ಸಾರಾಂಶ
ವಾದಿರಾಜ
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ವಾದಿರಾಜ ಕನಕದಾಸ ಸಂಗೀತೋತ್ಸವ ಸಮಿತಿ ಮತ್ತು ಕನಕದಾಸ ಅಧ್ಯಯನ ಸಂಶೋಧನ ಪೀಠ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ಡಿ.6ರಿಂದ 8ರ ವರೆಗೆ ೪೬ನೇ ವಾದಿರಾಜ ಕನಕದಾಸ ಸಂಗೀತೋತ್ಸವ ಕಾರ್ಯಕ್ರಮ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಿತು.ಉತ್ಸವವನ್ನು ಉದ್ಘಾಟಿಸಿದ ಟಿ. ಮೋಹನದಾಸ ಪೈ ಕೌಶಲ್ಯ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಟಿ. ರಂಗ ಪೈ, ಈ ಉತ್ಸವ ಯುವಜನರಿಗೆ ಮಾದರಿಯಾಗಿದೆ. ಕಲೆಯನ್ನು ಆಸ್ವಾದಿಸುವವರು, ಕಲಾಕಾರರು, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಗೀತಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸಾಹಿತ್ಯ, ಸಂಗೀತ ಕೂಡಿ ಭಕ್ತಿ ರಸವನ್ನು ಉತ್ಪಾದಿಸುತ್ತದೆ. ಸಂಗೀತ ಆಸಕ್ತಿಯ ಬಗ್ಗೆ ಕೋರ್ಸ್ ಆರಂಭಿಸಿದರೆ ಮಕ್ಕಳ ಕೌಶಲ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.ನಿವೃತ್ತ ಪ್ರಾಚಾರ್ಯ ಡಾ. ಅನಿಲ್ ಕುಮಾರ್ ಶೆಟ್ಟಿ ಉಪನ್ಯಾಸ ನೀಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸರಿಗಮ ಭಾರತಿ ಸಂಗೀತ ವಿದ್ಯಾಲಯ ಪರ್ಕಳ ನಿರ್ದೇಶಕಿ ಉಮಾಶಂಕರಿ ಪ್ರಾರ್ಥಿಸಿದರು. ಡಾ. ಅರುಣ್ ಕುಮಾರ್ ಎಸ್.ಆರ್. ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಕರ್ನಾಟಕ ಕಲಾಶ್ರೀ ತಿರುಮಲೆ ಶ್ರೀನಿವಾಸ, ಬೆಂಗಳೂರು ಬಳಗದವರಿಂದ ಸಂಗೀತ ಕಚೇರಿ ನಡೆಯಿತು.