ಉಡುಪಿ ಕಥೊಲಿಕ ಧರ್ಮಪ್ರಾಂತ್ಯ ಜುಬಿಲಿ ವರ್ಷ 2025ರ ಸಮಾರೋಪ ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ನಡೆಯಿತು.
ಉಡುಪಿ: ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಭರವಸೆಯ ಜುಬಿಲಿ ವರ್ಷ-2025ರ ಸಮಾರೋಪ ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ನಡೆಯಿತು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಪವಿತ್ರ ಬಲಿಪೂಜೆ ನೇತೃತ್ವ ವಹಿಸಿ ಸಂದೇಶ ನೀಡಿದರು. 2024ರ ಡಿಸೆಂಬರ್ ತಿಂಗಳಿನಲ್ಲಿ ಜುಬಿಲಿ ವರ್ಷಕ್ಕೆ ಚಾಲನೆ ನೀಡಿದ್ದು, ಭರವಸೆ ನಮ್ಮನ್ನು ನಿರಾಸೆಗೊಳಿಸದು ಎಂಬ ಧ್ಯೇಯದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಸಾಕಾರಗೊಳಿಸಿದ್ದೇವೆ. ಜುಬಿಲಿ ವರ್ಷದ ಅಂಗವಾಗಿ ಧರ್ಮಪ್ರಾಂತ್ಯ ಪ್ರತಿ ಕ್ರೈಸ್ತ ಮನೆಗಳಿಗೆ ಪವಿತ್ರ ಶಿಲುಬೆಯ ಸಂಚಾರವನ್ನು ಮಾಡಿ ಅದರ ಆರಾಧನೆ ಮೂಲಕ ಧಾರ್ಮಿಕತೆಯಲ್ಲಿ ನಮ್ಮನ್ನು ನಾವೇ ಗಟ್ಟಿಗೊಳಿಸಿಕೊಂಡಿದ್ದೇವೆ. ಜುಬಿಲಿ ವರ್ಷ ಕೊನೆಗೊಳ್ಳಬಹುದು, ಆದರೆ ನಮ್ಮ ಜೀವವನ್ನು ಭರವಸೆಯೊಂದಿಗೆ ಬದುಕಿ ಯಾವುದೇ ರೀತಿಯ ನಿರಾಶೆ, ನಕಾರಾತ್ಮಕ ಚಿಂತನೆಗಳಿಗೆ ಅವಕಾಶ ನೀಡದೆ ದೇವರ ವಾಕ್ಯದ ಮೇಲಿನ ಭರವಸೆಯೊಂದಿಗೆ ಮುನ್ನಡೆಯೋಣ ಎಂದರು.
ಸಮಾರೋಪ ಸಮಾರಂಭದಲ್ಲಿ ಜುಬಿಲಿ ಅಧಿಕೃತ ವಿಧಿಗಳನ್ನು ಪಾಲಿಸುವುದರೊಂದಿಗೆ ಕ್ಯಾಥೆಡ್ರಲ್ ವ್ಯಾಪ್ತಿಯ ಮನೆ ಮನೆಗಳಿಗೆ ಹಸ್ತಾಂತರಿಸಿದ್ದ ಪವಿತ್ರ ಶಿಲುಬೆಗಳನ್ನು ವಾಪಸ್ ಚರ್ಚಿಗೆ ಗೌರವಪೂರ್ವಕವಾಗಿ ತರಲಾಯಿತು. ವರ್ಷವಿಡೀ ಬಲಿ ಪೀಠದ ಬಳಿ ಇರಿಸಲಾಗಿದ್ದ ಅಲಂಕೃತ ಜುಬಿಲಿ ಶಿಲುಬೆಯ ಆಶೀರ್ವಚನದೊಂದಿಗೆ ಈ ವರ್ಷದ ಆಧ್ಯಾತ್ಮಿಕ ಪಯಣವನ್ನು ನೆನಪಿಸುವ ಮತ್ತು ಚರ್ಚ್ ಹಾಗೂ ಲೋಕದ ಶಾಂತಿಗಾಗಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಷಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಧರ್ಮಪ್ರಾಂತ್ಯದ ಕಥೊಲಿಕ ಶಿಕ್ಷಣ ಮಂಡಳಿ ಕಾರ್ಯದರ್ಶಿ ವಂ.|ವಿನ್ಸೆಂಟ್ ಕ್ರಾಸ್ತಾ, ಧಾರ್ಮಿಕ ಸಭೆಗಳ ಎಪಿಸ್ಕೋಪಲ್ ವಿಕಾರ್ ವಂ. ಜ್ಯೋ ತಾವ್ರೊ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಸಹಾಯಕ ಧರ್ಮಗುರು ವಂ. ಪ್ರದೀಪ್ ಕಾರ್ಡೋಜಾ, ಅನುಗ್ರಹ ಪಾಲನಾ ಕೇಂದ್ರದ ವಂ. ಅಶ್ವಿನ್ ಅರಾನ್ಹಾ ಹಾಗೂ ಇತರ ಅತಿಥಿ ಧರ್ಮಗುರುಗಳು ಉಪಸ್ಥಿತರಿದ್ದರು.