ಸಾರಾಂಶ
ಸುಭಾಶ್ಚಂದ್ರ ಎಸ್.ವಾಗ್ಳೆ
ಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲೆಯ ಮಟ್ಟಿಗೆ 2023 ವಿವಾದಗಳಲ್ಲಿಯೇ ಕಳೆದುಹೋಯಿತು. ಈ ವರ್ಷ ಜಿಲ್ಲೆಯಲ್ಲಿ ಎರಡು ಅನಪೇಕ್ಷಿತ ಘಟನೆಗಳಿಂದಾಗಿ ರಾಷ್ಟ್ರಮಟ್ಟದಲ್ಲಿ ಸುದ್ದಿಗೆ ಕಾರಣವಾಯಿತು.
ಮೊದಲೆನೆಯದ್ದು ನಗರದ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ನಡೆದ ಟಾಯ್ಲೆಟ್ ವಿಡಿಯೋ ಪ್ರಕರಣ, ಎರಡನೆಯದ್ದು ವ್ಯಕ್ತಿಯೊಬ್ಬ ಒಂದೇ ಕುಟುಂಬದ 4 ಮಂದಿಯನ್ನು ಇರಿದು ಕೊಲೆ ಮಾಡಿದ್ದು.ಈ ಎರಡೂ ಪ್ರಕರಣಗಳು ಉಡುಪಿ ಜಿಲ್ಲೆ ಮಾತ್ರವಲ್ಲ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದವು. ಉಳಿದಂತೆ ಒಂದಷ್ಟು ರಾಜಕೀಯ ವಿಷಯಗಳು ಇಡೀ ವರ್ಷ ಜನರ ಬಾಯಿಗೆ ತಾಂಬೂಲಗಳಾದವು.
ಧಾರ್ಮಿಕ - ಸಾಂಸ್ಕೃತಿಕ: ಫೆಬ್ರವರಿ ತಿಂಗಳಲ್ಲಿ ಐತಿಹಾಸಿಕ ಪ್ರಥಮ ಯಕ್ಷಗಾನ ಮಹಾಸಮ್ಮೇಳನ ಉಡುಪಿಯಲ್ಲಿ ಯಕ್ಷವಿದ್ವಾಂಸ ಡಾ.ಪ್ರಭಾಕರ ಜೋಷಿ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಪುತ್ತಿಗೆ ಮಠದ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ಮೇ ತಿಂಗಳಲಿ ಅಕ್ಕಿ ಮುಹೂರ್ತ, ಜುಲೈಯಲ್ಲಿ ಕಟ್ಟಿಗೆ ಮುಹೂರ್ತಗಳು ನಡೆದವು.ರಾಜಕೀಯ ತಿರುವು:
ಏಪ್ರಿಲ್ ತಿಂಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಕುಂದಾಪುರದ ವಾಜಪೇಯಿ, 5 ಬಾರಿ ಅಜೇಯ ಶಾಸಕರಾಗಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ಸನ್ಯಾಸ ಸ್ವೀಕರಿಸಿ, ತನ್ನ ಶಿಷ್ಯ ಕಿರಣ್ ಕೊಡ್ಗಿ ಅವರಿಗೆ ತನ್ನ ಗೆಲ್ಲುವ ಟಿಕೆಟ್ ಬಿಟ್ಟುಕೊಟ್ಟರು. ಈ ಮೂಲಕ ರಾಜಕಾರಣದಲ್ಲಿ ಇತರರಿಗೆ ಮಾದರಿಯಾದರು.ಏಪ್ರಿಲ್ ನಲ್ಲಿ ಚುನಾವಣಾ ಪ್ರಚಾರಕ್ಕಾಗಿ ರಾಹುಲ್ ಉಚ್ಚಿಲಕ್ಕೆ ಭೇಟಿ ನೀಡಿ ಕಾಂಗ್ರೆಸ್ಸಿನ 2 ಗ್ಯಾರಂಟಿಗಳನ್ನು ಘೋಷಿಸಿದರು.
ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಮತ್ತೆ ಬಿಜೆಪಿ ಎಲ್ಲಾ 5 ವಿಧಾನಸಭಾ ಸ್ಥಾನಗಳನ್ನು ಗೆದ್ದು ಬೀಗಿತು. ಕಾಂಗ್ರೆಸ್ ಗೆಲ್ಲದಿದ್ದರೂ ಜಿಲ್ಲೆಯಲ್ಲಿ ತನ್ನ ಮತಬ್ಯಾಂಕ್ ಹೆಚ್ಚಿಸಿಕೊಂಡಿದ್ದು ಮತ್ತು ಹೊಸ ನಾಯಕರನ್ನು ಮುಂಚೂಣಿಗೆ ತಂದದ್ದು ಸಾಧನೆಯಾಯಿತು.ಜುಲೈನಲ್ಲಿ ಕೇಂದ್ರ ವಿತ್ತ ಸಚಿವೆ ಮಣಿಪಾಲದಲ್ಲಿ ನಡೆದ ಬಿಜೆಪಿಯ ಪ್ರಬುದ್ಧರ ಸಭೆಯಲ್ಲಿ ಉಪನ್ಯಾಸ ನೀಡಿದರು.
