ಸಾರಾಂಶ
ಸಮಾನ ಮನಸ್ಕರ ತಂಡದಿಂದ ಅಗತ್ಯವುಳ್ಳ ಬಡವರಿಗಾಗಿ ನಿರ್ಮಿಸಿರುವ 25ನೇ ಮನೆ, ಕುಕ್ಕೆಹಳ್ಳಿಯ ಬಡ ಮಹಿಳೆ ಲಕ್ಷ್ಮೀ ಅವರಿಗೆ ಭಾನುವಾರ ಹಸ್ತಾಂತರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ಸಮಾನ ಮನಸ್ಕರ ತಂಡದಿಂದ ಅಗತ್ಯವುಳ್ಳ ಬಡವರಿಗಾಗಿ ನಿರ್ಮಿಸಿರುವ 25ನೇ ಮನೆ, ಕುಕ್ಕೆಹಳ್ಳಿಯ ಬಡ ಮಹಿಳೆ ಲಕ್ಷ್ಮೀ ಅವರಿಗೆ ಭಾನುವಾರ ಹಸ್ತಾಂತರಿಸಲಾಯಿತು.ನಿವೃತ್ತ ಲೋಕಾಯುಕ್ತ ಜ. ಸಂತೋಷ್ ಹೆಗ್ಡೆ ಅವರು ಮನೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಅವರು, ಇದೊಂದು ಸುಂದರ ಹಾಗೂ ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು, ಇಂತಹ ಕಾರ್ಯಕ್ರಮದಿಂದ ಸಮಾಜದ ಜನರಲ್ಲಿ ಉತ್ತಮವಾದ ಮಾನವೀಯತೆಯ ಮೌಲ್ಯವನ್ನು ಮೈಗೂಡಿಸಿಕೊಳ್ಳಲು ಸಾಧ್ಯ. ಮನುಷ್ಯರಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಮಾನವೀಯತೆಯನ್ನು ಅಳವಡಿಕೊಂಡಾಗ ಮಾನವರಾಗುತ್ತಾರೆ. ಈ ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದರು.ತಂಡದ ಮುಖ್ಯಸ್ಥರಾದ ಶಶಿಧರ ಪುರೋಹಿತ್ ಕಟಪಾಡಿ ಮಾತನಾಡಿ, ಸಮಾನ ಮನಸ್ಕರೆಂಬ ತಂಡವನ್ನು ರಚಿಸಿ ಗರಡೆಯಲ್ಲಿ ಮೊದಲ ಮನೆಯನ್ನು ನಿರ್ಮಿಸಲಾಯಿತು. ಇಂದು ಕುಕ್ಕೆಹಳ್ಳಿಯಲ್ಲಿ 25ನೇ ಮನೆ ಹಸ್ತಾಂತರಗೊಂಡಿದೆ. ಇನ್ನೂ ಮೂರು ಮನೆಗಳು ನಿರ್ಮಾಣ ಹಂತದಲ್ಲಿವೆ. ನಮ್ಮ ತಂಡದವರು ವಾಟ್ಸಾಪ್ ಗ್ರೂಪ್ ರಚಿಸುವುದರ ಮೂಲಕ ಒಂದು ಮನೆಯ ನಿರ್ಮಾಣಕ್ಕೆ 50-60 ಮಂದಿಯನ್ನು ಆ ಗ್ರೂಪ್‌ನಲ್ಲಿ ಸೇರಿಸಿಕೊಂಡು ಹಣ ಹಾಗೂ ವಸ್ತು ರೂಪದ ಮೂಲಕ ದಾನವನ್ನು ಪಡೆದು ಮನೆಗಳನ್ನು ನಿರ್ಮಿಸುತ್ತಿದ್ದೇವೆ. ಈ ವರೆಗೆ 25 ಮನೆಗಳ ನಿರ್ಮಾಣಕ್ಕಾಗಿ ಸುಮಾರು 2.50 ಕೋಟಿಯಷ್ಟು ಹಣ ವ್ಯಯಿಸಿದ್ದು, ಎಲ್ಲವೂ ದಾನಿಗಳ ನೆರವಿನಿಂದ ಸಾಧ್ಯವಾಗಿದೆ ಎಂದರು.ಈ ಸಂದರ್ಭದಲ್ಲಿ ಮಾಧವ ಆಚಾರ್ಯ ಪುತ್ತೂರು, ರಾಜಗೋಪಾಲ್ ಆಚಾರ್ಯ ಕೋಟೇಶ್ವರ, ಉಪೇಂದ್ರ ಆಚಾರ್ಯ ಪೆರ್ಡೂರ್, ರಾಘವೇಂದ್ರ ಆಚಾರ್ಯ ಕೋಟ, ಪುರಂದರ ಕೋಟ್ಯಾನ್ ಕುಕ್ಕೆಹಳ್ಳಿ, ಪ್ರಕಾಶ್ ಆಚಾರ್ಯ ಕಾರ್ಕಳ, ಸತೀಶ್ ರಾವ್ ಮಂಗಳೂರು ಹಾಗೂ ಇತರರು ಉಪಸ್ಥಿತರಿದ್ದರು.