ಸಾರಾಂಶ
ಕಳೆದ 12 ವರ್ಷಗಳಲ್ಲಿ ಉಡುಪಿ ಧರ್ಮಪ್ರಾಂತ್ಯದ 1157 ವಿದ್ಯಾರ್ಥಿಗಳು 5, 60, 39,500 ರು. ನೆರವನ್ನು ಸಾಲರೂಪದಲ್ಲಿ ಪಡೆದಿದ್ದು, ಶುಕ್ರವಾರ 49 ವಿದ್ಯಾರ್ಥಿಗಳು 41,05,500 ರು. ನೆರವನ್ನು ಸ್ವೀಕರಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಅನಿವಾಸಿ ಭಾರತೀಯ ಹಾಗೂ ವಿಶನ್ ಕೊಂಕಣಿ ಪ್ರವರ್ತಕ ಮೈಕಲ್ ಡಿಸೋಜ ಮತ್ತು ಕುಟುಂಬದವರಿಂದ ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಹಾಗೂ ಸೇವಾ ಸಂಘಟನೆ ಸಂಪದ ನೇತೃತ್ವದಲ್ಲಿ ಸ್ಥಾಪಿಸಲ್ಪಟ್ಟ ‘ಎಜುಕೇರ್ ಎಂಡೋಮೆಂಟ್ ಫಂಡ್’ಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಸಾಲರೂಪದ ನೆರವನ್ನು ಹಸ್ತಾಂತರಿಸುವ ಮೂಲಕ ಶುಕ್ರವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೆಂದ್ರದಲ್ಲಿ ಚಾಲನೆ ನೀಡಲಾಯಿತು.ಈ ವೇಳೆ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ, ಓದಿಗೆ ಸಹಾಯ ಮಾಡಿದವರನ್ನು ಮರೆಯದೆ, ನಾವು ಒಳ್ಳೆಯ ಸ್ಥಾನಕ್ಕೆ ಬಂದಾಗ ಕಷ್ಟದಲ್ಲಿರುವ ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಋಣ ತೀರಿಸಬೇಕು ಎಂದು ಕಿವಿಮಾತು ಹೇಳಿದರು.ಸಾಂಕೇತಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಬಡ್ಡಿರಹಿತ ಸಾಲ ರೂಪದ ನೆರವನ್ನು ಹಸ್ತಾಂತರಿಸಿ ಮಾತನಾಡಿದ ದಾನಿ ಮೈಕಲ್ ಡಿಸೋಜ, ಆರ್ಥಿಕ ಅಡಚಣೆಯಿಂದಾಗಿ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ಬಡ ಮಕ್ಕಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಈ ಕಾರ್ಯವನ್ನು ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಕೂಡ ತನ್ನ ಜೀವನದಲ್ಲಿ ಎಂದಿಗೂ ತನ್ನ ತಾಯಿ, ಮಾತೃ ಭಾಷೆ ಹಾಗೂ ಹುಟ್ಟಿದ ಊರನ್ನು ಎಂದಿಗೂ ಕೂಡ ಮರೆಯಬಾರದು ಎಂದರು.ಕಾರ್ಯಕ್ರಮದಲ್ಲಿ ‘ಎಜುಕೇರ್ ಎಂಡೋಮೆಂಟ್ ಫಂಡ್’ನ ಸಲಹೆಗಾರ ವಲೇರಿಯನ್ ಡಿಸೋಜ, ಸದಸ್ಯರಾದ ಸ್ಟೀಫನ್ ಪಿಂಟೊ, ಓಸ್ವಲ್ಡ್ ರೊಡ್ರಿಗಸ್, ಪ್ರೋ. ಲೈನಲ್ ಆರಾನ್ಹಾ, ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ, ಸಿಒಡಿಪಿ ಸಂಸ್ಥೆಯ ಲಾರೆನ್ಸ್ ಕುಟಿನ್ಹಾ, ಸಂಪದ ಸಂಸ್ಥೆಯ ಡಾ.ಎವ್ಜಿನ್ ಡಿಸೋಜ, ಡಾ.ಗ್ರೈನಲ್ ಡಿಮೆಲ್ಲೊ ಉಪಸ್ಥಿತರಿದ್ದರು.ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಸಂಪದ ಸಂಸ್ಥೆಯ ಸದಸ್ಯರಾದ ಜಾನೆಟ್ ಬಾರ್ಬೊಜಾ ವಂದಿಸಿದರು. ನಿರ್ದೇಶಕರಾದ ರೆಜಿನಾಲ್ಡ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.----------12 ವರ್ಷಗಳಲ್ಲಿ 5.60 ಕೋಟಿ ರು. ನೆರವು
ಕಳೆದ 12 ವರ್ಷಗಳಲ್ಲಿ ಉಡುಪಿ ಧರ್ಮಪ್ರಾಂತ್ಯದ 1157 ವಿದ್ಯಾರ್ಥಿಗಳು 5, 60, 39,500 ರು. ನೆರವನ್ನು ಸಾಲರೂಪದಲ್ಲಿ ಪಡೆದಿದ್ದು, ಶುಕ್ರವಾರ 49 ವಿದ್ಯಾರ್ಥಿಗಳು 41,05,500 ರು. ನೆರವನ್ನು ಸ್ವೀಕರಿಸಿದರು.ನೆರವು ಪಡೆಯುವ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಒಂದೂವರೆ ವರ್ಷದಲ್ಲಿ ನೆರವನ್ನು ಹಿಂತಿರುಗಿಸುವ ವಾಗ್ದಾನದೊಂದಿಗೆ ನೆರವನ್ನು ನೀಡಲಾಗುತ್ತದೆ. ಈ ಮೂಲಕ ಸಮಾಜದ ಇನ್ನಷ್ಟು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣ ನೆರವಾಗುವ ವಿನೂತನ ಯೋಜನೆ ಇದಾಗಿದೆ.