ಉಡುಪಿ: ಶ್ರೀಕೃಷ್ಣ ಮಠದಲ್ಲಿ 3 ದಿನಗಳ ವಿಶ್ವಗೀತಾ ಸಮ್ಮೇಳನ

| Published : Mar 28 2024, 12:48 AM IST

ಸಾರಾಂಶ

ವಿಶ್ವ ಗೀತಾ ಸಮ್ಮೇಳನವನ್ನು ಮಾ.29ರಿಂದ 31ರ ವರೆಗೆ ಆಯೋಜಿಸಲಾಗಿದೆ. ಆನ್ಲೈನ್ ಮೂಲಕ ಅಮೆರಿಕ ಆಸ್ಟ್ರೇಲಿಯಾ ನೇಪಾಳ ಮುಂತಾದ ರಾಷ್ಟ್ರಗಳ ವಿದ್ವಾಂಸರು ಮತ್ತು ಭಾರತದ ವಿವಿಧ ರಾಜ್ಯಗಳ ವಿದ್ವಾಂಸರು ಪ್ರಬಂಧಗಳನ್ನು ಮಂಡಿಸುವರಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಮತ್ತು ಶ್ರೀವಾದಿರಾಜ ಸಂಶೋಧನ ಪ್ರತಿಷ್ಠಾನ ಉಡುಪಿ ಹಾಗೂ ಲೋಕಭಾಷಾ ಪ್ರಚಾರ ಸಮಿತಿ ಒರಿಸ್ಸಾ ಸಂಯುಕ್ತ ಆಶ್ರಯದಲ್ಲಿ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಕೋಟಿ ಗೀತಾ ಲೇಖನ ಯಜ್ಞದ ಹಿನ್ನೆಲೆಯಲ್ಲಿ ವಿಶ್ವ ಗೀತಾ ಸಮ್ಮೇಳನವನ್ನು ಮಾ.29ರಿಂದ 31ರ ವರೆಗೆ ಆಯೋಜಿಸಲಾಗಿದೆ.ಆನ್ಲೈನ್ ಮೂಲಕ ಅಮೆರಿಕ ಆಸ್ಟ್ರೇಲಿಯಾ ನೇಪಾಳ ಮುಂತಾದ ರಾಷ್ಟ್ರಗಳ ವಿದ್ವಾಂಸರು ಮತ್ತು ಭಾರತದ ವಿವಿಧ ರಾಜ್ಯಗಳ ವಿದ್ವಾಂಸರು ಪ್ರಬಂಧಗಳನ್ನು ಮಂಡಿಸುವರಿದ್ದಾರೆ.

ಈ ವಿಶ್ವ ಗೀತಾ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಮಾ.29ರಂದು ಬೆಳಗ್ಗೆ 9ಕ್ಕೆ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದಂಗಳವರು ನೆರವೇರಿಸಿ ಆಶೀರ್ವಚನ ನೀಡುವರು. ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಅನುಗ್ರಹ ಸಂದೇಶವನ್ನು ನೀಡುವರು.ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಒರಿಸ್ಸಾದ ಲೋಕಭಾಷಾ ಪ್ರಚಾರ ಸಮಿತಿಯ ಅಂತಾರಾಷ್ಟ್ರೀಯ ಅಧ್ಯಕ್ಷ ಡಾ. ಸದಾನಂದ ದೀಕ್ಷಿತ್, ಶ್ರೀನಿವಾಸ ವಿಶ್ವವಿದ್ಯಾಲಯ ಮಂಗಳೂರು ಇದರ ಕುಲಸಚಿವರಾದ ಡಾ.ಅಜಯ್ ಕುಮಾರ್, ಅಸ್ಸಾಂ ರಾಜ್ಯದ ಉದ್ಯಮಿಗಳು ಹಾಗೂ ಸಂಸ್ಕೃತ ಉಪನ್ಯಾಸಕರಾದ ಕುಶಲ್ ಕಲಿತಾ ಹಾಗೂ ರಾಷ್ಟ್ರದ ವಿವಿಧ ಪ್ರದೇಶಗಳಲ್ಲಿ ಸಂಸ್ಕೃತ ಪ್ರಶಿಕ್ಷಣವನ್ನು ನೀಡುತ್ತಿರುವ ರಾಜಸ್ಥಾನದ ನಿವೃತ್ತ ಪ್ರಾಚಾರ್ಯ ಡಾ. ನಿರಂಜನ್ ಸಾಹು ಮತ್ತು ಒರಿಸ್ಸಾದ ಸಂಸ್ಕೃತ ಪ್ರಾಧ್ಯಾಪಕರಾದ ಡಾ. ಬಿಪಿನ ಬಿಹಾರಿ ಶತಪಥಿ ಮತ್ತು ಮಣಿಪಾಲಿನ ಮುನಿಯಾಲು ಆಯುರ್ವೇದ ಕಾಲೇಜಿನ ಉಪ ಪ್ರಾಚಾರ್ಯರಾದ ವಿದ್ವಾನ್ ಹೆರ್ಗ ಹರಿಪ್ರಸಾದ್ ಭಟ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪರ್ಯಾಯ ಪುತ್ತಿಗೆ ಮಠದ ಪ್ರಕಟಣೆ ತಿಳಿಸಿದೆ.