಮಾಸದ ವಸಂತ ಪಂಚಮಿಯ ದಿನ ದೇವಿಗೆ ಉಡಿ ತುಂಬುವ ಕಾರ್ಯ ನಡೆಸಿಕೊಂಡು ಬರುತ್ತಿದ್ದೇವೆ.. ನಮ್ಮ ಇಷ್ಟಾರ್ಥ ನೆರವೇರಿದ್ದು, ಗ್ರಾಮಸ್ಥರು ಸಹೋದರತೆಯಿಂದ ಜೀವನ ಸಾಗಿಸುತ್ತಿದ್ದೇವೆ ಎಂದು ಗ್ರಾಮಸ್ಥರಾದ ಚೆನ್ನಪ್ಪ ಹಳಮನಿ ಮತ್ತು ನಿಂಗನಗೌಡ ಪಾಟೀಲ ಹೇಳಿದರು.

ಮಾಘ ಮಾಸದ ವಸಂತ ಪಂಚಮಿ ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರ ದಿನ. ಈ ದಿನ ನಾವು ದೇವರಿಗೆ ಪೂಜೆ, ಹೋಮ-ಹವನ ಮಾಡುವುದರಿಂದ ಬದುಕಿನಲ್ಲಿ ಶಾಂತಿ-ಸಮಾಧಾನ ಲಭಿಸುತ್ತದೆ ಎಂದು ಇಲ್ಲಿ ಪ್ರತೀತಿ ಇದೆ. ಹೀಗಾಗಿ ಪ್ರತಿವರ್ಷ ಈ ದಿವಸ ಹಬ್ಬದ ರೀತಿಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುತ್ತಾರೆ ಎಂದು ಅರ್ಚಕ ಈರಣ್ಣ ಬಡಿಗೇರ ಹೇಳಿದರು.