ಅಸಲಿ - ನಕಲಿ ಸುದ್ದಿ:ಕಾರ್ಕಳದ ಉಮಿಕಲ್ ಬೆಟ್ಟದಲ್ಲಿ 10 ಕೋಟಿ ರು. ನೆಚ್ಚದಲ್ಲಿ ಸ್ಥಾಪಿಸಲಾಗಿರುವ 33 ಅಡಿ ಎತ್ತರದ ಪರಶುರಾಮನ ವಿಗ್ರಹ ಕೂಡ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ವಿಗ್ರಹ ಕಂಚಿದನದ್ದಲ್ಲ, ಇದು ನಕಲಿ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಇದರ ರೂವಾರಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಇದು ನಕಲಿಯಲ್ಲ, ಕಂಚಿನದು ಎನ್ನುತ್ತಿದ್ದಾರೆ. ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಇದು ಕಠಿಣ ಸುದ್ದಿ:ಪೆಬ್ರವರಿ ತಿಂಗಳಲ್ಲಿ ಮಣಿಪಾಲದ ಮಾಹೆಯು ಕಠಿಣ ನಿರ್ಧಾರ ತೆಗೆದುಕೊಂಡು, ಮಾದಕ ವಸ್ತು ಸೇವನೆಯ ಹಿನ್ನೆಲೆಯಲ್ಲಿ ತನ್ನ 42 ಮಂದಿ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದು ಕೂಡ ರಾಜ್ಯಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತು. ಜಿಲ್ಲೆಯ ಖ್ಯಾತಿಗೆ ಮಸಿ: ವಿಡಿಯೋ ಪ್ರಕರಣ
ಜುಲೈ ತಿಂಗಳಲ್ಲಿ ನಗರದ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ಕೆಲವು ವಿದ್ಯಾರ್ಥಿನಿಯರು ಇನ್ನೊಂದು ಕೋಮಿನ ವಿದ್ಯಾರ್ಥಿಯ ವಿಡಿಯೋ ಚಿತ್ರೀಕರಣ ಮಾಡಿದ್ದು, ಜಿಲ್ಲೆಯ ಶೈಕ್ಷಣಿಕ ಖ್ಯಾತಿಗೆ ಮಸಿ ಬಳಿಯಿತು.ಇದು ಉಭಯ ಕೋಮುಗಳ, ರಾಜಯಕೀಯ ಪಕ್ಷ ನಡುವೆ ಕೆಸರೆಚಾಟಕ್ಕೂ ಕಾರಣವಾಯಿತು. ರಾಷ್ಟ್ರೀಯ ಮಹಿಳಾ ಆಯೋಗವೂ ಉಡುಪಿಗೆ ಬಂದು ಹೋಯಿತು. ಪ್ರಕರಣವನ್ನು ಉಡುಪಿ ಪೊಲೀಸರ ಕೈಯಿಂದ ಸಿಐಡಿಗೆ ಹಸ್ತಾಂತರಿಸಲಾಯಿತು. ಇದೀಗ ಪ್ರಕರಣ ನ್ಯಾಯಾಲಯದಲ್ಲಿದೆ
ಈ ಘಟನೆಗೆ ಸಂಬಂಧಪಟ್ಟಂತೆ ಪ್ರಚೋದನಾಕಾರಿ ಭಾಷಣ ಮಾಡಿದ ಬಗ್ಗೆ ಇಬ್ಬರು ಹಿಂದೂ ನಾಯಕರ ಮೇಲೆ ಪ್ರಕರಣ ಕೂಡ ದಾಖಲಾಗಿದೆ.ಜಿಲ್ಲೆಯ ಇತಿಹಾಸದಲ್ಲಿಯೇ ಭೀಭತ್ಸ ಕೃತ್ಯನ.12ರಂದು ಏರ್ ಇಂಡಿಯಾದಲ್ಲಿ ಉದ್ಯೋಗಿಯಾಗಿರುವ ಪ್ರವೀಣ್ ಚೌಗುಲೆ ಎಂಬಾತ ತನ್ನ ಸಹೋದ್ಯೋಗಿ ಗಗನಸಖಿ ಐನಾಜ್ ಎಂಬಾಕೆಯ ಮೇಲಿನ ವಿಪರೀತ ವ್ಯಾಮೋಹದಿಂದ ನೇಜಾರಿನಲ್ಲಿರುವ ಆಕೆಯ ಮನೆಗೆ ಬಂದು, ಅಕೆಯನ್ನು, ಜೊತೆಗೆ ಆಕೆಯ ತಾಯಿ, ಸಹೋದರಿ ಸಹೋದರನನ್ನೂ ಹಾಡಹಗಲೇ ಅತ್ಯಂತ ಭೀಭತ್ಸವಾಗಿ ಇರಿದು ಕೊಲೆ ಮಾಡಿದ.
ಈ ಗಂಭೀರ ಪ್ರಕರಣದಲ್ಲಿ ಪೊಲೀಸರು ಆರೋಪಿಯನ್ನು 72 ಗಂಟೆಯೊಳಗೆ ಬಂಧಿಸಿದರು. ಕೃತ್ಯದ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನೂ ಕಲೆ ಹಾಕಿದರು. ಆದರೆ ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿಯೇ ಇದೆ.